ಸಾರಾಂಶ
ಹೋರಾಟ ಮಾಡದಿದ್ದರೆ ಸ್ಥಾನಮಾನ ಸಿಗಲು ಸಾಧ್ಯವೇ?
ಕನ್ನಡಪ್ರಭ ವಾರ್ತೆ ಮಂಡ್ಯಸುಮಲತಾ ಅವರು ಸಂಸದೆಯಾಗಿ ಐದು ವರ್ಷ ಬಹಳ ಕೆಲಸ ಮಾಡಿದ್ದಾರೆ. ಇದೀಗ ಹೋರಾಟಕ್ಕಿಳಿದಿದ್ದಾರೆ. ಅದು ಅವರಿಗೆ ಅನಿವಾರ್ಯ, ಹೋರಾಟ ಮಾಡದಿದ್ದರೆ ಸ್ಥಾನಮಾನ ಸಿಗಲು ಹೇಗೆ ಸಾಧ್ಯ ಎಂದು ಮಾಜಿ ಸಂಸದೆ ಸುಮಲತಾ ಕುರಿತು ಸಚಿವ ಎನ್.ಚಲುವರಾಯಸ್ವಾಮಿ ವ್ಯಂಗ್ಯವಾಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ವಕ್ಫ್ ವಿಚಾರವಾಗಿ ಬಿಜೆಪಿ ಪ್ರತಿಭಟನೆ ಮಾಡುತ್ತಿರುವುದೇ ಹಾಸ್ಯಾಸ್ಪದ. ಬಿಜೆಪಿ ಅಧಿಕಾರದಲ್ಲಿದ್ದ ಕಾಲದಲ್ಲೇ ವಕ್ಫ್ ಖಾತೆ ಬದಲಾವಣೆಯಾಗಿದೆ. ಅವರ ನಿರ್ದೇಶನದ ಮೇರೆಗೆ ಪ್ರಕ್ರಿಯೆಗಳು ನಡೆದಿವೆ. ರೈತರಿಗೆ ಅನ್ಯಾಯವಾಗಿರುವುದು ಬಿಜೆಪಿ ಆಡಳಿತದಲ್ಲಿಯೇ ಹೊರತು ನಮ್ಮ ಅವಧಿಯಲ್ಲಲ್ಲ ಎಂದು ತಿರುಗೇಟು ನೀಡಿದರು.ಜನರ ದಿಕ್ಕು ತಪ್ಪಿಸುವುದಕ್ಕೆ ಅವರು ಮಾಡಿರುವ ತಪ್ಪನ್ನು ನಮ್ಮ ಮೇಲೆ ಹಾಕುತ್ತಿದ್ದಾರೆ. ವಕ್ಫ್‌ಗೆ ಸಂಬಂಧಿಸಿದಂತೆ ಅವರ ಕಾಲದಲ್ಲೇ ಅಧಿಸೂಚನೆಗಳು ಹೊರಬಿದ್ದಿವೆ. ಅದರಂತೆ ಈಗ ಆರ್‌ಟಿಸಿ ಬರುತ್ತಿರುವುದಾಗಿ ಹೇಳಿದರು.
------------------------------------ನಮ್ಮದು ತ್ಯಾಗದ ಕುಟುಂಬ: ಸುಮಲತಾ
ನಮ್ಮದು ತ್ಯಾಗದ ಕುಟುಂಬವೇ ವಿನಃ ಯಾವುದಕ್ಕೂ ಆಸೆ ಪಡುವ ಕುಟುಂಬ ನಮ್ಮದಲ್ಲ. ವೈಯಕ್ತಿಕ ಆಸೆಯೂ ನಮಗಿಲ್ಲ. ವೈಯಕ್ತಿಕ ಆಸೆಗಾಗಿ ರಾಜಕಾರಣ ಮಾಡುವವರ ಪಟ್ಟಿಯೇ ನಮ್ಮ ಮುಂದೆ ಇದೆ ಎಂದು ತಮ್ಮ ಕುರಿತು ಸಚಿವ ಚಲುವರಾಯಸ್ವಾಮಿ ಆಡಿರುವ ವ್ಯಂಗ್ಯದ ಮಾತುಗಳಿಗೆ ತಿರುಗೇಟು ನೀಡಿದರು.ಬಿಜೆಪಿ ಪಕ್ಷ ಸೇರಿರುವುದೇ ನನಗೆ ದೊಡ್ಡ ಸ್ಥಾನಮಾನ. ಮೋದಿ ಹಿಂದೆ ನಾವಿದ್ದು ಕೆಲಸ ಮಾಡುತ್ತಿರುವುದೇ ನಮಗೆ ಗೌರವ. ನಾನು ಮಂಡ್ಯ ಎಂಪಿ ಆಗಿದ್ದೆ. ಅಂಬರೀಶ್ ಕ್ಯಾಬಿನೆಟ್ ಮಿನಿಸ್ಟರ್ ಆಗಿದ್ದರು. ಕೇಂದ್ರದಲ್ಲಿಯೂ ಮಂತ್ರಿಯಾಗಿದ್ದರು. ಎಲ್ಲವನ್ನೂ ನೋಡಿದ್ದೇವೆ. ಇದಕ್ಕಿಂತ ಇನ್ನೇನು ಸ್ಥಾನ-ಮಾನ ಬೇಕು. ಎಲ್ಲ ಅಧಿಕಾರವನ್ನೂ ನೋಡಿದ್ದೇವೆ. ಜನಪ್ರಿಯತೆಯನ್ನು ಸಿನಿಮಾ, ರಾಜಕೀಯ ರಂಗ ಎರಡರಲ್ಲೂ ನೋಡಿದ್ದೇವೆ. ಏನೂ ಕಾಣದವರು ಆ ರೀತಿ ಮಾತನಾಡಬಹುದು ಎಂದು ಚಲುವರಾಯಸ್ವಾಮಿಗೆ ಟಾಂಗ್ ನೀಡಿದರು.