ಸಾರಾಂಶ
ಮಹದೇವಪುರ ಬಡಾವಣೆ ಸುಮಾರು 50 ವರ್ಷಗಳ ರೆವೆನ್ಯೂ ಬಡಾವಣೆಯಾಗಿದೆ. ಆದ್ದರಿಂದ ಯಾರೂ ಸಹ ಇತ್ತ ಗಮನ ಹರಿಸುತ್ತಿಲ್ಲ.
ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಮಾನಂದವಾಡಿ ರಸ್ತೆಯಲ್ಲಿರುವ ಮಹದೇವಪುರ ಬಡಾವಣೆಯು ಡೆಂಘೀಗೆ ಮಾರಕವಾಗುತ್ತಿದ್ದು, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇಲ್ಲಿನ ಸ್ವಚ್ಛತೆಗೆ ಆದ್ಯತೆ ಕೊಡದೆ ಖಾತೆ ಮಾಡಿಕೊಟ್ಟು ಹಣ ಲೂಟಿ ಮಾಡುತ್ತಿದ್ದಾರೆ, ಇದನ್ನು ವಿರೋಧಿಸಿ ಬುಧವಾರ ಮೈಸೂರು ಕನ್ನಡ ವೇದಿಕೆಯು ಶ್ರೀರಾಂಪುರ ಪಪಂ ಮುಂದೆ ಪ್ರತಿಭಟಿಸಿದರು.ಮಹದೇವಪುರ ಬಡಾವಣೆ ಸುಮಾರು 50 ವರ್ಷಗಳ ರೆವೆನ್ಯೂ ಬಡಾವಣೆಯಾಗಿದೆ. ಆದ್ದರಿಂದ ಯಾರೂ ಸಹ ಇತ್ತ ಗಮನ ಹರಿಸುತ್ತಿಲ್ಲ. ಹೆಚ್ಚಾಗಿ ಬಡವರು, ಮಧ್ಯಮ ವರ್ಗದವರು ವಾಸವಿದ್ದಾರೆ. ದಿನನಿತ್ಯ ಶಾಲಾ ಮಕ್ಕಳು, ಕಾರ್ಮಿಕರು ಹೆಚ್ಚು ಹೆಚ್ಚು ತಿರುಗಾಡುತ್ತಾರೆ. ಎ ಮತ್ತು ಬಿ ಬ್ಲಾಕ್ ನಲ್ಲಿ ನೀರಿನ ಪೈಪ್ ಅಳವಡಿಸಲು ಹೋಗಿ ಗುಂಡಿಗಳನ್ನು ತೋಡಿ ಹಳ್ಳವಾಗಿದೆ. ಕೆಲವು ಒಳಚರಂಡಿ ಚೆಂಬರ್ಗಳು ಕುಸಿದಿವೆ. ಅನೇಕ ಬಾರಿ ದೂರು ನೀಡಿದರೂ ಇದಕ್ಕೆ ಪರಿಹಾರ ದೊರಕುತ್ತಿಲ್ಲ. ಸೊಳ್ಳೆಗಳ ಕಾಟದಿಂದ ಜನ ಬೆಸೆತ್ತು ಹೋಗಿದ್ದಾರೆ. ಇದರಿಂದ ಡೆಂಘೀ ಆಗುವ ಸಂಭವ ಕಾಣುತ್ತಿದೆ. ಹಿಂದೆ ಡೆಂಘೀ ಜ್ವರದಿಂದ 4 ಮಂದಿ ಮರಣರಾಗಿದ್ದಾರೆ. ಇಲ್ಲಿ ಯಾವುದೇ ಸ್ಥಳೀಯ ಚುನಾವಣೆ ನಡೆದಿಲ್ಲ. ಈ ಬಡಾವಣೆ ದಿಕ್ಕು ದೆಸೆಯಿಲ್ಲದ ಬಡಾವಣೆಯಾಗಿದೆ. ಇಲ್ಲಿನ ಜನಪ್ರತಿನಿಧಿಗಳು ಕೂಡಲೇ ಸೂಕ್ತ ಕ್ರಮ ವಹಿಸಿ ಈ ಬಡಾವಣೆಗೆ ಡೆಂಘೀನಿಂದ ಮುಕ್ತಿ ಕೊಡಬೇಕೆಂದು ಆಗ್ರಹಿಸಿದರು.
ವೇದಿಕೆ ಅಧ್ಯಕ್ಷ ಎಸ್. ಬಾಲಕೃಷ್ಣ, ಕಪಿನಿಗೌಡ, ಶಿವಪ್ಪ, ನಾಗರಾಜು, ಕುಮಾರ್, ಕಿರಣ್ ಕುಮಾರ್, ಚಂದ್ರಶೇಖರ್, ತ್ಯಾಗರಾಜು, ಸ್ವಾಮಿ, ಬೀಡಾಬಾಬು, ಗೋವಿಂದರಾಜು, ಚೆಲುವರಾಜು, ಬಸಪ್ಪ ಇದ್ದರು