ಕಂದಾಯ ಹೆಚ್ಚಿಸಲು ಸದಸ್ಯರ ವಿರೋಧ

| Published : Feb 28 2025, 12:49 AM IST

ಸಾರಾಂಶ

ಶಿರಾಳಕೊಪ್ಪ: ಸರ್ಕಾರ ೨೦೨೫-೨೬ನೇ ಸಾಲಿಗೆ ಪುರಸಭೆ ವ್ಯಾಪ್ತಿಯಲ್ಲಿ ಬರುವ ವಾಸದ ಮನೆ, ವಾಣಿಜ್ಯ ಮಳಿಗೆ ಹಾಗೂ ಖಾಲಿ ನಿವೇಶನ ಸೇರಿದಂತೆ ಇತರ ಕಟ್ಟಡಗಳಿಗೆ ಆಸ್ತಿ ತೆರಿಗೆಯನ್ನು ಪರಿಷ್ಕರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಪುರಸಭೆಯ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು.

ಶಿರಾಳಕೊಪ್ಪ: ಸರ್ಕಾರ ೨೦೨೫-೨೬ನೇ ಸಾಲಿಗೆ ಪುರಸಭೆ ವ್ಯಾಪ್ತಿಯಲ್ಲಿ ಬರುವ ವಾಸದ ಮನೆ, ವಾಣಿಜ್ಯ ಮಳಿಗೆ ಹಾಗೂ ಖಾಲಿ ನಿವೇಶನ ಸೇರಿದಂತೆ ಇತರ ಕಟ್ಟಡಗಳಿಗೆ ಆಸ್ತಿ ತೆರಿಗೆಯನ್ನು ಪರಿಷ್ಕರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಪುರಸಭೆಯ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು.ಗುರುವಾರ ಪುರಸಭೆ ಯಡಿಯೂರಪ್ಪ ಸಭಾಂಗಣದಲ್ಲಿ ಪುರಸಭೆ ಅಧ್ಯಕ್ಷೆ ಮಮತಾ ನಿಂಗಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯ ರಾಘವೇಂದ್ರ ಮಾತನಾಡಿ, ಈಗಾಗಲೇ ಶಿರಾಳಕೊಪ್ಪ ಪುರಸಭೆಯಲ್ಲಿ ಇತರ ಪ್ರದೇಶಗಳಿಗೆ ಹೋಲಿಸಿದರೆ ತೆರಿಗೆಯನ್ನು ಹೆಚ್ಚಿಸಲಾಗಿದೆ. ಮತ್ತೆ ಆ ಪ್ರಸ್ತಾಪವನ್ನು ಮಾಡದೇ ಸರ್ಕಾರಕ್ಕೆ ಈಗಿರುವ ತೆರಿಗೆ ಕುರಿತ ಸಂಗತಿ ತಿಳಿಸಿ ಪತ್ರ ಬರೆಯಿರಿ ಎಂದರು.

ಟಿ.ರಾಜು ಮಾತನಾಡಿ, ಪುರಸಭೆ ಪೌರ ಕಾರ್ಮಿಕರಲ್ಲಿ ಸಾಕಷ್ಟು ಕಾರ್ಮಿಕರಿಗೆ ಮನೆಗಳಿಲ್ಲ, ನಿವೇಶನ ಇದ್ದವರಿಗೆ ಮನೆ ಕಟ್ಟಲು ಪರವಾನಿಗೆ ಕೊಡಿ, ನಿವೇಶನ ಇಲ್ಲದವರಿಗೆ ನಿವೇಶನಕೋರಿ ಸರ್ಕಾರಕ್ಕೆ ಪತ್ರ ಬರೆಯಿರಿ ಎಂದು ಒತ್ತಾಯಿಸಿದರು.

ಬಿ-ಖಾತೆ ಮಾಡಲು ಒತ್ತಾಯ:

ಸರ್ಕಾರದ ಅಧಿಸೂಚನೆ ದಿನಾಂಕ ೧೧-೨-೨೦೨೫ ರಂತೆ ಪುರಸಭೆ ವ್ಯಾಪ್ತಿಯ ಬಡಾವಣೆಗಳಲ್ಲಿ ನಿರ್ಮಿಸಿಕೊಂಡಿರುವ ಕಟ್ಟಡದ ಬಿ.ಖಾತೆ ಮಾಡುವಾಗ ೨-೫ ಅಡಿ ಅಳತೆ ವ್ಯತ್ಯಾಸ ವಿದ್ದರೆ ಯಾವದೇ ತಕರಾರು ಮಾಡದೇ ಜನರಿಗೆ ಅನಕೂಲ ಮಾಡಿಕೊಡಿ ಎಂದು ಸದಸ್ಯ ಟಿ.ರಾಜು, ರಾಘವೇಂದ್ರ, ಪತ್ತಿ ಜಾರ್, ತಡಗಣಿ ರಾಜಣ್ಣ ಸೇರಿದಂತೆ ಇತರರು ಮುಖ್ಯಾಧಿಕಾರಿಗಳಲ್ಲಿ ವಿನಂತಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಹೇಮಂತ ಡೊಳ್ಳೆ, ಸದಸ್ಯರು ಹೇಳಿದಂತೆ ಮಾಡಲು ಬರುವದಿಲ್ಲ. ಅಕ್ರಮ ಸಕ್ರಮದಲ್ಲಿ ಮಾಡಬಹುದೇ ವಿನಹ ಬಿ-ಖಾತೆ ಮಾಡಲು ಬರುವದಿಲ್ಲ, ಮುಂದೆ ಏನಾದರು ಯಾರಾದರೂ ಅರ್ಜಿ ಬರೆದು ಅಳತೆಯಲ್ಲಿ ವ್ಯತ್ಯಾಸ ಕಂಡುಬಂದರೆ ನಮ್ಮ ಮೇಲೆ ಕ್ರಮ ಕೈಗೊಳ್ಳುತ್ತಾರೆ ಎಂದರು.ಸಭೆಯಲ್ಲಿ ಅಧ್ಯಕ್ಷೆ ಮಮತಾ ನಿಂಗಪ್ಪ, ಉಪಾಧ್ಯಕ್ಷ ಮುದಸೀರ್ ಅಹಮದ್, ಸ್ಥಾಯಿ ಸಮಿತಿ ಅಧ್ಯಕ್ಷ ಮಹಬಲೇಶ್ ಇದ್ದರು.