ಸಾರಾಂಶ
ವಿರೋಧ ಪಕ್ಷಗಳು ಸರ್ಕಾರವನ್ನು ಅಸ್ಥಿರಗೊಳಿಸಲು ರಾಜ್ಯಪಾಲರ ಕಚೇರಿಯನ್ನು ದುರುಪಯೋಗಪಡಿಸಿಕೊಳ್ಳುತ್ತಿವೆ ಮತ್ತು ಸರ್ಕಾರದ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡುತ್ತಿವೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.
ತುಮಕೂರು : ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನದಲ್ಲಿ ವಿಪಕ್ಷಗಳು ರಾಜ್ಯಪಾಲರ ಕಚೇರಿಯನ್ನು ದುರುಪಯೋಗಪಡಿಸಿಕೊಂಡು ಮುಖ್ಯಮಂತ್ರಿ ಹಾಗೂ ಸರ್ಕಾರದ ಮೇಲೆ ತಿರುಳಿಲ್ಲದ ಆಪಾದನೆಯನ್ನು ಮಾಡಲಾಗುತ್ತಿದ್ದು, ಮುಂಬರುವ ದಿನಗಳಲ್ಲಿ ರಾಜ್ಯದ ಜನತೆ ಇದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಗೃಹ ಸಚಿವ ಡಾ: ಜಿ. ಪರಮೇಶ್ವರ ತಿಳಿಸಿದರು.
ನಗರದ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣ ಕಾರ್ಯಕ್ರಮ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಮ್ಮ ಸರ್ಕಾರ ಕಾನೂನು ಚೌಕಟ್ಟಿನಲ್ಲಿಯೇ ಆಡಳಿತ ನಡೆಸುತ್ತಿದೆ. ಯಾವುದೇ ಟೀಕೆ-ಟಿಪ್ಪಣಿಗಳಿಗೂ ನಾವು ಹೆದರುವುದಿಲ್ಲ. ರಾಜ್ಯದ ಅಭಿವೃದ್ಧಿಯೇ ನಮ್ಮ ಸರ್ಕಾರದ ಮೂಲಮಂತ್ರ. ಚುನಾವಣೆಗೂ ಮುನ್ನ ರಾಜ್ಯದ ಜನತೆಗೆ ನೀಡಿದ ಭರವಸೆಗಳನ್ನು ಈಡೇರಿಸುವ ಮೂಲಕ ನಮ್ಮ ಸರ್ಕಾರವು ಪಂಚ ಗ್ಯಾರಂಟಿಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ. ಯಾವುದೇ ಕಾರಣಕ್ಕೂ ನಾವು ಗ್ಯಾರಂಟಿ ಯೋಜನೆಯನ್ನು ಸ್ಥಗಿತ ಮಾಡುವುದಿಲ್ಲವೆಂದು ತಿಳಿಸಿದರು.
ಕಳೆದ ವರ್ಷದಂತೆ ಈ ವರ್ಷವೂ ಜನರು ಶಾಂತಿಯಿಂದ ಗಣೇಶ ಚತುರ್ಥಿಯನ್ನು ಆಚರಣೆ ಮಾಡಲು ಸೂಕ್ತ ವಾತಾವರಣ ಕಲ್ಪಿಸಲಾಗುವುದು. ಗಣೇಶೋತ್ಸವದ ಹೆಸರಿನಲ್ಲಿ ಯಾರೂ ಸಹ ಕಾನೂನನ್ನು ಕೈಗೆತ್ತಿಕೊಳ್ಳಬಾರದು. ಕಾನೂನು ಭಂಗಕ್ಕೆ ಪ್ರಯತ್ನಿಸುವವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರಲ್ಲದೆ ರಾಜ್ಯದ ಜನರು ಶಾಂತಿಪ್ರಿಯರು. ಯಾವುದೇ ಅಹಿತಕರ ಘಟನೆಗಳನ್ನು ನಡೆಯಲು ಆಸ್ಪದ ಕೊಡುವುದಿಲ್ಲವೆಂಬ ವಿಶ್ವಾಸ ನನಗಿದೆ ಎಂದು ತಿಳಿಸಿದರು.
ಗ್ಯಾರಂಟಿ ಯೋಜನೆಗಳಿಗೆ ಯಾವ ನಿಯಮವನ್ನೂ ಹೊಸದಾಗಿ ಸೇರಿಸುವುದಿಲ್ಲವೆಂದು ಸ್ಪಷ್ಟನೆ ನೀಡಿದರು. ಜಿಲ್ಲೆಯ ಪಡಿತರ ಚೀಟಿಗಳ ಪರಿಷ್ಕರಣೆ ನಡೆಸಲಾಗುತ್ತಿದ್ದು, ಈ ಪರಿಷ್ಕರಣೆಯಲ್ಲಿ 4 ಚಕ್ರದ ವಾಹನ ಹೊಂದಿರುವ, ಸರ್ಕಾರಿ ನೌಕರಿ ಹೊಂದಿರುವ, ಆದಾಯ ತೆರಿಗೆ ಪಾವತಿಸುವ, ೩ ಹೆಕ್ಟೇರ್‌ಗಿಂತ ಹೆಚ್ಚು ಜಮೀನು ಹೊಂದಿರುವವರಿಗೆ ಅನ್ನಭಾಗ್ಯ ಯೋಜನೆ ಫಲಾನುಭವಿಗಳಾಗಿ ಪರಿಗಣಿಸಬಾರದು. ನಿಯಮಬಾಹಿರವಾಗಿ ಹೊಂದಿರುವ ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದುಪಡಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಪೊಲೀಸ್ ಇಲಾಖೆಯಲ್ಲಿ ಯಾವುದೇ ಮುಂಬಡ್ತಿ ಪ್ರಕರಣಗಳು ಬಾಕಿಯಿರುವುದಿಲ್ಲ. ಪ್ರತಿ ಜಿಲ್ಲೆಯಲ್ಲಿಯೂ ಹೊಸದಾಗಿ 1 ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳ ಹುದ್ದೆಯನ್ನು ಸೃಜಿಸಲಾಗಿದ್ದು, ಒಟ್ಟು 30 ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದರು.ಹೊಸದಾಗಿ ನೇಮಕ ಮಾಡಿಕೊಂಡಿರುವ 545 ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನೇಮಕಾತಿ ಆದೇಶವನ್ನು ಆಗಸ್ಟ್ ಮಾಹೆಯ ಅಂತ್ಯದೊಳಗಾಗಿ ನೀಡಲಾಗುವುದು.
ಅಲ್ಲದೆ 600ಹೊಸ ಇನ್ಸ್ ಪೆಕ್ಟರ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ ಹಾಗೂ 403 ಇನ್ಸ್ ಪೆಕ್ಟರ್ ಹುದ್ದೆಗಳಿಗೆ ಪರೀಕ್ಷೆ ನಡೆಸಲಾಗಿದ್ದು, ಫಲಿತಾಂಶ ನಿರೀಕ್ಷೆಯಲ್ಲಿದ್ದೇವೆ ಎಂದರಲ್ಲದೆ ರಾಜ್ಯದಲ್ಲಿ ಕಳೆದ 4 ವರ್ಷಗಳಿಂದ ನೇಮಕಾತಿ ಮಾಡದೇ ಬಾಕಿ ಉಳಿದಿದ್ದ 20 ಸಾವಿರ ಕಾನ್ಸಸ್ಟೇಬಲ್ ಹುದ್ದೆಗಳ ನೇಮಕಾತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.