ಸಚಿವ ಶಿವಾನಂದ್‌ ಪಾಟೀಲ್‌ ಹೇಳಿಕೆಗೆ ಪ್ರತಿಪಕ್ಷ ನಾಯಕರ ಟೀಕೆ

| Published : Dec 26 2023, 01:31 AM IST / Updated: Dec 26 2023, 12:59 PM IST

drought declaration Siddaramaiah

ಸಾರಾಂಶ

ಶಿವಾನಂದ ಪಾಟೀಲರು ಹಿಂದೆ ರೈತರ ಬಗ್ಗೆ ಹಗುರವಾಗಿ ಮಾತನಾಡಿದಾಗಲೂ ಕ್ರಮ ತೆಗೆದುಕೊಳ್ಳಲಿಲ್ಲ. ಮುಖ್ಯಮಂತ್ರಿಗಳಾದರೂ ಇವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಿತ್ತು: ಆರ್ ಅಶೋಕ್.

ಸರ್ಕಾರ ಬಹಳ ದಿನ ಉಳಿಯಲ್ಲ: ಆರ್‌. ಆಶೋಕ್‌ ವಾಗ್ದಾಳಿ ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಬರಗಾಲ ಬಂದ್ರೆ ರೈತರು ಸಾಲಮನ್ನಾದ ನಿರೀಕ್ಷೆ ಇಟ್ಕೊಳ್ತಾರೆ ಎಂದು ಸಚಿವ ಶಿವಾನಂದ್‌ ಪಾಟೀಲ್‌ ಹೇಳಿಕೆ ನೀಡಿದ್ದಾರೆ. ರಾಜ್ಯ ಸರ್ಕಾರಕ್ಕೆ ರೈತರ ಶಾಪ ತಟ್ಟಲಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಇದೇ ಶಿವಾನಂದ ಪಾಟೀಲ್ ಅವರು ಈ ಹಿಂದೆ ಜಾಸ್ತಿ ಹಣ ಸಿಗುತ್ತದೆ ಎಂಬ ಕಾರಣಕ್ಕೆ ಪ್ರೇಮ ಪ್ರಕರಣಗಳನ್ನೂ ರೈತರ ಆತ್ಮಹತ್ಯೆ ಎಂಬಂತೆ ಬಿಂಬಿಸಲಾಗುತ್ತಿದೆ. ಮೊದಲು ಒಂದು ಲಕ್ಷ ಪರಿಹಾರ ಇತ್ತು. ಈಗ 5 ಲಕ್ಷ ರು. ಕೊಡ್ತಾರೆ. ಅದಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದಿದ್ದರು ಎಂದು ನೆನಪಿಸಿದರು.

ಶಿವಾನಂದ ಪಾಟೀಲರು ಹಿಂದೆ ರೈತರ ಬಗ್ಗೆ ಹಗುರವಾಗಿ ಮಾತನಾಡಿದಾಗಲೂ ಕ್ರಮ ತೆಗೆದುಕೊಳ್ಳಲಿಲ್ಲ. ಮುಖ್ಯಮಂತ್ರಿಗಳಾದರೂ ಇವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಿತ್ತು. ರೈತರನ್ನು ಕಡೆಗಣಿಸಿದ್ರೆ ರೈತರ ಶಾಪಕ್ಕೆ ಸರ್ಕಾರ ಗುರಿಯಾಗುತ್ತದೆ. ಈ ಸರ್ಕಾರ ಬಹಳ ದಿನ ಉಳಿಯಲ್ಲ ಎಂದು ಹೇಳಿದರು.

ಶಾಸಕ ವಿ. ಸುನಿಲ್‌ ಕುಮಾರ್ ಮಾತನಾಡಿ, ಸಹಜವಾಗಿ ಈ ಸರ್ಕಾರ ರೈತರ ಪರವಾದ ಸರ್ಕಾರವಲ್ಲ. ಬರಗಾಲಕ್ಕೆ ಸಂಬಂಧಪಟ್ಟಂತೆ ಯಾವುದೇ ಕ್ರಮ ಕೈಗೊಂಡಿಲ್ಲ. ಬದಲಾಗಿ ರೈತರನ್ನ ಅಪಮಾನ ಮಾಡು ವಂತ ಕೆಲಸ ಮಾಡುತ್ತಲೇ ಬರುತ್ತಿದೆ ಎಂದರು.

ಬರಗಾಲ ಘೋಷಣೆಯಾದ ನಂತರ ರೈತರ ಖಾತೆಗೆ ಒಂದು ರು. ಹಣವನ್ನು ಹಾಕಿಲ್ಲ. ಒಬ್ಬ ಜವಾಬ್ದಾರಿ ಯುತ ಸಚಿವರು ಬರಗಾಲ ಬರುವುದೇ ರೈತರ ಪರಿಹಾರ ಕೇಳುವುದಕ್ಕೆ ಎಂದಿದ್ದಾರೆ. ರೈತರ ಬಗೆಗಿನ ಅಸಂಬದ್ಧ ಹೇಳಿಕೆಯನ್ನು ನಾವು ಖಂಡಿಸುತ್ತೇವೆ ಎಂದು ತಿಳಿಸಿದರು

ಮಾಜಿ ಸಚಿವ ಸಿ.ಟಿ. ರವಿ ಮಾತನಾಡಿ, ಸಚಿವ ಶಿವಾನಂದ ಪಾಟೀಲರು ಹಿರಿಯರು, ಸರ್ಕಾರದಲ್ಲಿ ಬಹಳ ವರ್ಷ ಕೆಲಸ ಮಾಡಿದ ಅನುಭವಿ ಮಂತ್ರಿ. ಅವರ ಬಾಯಲ್ಲಿ ಬರುವ ಇಂತಹಾ ಮಾತು ಸಹನೀಯವಲ್ಲ. ಶಿವಾನಂದ ಪಾಟೀಲರು ಈ ಹಿಂದೆ ಮದುವೆ ಕಾರ್ಯಕ್ರಮದಲ್ಲಿ ಹಣ ತೂರಿದ್ದನ್ನು ನಾವು ನೋಡಿದ್ದೇವೆ. ಇಂಥವರು ರೈತರು ಬರ ಬರಲಿ ಎಂದು ಕಾಯುತ್ತಾರೆ ಎಂದು ಹೇಳಿರುವುದು ರೈತರಿಗೆ ಮಾಡಿರುವ ಅಪಮಾನ ಎಂದು ಹೇಳಿದರು.

ಪಿತ್ತ ನೆತ್ತಿಗೇರಿ ಅಹಂಕಾರದಿಂದ ಸ್ಥಿತಪ್ರಜ್ಞೆ ಕಳೆದುಕೊಂಡವರು ಆಡುವ ಮಾತು ಇದು. ಒಂದು ಕ್ಷಣಕ್ಕೂ ಅವರು ಸಚಿವರಾಗಿ ಇರಲು ಯೋಗ್ಯರಲ್ಲ ಅವರನ್ನು ತಕ್ಷಣ ಸಚಿವ ಸ್ಥಾನದಿಂದ ವಜಾ ಮಾಡಬೇಕು. ಮುಖ್ಯಮಂತ್ರಿಗಳೇ ಒಂದೋ ನೀವೇ ಅವರ ಮದ ಇಳಿಸಿ, ಇಲ್ಲವೇ ಜನರೇ ನಿಮ್ಮ ಸರ್ಕಾರದ ಮದ ಇಳಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು.

ರೈತ ಮಳೆಗಾಗಿ ಕಾಯುತ್ತಾನೆ, ಇವರ ಭಿಕ್ಷೆಗೆ ಕಾಯುವುದಿಲ್ಲ. ಒಂದು ಬೆಳೆ ಬೆಳೆಸಲು ಬದುಕನ್ನು ತಪಸ್ಸಿನ ರೀತಿಯಲ್ಲಿ ಮಾಡುತ್ತಾನೆ. ರಕ್ತವನ್ನು ಬೆವರಿನಂತೆ ಹರಿಸುತ್ತಾನೆ. ಅಂತಹಾ ರೈತರಿಗೆ ಅಪಮಾನ ಮಾಡಿ ದ್ದನ್ನು ಸಹಿಸಲಾಗದು. ಇಂಥವರು ಸಚಿವ ಸ್ಥಾನದಲ್ಲಿ ಇರಲು ಅರ್ಹರಲ್ಲ. ಅವರನ್ನು ಕಿತ್ತು ಹಾಕಬೇಕು ಎಂದು ಒತ್ತಾಯಿಸಿದರು.