ಸರ್ಕಾರ ಗೋಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯ್ದೆ-2020ನ್ನು ತಿದ್ದುಪಡಿ ಮಾಡುವ ಮೂಲಕ ಗೋವು ಕಳ್ಳರಿಗೆ ಹಾಗೂ ಗೋಹತ್ಯೆಗೆ ಪ್ರೋತ್ಸಾಹ ನೀಡುತ್ತಿದೆ. ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಗೋವು ಸಂರಕ್ಷಣಾ ವಿಧೇಯಕವನ್ನು ಯಥಾಸ್ಥಿತಿ ಮುಂದುವರಿಸಬೇಕು.
ಹುಬ್ಬಳ್ಳಿ:
ಗೋಹತ್ಯೆ ಕಾಯ್ದೆಗೆ ತಿದ್ದುಪಡಿ ತರಲು ಮುಂದಾದ ಕಾಂಗ್ರೆಸ್ ಸರ್ಕಾರದ ನಡೆ ಖಂಡಿಸಿ ವಿಶ್ವ ಹಿಂದೂ ಪರಿಷತ್ ಸೇರಿದಂತೆ ವಿವಿಧ ಹಿಂದೂಪರ ಸಂಘಟನೆಗಳ ವತಿಯಿಂದ ನಗರದಲ್ಲಿ ಸೋಮವಾರ ಗೋವಿನೊಂದಿಗೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.ಇಲ್ಲಿನ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು ಕಾಂಗ್ರೆಸ್ ಸರ್ಕಾರ ಹಾಗೂ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ ವಿರುದ್ಧ ವಿವಿಧ ಘೋಷಣೆ ಕೂಗುವ ಮೂಲಕ ಮುಖ್ಯಮಂತ್ರಿಗಳ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ಗೋಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯ್ದೆ-2020ನ್ನು ತಿದ್ದುಪಡಿ ಮಾಡುವ ಮೂಲಕ ಗೋವು ಕಳ್ಳರಿಗೆ ಹಾಗೂ ಗೋಹತ್ಯೆಗೆ ಪ್ರೋತ್ಸಾಹ ನೀಡುತ್ತಿದೆ. ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಗೋವು ಸಂರಕ್ಷಣಾ ವಿಧೇಯಕವನ್ನು ಯಥಾಸ್ಥಿತಿ ಮುಂದುವರಿಸಬೇಕು. ಕೂಡಲೇ ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಕೇಂದ್ರ ಸರ್ಕಾರ ಘೋಷಿಸಬೇಕೆಂದು ಒತ್ತಾಯಿಸಿದರು.ಈ ವೇಳೆ ಶ್ರೀರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಮಾತನಾಡಿ, ಬೆಳಗಾವಿ ಅಧಿವೇಶನದಲ್ಲಿ ಗೋಹತ್ಯೆ ನಿಷೇಧ ಕಾಯ್ದೆಗೆ ತಿದ್ದುಪಡಿ ಬಿಲ್ ಪಾಸ್ ಮಾಡಲು ಮುಂದಾಗಿರುವ ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ ಬಿಜೆಪಿ ಮತ್ತು ಜೆಡಿಎಸ್ ಶಾಸಕರು ತಕ್ಕ ಉತ್ತರ ನೀಡಬೇಕು. ಯಾವುದೇ ಕಾರಣಕ್ಕೂ ಬಿಲ್ ಪಾಸ್ ಆಗದಂತೆ ತಡೆ ಒಡ್ಡಬೇಕು. ಹಾಗೊಂದು ವೇಳೆ ಅದನ್ನೂ ಮೀರಿ ಬಿಲ್ ಪಾಸ್ ಮಾಡಲು ಮುಂದಾದರೆ ಸದನವನ್ನು ಬಹಿಷ್ಕರಿಸಿ ಹೊರಗೆ ಬರಬೇಕು ಎಂದರು.
ಮುಸ್ಲಿಮರ ತುಷ್ಟೀಕರಣ ಹಾಗೂ ಮತ ಬ್ಯಾಂಕ್‌ಗಾಗಿ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯಿದೆ ವಾಪಸ್ ಪಡೆಯುವುದಾಗಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ. ಅದಕ್ಕೆ ಹಿಂದೂಗಳಿಂದ ತೀವ್ರ ವಿರೋಧ ವ್ಯಕ್ತವಾಗುವ ಭಯದಿಂದ ಗೋ ಸಂರಕ್ಷಣಾ ಕಾಯಿದೆಗೆ ತಿದ್ದುಪಡಿ ತರುವ ಕೆಲಸಕ್ಕೆ ಮುಂದಾಗಿರುವುದು ನಾಚಿಕೆಗೇಡಿನ ಸಂಗತಿ. ಕೂಡಲೇ ಎಲ್ಲ ಶಾಸಕರು ಇದನ್ನು ಒಕ್ಕೊರಲಿನಿಂದ ವಿರೋಧಿಸಬೇಕು. ಇಲ್ಲದೇ ಹೋದಲ್ಲಿ ಈ ಹಿಂದೆ ಕಾಂಗ್ರೆಸ್‌ನ ನಾಯಕರಿಗೆ ತಟ್ಟಿದಂತೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ ಅವರಿಗೂ ಬರುವ ದಿನಗಳಲ್ಲಿ ಗೋವಿನ ಶಾಪ ತಟ್ಟಲಿದೆ ಎಂದು ಎಚ್ಚರಿಸಿದರು.ನಂತರ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಮಿನಿ ವಿಧಾನಸೌಧದ ವರೆಗೂ ಬೃಹತ್ ಮೆರವಣಿಗೆ ನಡೆಸಿ ತಹಸೀಲ್ದಾರ್ ಮೂಲಕ ರಾಜ್ಯ ಪಾಲಕರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಶಿವಾನಂದ ಸತ್ತಿಗೇರಿ, ರಮೇಶ ಕದಂ, ಶ್ರೀಧರ ಕಲಬುರ್ಗಿ, ದತ್ತಾತ್ರೇಯ ಭಟ್ ಸೇರಿದಂತೆ ವಿಶ್ವ ಹಿಂದೂ ಪರಿಷದ್, ಭಜರಂಗದಳ, ಶ್ರೀರಾಮಸೇನೆ ಸಂಘಟನೆಯ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.