ಸಾರಾಂಶ
ಕನ್ನಡಪ್ರಭ ವಾರ್ತೆ, ವಿಧಾನಸಭೆ
ಕೇಂದ್ರ ಸರ್ಕಾರವು ರಾಜ್ಯದ ಹಿತರಕ್ಷಣೆ ಮಾಡುವಲ್ಲಿ ಅನ್ಯಾಯ ಮಾಡಿದೆ ಎಂದು ಆರೋಪಿಸಿ ವಿಧಾನಸಭೆಯಲ್ಲಿ ಗುರುವಾರ ಅಂಗೀಕರಿಸಿದ್ದ ನಿರ್ಣಯವನ್ನು ವಿರೋಧಿಸಿ ಪ್ರತಿಪಕ್ಷಗಳ ಸದಸ್ಯರು ಶುಕ್ರವಾರವೂ ಧರಣಿ ಮುಂದುವರೆಸಿದರು. ಕಲಾಪಕ್ಕೆ ಅಡ್ಡಿಪಡಿಸಿ ತೀವ್ರ ಗದ್ದಲ ಉಂಟು ಮಾಡಿದ್ದರಿಂದ ಶುಕ್ರವಾರ ಬೆಳಗ್ಗೆಯೇ ಸದನವನ್ನು ಸೋಮವಾರಕ್ಕೆ ಮುಂದೂಡಲಾಯಿತು.ಶುಕ್ರವಾರ ಬೆಳಗ್ಗೆ ಸದನ ಆರಂಭವಾಗುತ್ತಿದ್ದಂತೆಯೇ ಸದನದ ಬಾವಿಗಿಳಿದ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ರಾಜ್ಯ ಸರ್ಕಾರದ ಕ್ರಮದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ ಘೋಷಣೆಗಳನ್ನು ಕೂಗಿದರು.ಪ್ರತಿಪಕ್ಷ ನಾಯಕ ಆರ್. ಅಶೋಕ್ ಮಾತನಾಡಿ, ಇದು ಸರ್ಕಾರದ ಹೇಡಿತನದ ನಡೆ. ಕದ್ದುಮುಚ್ಚಿ ನಿರ್ಣಯ ತರುವ ಅಗತ್ಯವೇನಿತ್ತು? ಚರ್ಚೆಗೂ ಅವಕಾಶ ನೀಡದೆ ಇಡೀ ಸದನಕ್ಕೆ ಅಗೌರವ ತರುವ ರೀತಿ ಸರ್ಕಾರ ನಡೆದುಕೊಂಡಿದೆ. ವಿಧಾನಸಭೆಯ ನೀತಿ ನಿಯಮಾವಳಿ ಗಾಳಿಗೆ ತೂರಲಾಗಿದೆ. ಕೂಡಲೇ ನಿರ್ಣಯ ವಾಪಸ್ ಪಡೆದುಕೊಂಡು ನಿಯಮಾವಳಿ ಪ್ರಕಾರ ನಿರ್ಣಯ ಮಂಡಿಸಿ ಎಂದು ಆಗ್ರಹಿಸಿದರು.ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ರಾಜ್ಯ ಸರ್ಕಾರ- ಕೇಂದ್ರ ಸರ್ಕಾರ ಜೋಡೆತ್ತಿನ ರೀತಿ ಕೆಲಸ ಮಾಡಬೇಕು. ಬಜೆಟ್ ಪುಸ್ತಕದಲ್ಲೇ ಕೇಂದ್ರದ ವಿರುದ್ಧ ಸಂಘರ್ಷಕ್ಕೆ ಇಳಿದಿದ್ದೀರಿ. ಇದರಿಂದ ಸಿದ್ದರಾಮಯ್ಯಗೆ ತೊಂದರೆಯಾಗಲ್ಲ, ರಾಜ್ಯದ ಏಳೂವರೆ ಕೋಟಿ ಜನರಿಗೆ ತೊಂದರೆಯಾಗುತ್ತದೆ ಎಂದು ಕಿಡಿಕಾರಿದರು.
ಈ ಮಾತಿಗೆ ಪ್ರತಿಯಾಗಿ ಕಾನೂನು ಸಚಿವ ಎಚ್.ಕೆ. ಪಾಟೀಲ್ ಪ್ರತಿಕ್ರಿಯೆ ನೀಡಿ, ಕರ್ನಾಟಕ ಹಿತರಕ್ಷಣೆ ಅಂಶ ಮಾತ್ರ ನಿರ್ಣಯದಲ್ಲಿದೆ. ಅಂಕಿ-ಅಂಶಗಳ ಸ್ಪಷ್ಟತೆ ಇದೆ. ಅವಮಾನ ಅಂಶಗಳಿಲ್ಲ, ಪ್ರತಿಪಕ್ಷದ ಆರೋಪವನ್ನು ತಳ್ಳಿ ಹಾಕುತ್ತೇವೆ ಮತ್ತು ಖಂಡಿಸುತ್ತೇವೆ ಎಂದರು. ಎಚ್.ಕೆ. ಪಾಟೀಲ್ ಮಾತನ್ನು ಕೃಷ್ಣ ಬೈರೇಗೌಡ ಸಮರ್ಥಿಸಿದರು.ಇದಕ್ಕೆ ಪ್ರತಿಪಕ್ಷ ಸದಸ್ಯರು ತೀವ್ರ ವಾಗ್ವಾದಕ್ಕಿಳಿದ ಕಾರಣ ಅಷ್ಟೇ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ ಎಚ್.ಕೆ ಪಾಟೀಲ್, ನಿರ್ಣಯ ಕೈಗೊಳ್ಳಲು ನಿಮ್ಮ ಪರವಾನಗಿ ಬೇಡ. ಕಾಯ್ದೆ, ನಿಯಮಾವಳಿ ಪ್ರಕಾರದಲ್ಲೇ ನಿರ್ಣಯ ಮಾಡಿದ್ದೇವೆ. ಇದು ಏಳು ಕೋಟಿ ಕನ್ನಡಿಗರ ಧ್ವನಿ, ನೀವು ಒಪ್ಪಿಕೊಳ್ಳಿ, ಆತ್ಮಾವಲೋಕನ ಮಾಡಿ. ನಿಮಗೆ ಕರ್ನಾಟಕದ ಹಿತಾಸಕ್ತಿ ಮುಖ್ಯವೋ, ರಾಜಕೀಯ ಮುಖ್ಯವೋ ಎಂದು ತರಾಟೆಗೆ ತೆಗೆದುಕೊಂಡರು.
ಇದರಿಂದ ಆಕ್ರೋಶಗೊಂಡ ಬಿಜೆಪಿ ಸದಸ್ಯರು ಲೋಕಸಭೆ ಚುನಾವಣೆ ಎದುರಿಸಲು ಸಾಧ್ಯವಾಗದೇ ರಾಜಕೀಯ ಮಾಡುತ್ತಿದ್ದೀರಿ, ಧಮ್ಮು, ತಾಕತ್ತು ಇದ್ದರೆ ಎಲ್ಲಿ ಕೇಳಬೇಕೋ ಅಲ್ಲಿ ಕೇಳಿ. ನಿಮ್ಮ ಸಂಸದರನ್ನು ಲೋಕಸಭೆಯಲ್ಲಿ ಮಾತನಾಡಲು ಹೇಳಿ ಎಂದು ತಿರುಗೇಟು ನೀಡಿದರು.ಇದೇ ವೇಳೆ ಸದನದ ಬಾವಿಯಲ್ಲಿದ್ದ ಬಿಜೆಪಿ ಸದಸ್ಯರು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ ಕೂಗುತ್ತಾ ಭಜನೆ ರೂಪದಲ್ಲಿ ಘೋಷಣೆಗಳನ್ನು ಕೂಗಿದರು. ಈ ವೇಳೆ ಆಡಳಿತ-ಪ್ರತಿಪಕ್ಷಗಳ ವಾಗ್ವಾದ ಜೋರಾದ ಹಿನ್ನೆಲೆಯಲ್ಲಿ ಸಭಾಧ್ಯಕ್ಷರು ಕಲಾಪವನ್ನು ಕೆಲ ಕಾಲ ಮುಂದೂಡಿದರು. ಮತ್ತೆ ಸದನ ಸಮಾವೇಶಗೊಂಡ ಬಳಿಕವೂ ಗಲಾಟೆ ಮುಂದುವರೆಯಿತು. ಸಭಾಧ್ಯಕ್ಷರು ವಿಧೇಯಕಗಳ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಎಂದು ಪರಿಪರಿಯಾಗಿ ಮನವಿ ಮಾಡಿದರೂ ಬಿಜೆಪಿ ಸದಸ್ಯರು ಸೊಪ್ಪು ಹಾಕಲಿಲ್ಲ. ಈ ಹಿನ್ನೆಲೆಯಲ್ಲಿ ಗಲಾಟೆಯ ನಡುವೆಯೇ 2024ನೇ ಸಾಲಿನ ಕರ್ನಾಟಕ ವಿಧಾನ ಮಂಡಲ(ಅನರ್ಹತಾ ನಿವಾರಣಾ) (ತಿದ್ದುಪಡಿ) ವಿಧೇಯಕ, 2024ನೇ ಸಾಲಿನ ಕರ್ನಾಟಕ ಭೂ ಕಂದಾಯ ತಿದ್ದುಪಡಿ ವಿಧೇಯಕಗಳನ್ನು ಪರ್ಯಾಲೋಚನೆಗೆ ಮಂಡಿಸಿ ಅಂಗೀಕಾರ ಪಡೆಯಲಾಯಿತು. ಜತೆಗೆ 5ನೇ ರಾಜ್ಯ ಹಣಕಾಸು ಆಯೋಗದ ಪ್ರಸಕ್ತ ಸಾಲಿನ ವರದಿ, 16ನೇ ವಿಧಾನಸಭೆ ಸರ್ಕಾರಿ ಭರವಸೆಗಳ ಸಮಿತಿ ವರದಿಯನ್ನು ಮಂಡನೆ ಮಾಡಿ ಕಲಾಪವನ್ನು ಬೆಳಗ್ಗೆ 11.40ರ ವೇಳೆಯಲ್ಲೇ ಸೋಮವಾರಕ್ಕೆ ಮುಂದೂಡಿದರು.