ಸಾರಾಂಶ
ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಥವಿಲ್ಲದ ಹೇಳಿಕೆಗಳನ್ನು ನೀಡುತ್ತಿರುವ ವಿರೋಧ ಪಕ್ಷದ ನಾಯಕರು ಹುಚ್ಚರಂತೆ ಆಡುತ್ತಿದ್ದಾರೆ
ಕನ್ನಡಪ್ರಭ ವಾರ್ತೆ ರಾಯಚೂರು
ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಥವಿಲ್ಲದ ಹೇಳಿಕೆಗಳನ್ನು ನೀಡುತ್ತಿರುವ ವಿರೋಧ ಪಕ್ಷದ ನಾಯಕರು ಹುಚ್ಚರಂತೆ ಆಡುತ್ತಿದ್ದಾರೆ ಎಂದು ಸಣ್ಣ ನೀರಾವರಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಗುಡುಗಿದರು.ಪಟ್ಟಣದ ತಮ್ಮ ನಿವಾಸದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಪಕ್ಷನ್ನು ದುರ್ಬಲಗೊಳಿಸುವ ದುರುದ್ದೇಶ ಹೊಂದಿರುವ ವಿಪಕ್ಷದವರು ಸಿದ್ದರಾಮಯ್ಯ ಅವರನ್ನು ಸಿಎಂ ಖುರ್ಚಿಯಿಂದ ಇಳಿಸುವ ಲೆಕ್ಕಾಚಾರದಲ್ಲಿ ತೊಡಗಿದ್ದು, ಜನಾಶೀರ್ವಾದದಿಂದ 135 ಸ್ಥಾನ ಪಡೆದು ರಚನೆಗೊಂಡ ಪಕ್ಷವನ್ನು ಅಸ್ಥಿರಗೊಳಿಸುವ ಹುನ್ನಾರ ನಡೆಸಿದ್ದಾರೆ, ಅದು ಫಲಿಸುವುದಿಲ್ಲ, ಸಿಎಂ ರಾಜೀನಾಮೆ ಕೊಡುವ ಪ್ರಮೆಯವೇ ಇಲ್ಲ ಎಂದು ಮರು ಉಚ್ಛರಿಸಿದರು.
ಆರ್.ಅಶೋಕರ ವಿರುದ್ಧ ಕೇಸ್ ಆಗಿದೆ. ಬಿಎಸ್ ವೈ ವಿರುದ್ಧ ಪ್ರಕರಣಗಳಿವೆ. ನಮ್ಮ ಪಕ್ಷದಲ್ಲಿ ಸಾವಿರ ಕೋಟಿ ಇಟ್ಟುಕೊಂಡು ಸಿಎಂ ಆಗಲು ಸಿದ್ಧರಿದ್ದಾರೆ ಎಂದು ಅವರದ್ದೇ ಪಕ್ಷದ ಯತ್ನಾಳ ಆರೋಪಿಸುತ್ತಿದ್ದಾರೆ. ಅವರ ಮಾತಿಗೆ ಯಾರು ಉತ್ತರ ಕೊಡುತ್ತಿಲ್ಲ. ಅವರ ಪಕ್ಷವನ್ನು ಸರಿಯಾದ ರೀತಿಯಲ್ಲಿ ಇಟ್ಡುಕೊಳ್ಳಲಾಗದ ಸ್ಥಿತಿ ಬಿಜೆಪಿಯಲ್ಲಿದೆ.ಬಿಜೆಪಿಯವರ ಭ್ರಷ್ಟಾಚಾರದಲ್ಲಿ ಮೋದಿಯವರು ಭಾಗಿಯಾಗಿದ್ದಾರೆ. ಇಡೀ ಪ್ರಪಂಚದಲ್ಲಿ ಯಾರು ಮಾಡದಷ್ಟು ಭ್ರಷ್ಟಾಚಾರವನ್ನು ಬಾಂಡ್ ಹಗರಣದಲ್ಲಿ ನರೇಂದ್ರ ಮೋದಿ, ಅಮಿತ್ ಶಾ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಜನಾರ್ದನ ರೆಡ್ಡಿಯವರು ಲೂಟಿ ಮಾಡಿ ಜೈಲಿಗೆ ಹೋಗಿಬಂದು ಈಗ ಸಿದ್ದರಾಮಯ್ಯನವರ ಬಗ್ಗೆ ಮಾತನಾಡಿದರೆ ಅರ್ಥವಿದೆಯೇ ಅವರನ್ನು ಪಕ್ಷದಿಂದ ಯಾಕೆ ಹೊರಗೆ ಹಾಕಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ ಎಂದರು.ಬಿಜೆಪಿಯವರು ಆರಂಭದಿಂದಲೇ ಕಾಂಗ್ರೆಸ್ ಸರ್ಕಾರ ಪತನ ಮಾಡುವ ಕೆಲಸದಲ್ಲಿ ತೊಡಗಿದ್ದಾರೆ. 14 ಶಾಸಕರನ್ನು ಸಂಪರ್ಕಿಸಿ ನೂರಾರು ಕೋಟಿ ಆಮಿಷವೊಡ್ಡಿದ್ದಾರೆ. ತನಿಖಾ ಸಂಸ್ಥೆಗಳಿಂದಲೂ ಶಾಸಕರ ಮೇಲೆ ಒತ್ತಡ ಹೇರುವ ಕೆಲಸವಾಗುತ್ತಿದೆ ಎಂದು ದೂರಿದರು.
ಈ ವೇಳೆ ಮುಖಂಡರಾದ ಸೈಯದ್ ಶಾಲಂ, ಜಯಣ್ಣ, ಬಷೀರುದ್ಧೀನ್, ಬಸವರಾಜರೆಡ್ಡಿ, ಅಮರೇಗೌಡ ಹಂಚಿನಾಳ, ನರಸಿಂಹಲು ಮಾಡಗಿರಿ ಸೇರಿ ಅನೇಕರು ಇದ್ದರು.