ಗ್ರಾಮೀಣ ಜನತೆಗೆ ಉದ್ಯೋಗ ಖಾತ್ರಿಪಡಿಸುವ ಉದ್ದೇಶದಿಂದ ತಂದಿದ್ದ ಎಂಜಿ ನರೇಗಾ ಕಾಯ್ದೆಯ ಬದಲಿಗೆ ಹೊಸ ಮಸೂದೆ ಜಾರಿಗೊಳಿಸಲು ಕೇಂದ್ರ ಬಿಜೆಪಿ ಸರ್ಕಾರ ಮುಂದಾಗಿದ್ದು ದುರಂತ.
ಧಾರವಾಡ:
ವಿಕಸಿತ ಭಾರತ ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್ (ಗ್ರಾಮೀಣ) ಮಸೂದೆ (ವಿಬಿ–ಜಿರಾಮ್-ಜಿ) ಕೂಡಲೇ ಹಿಂತೆಗೆದುಕೊಳ್ಳಬೇಕು ಎಂದು ಅಖಿಲ ಭಾರತ ರೈತ ಕೃಷಿ ಕಾರ್ಮಿಕ ಸಂಘಟನೆ ನೇತೃತ್ವದಲ್ಲಿ ಮಂಗಳವಾರ ನೂರಾರು ಕೂಲಿ ಕಾರ್ಮಿಕರು ಕಲಾಭವನ ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಡಳಿತದ ಮೂಲಕ ಪ್ರಧಾನಿ ಹಾಗೂ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.ಈ ವೇಳೆ ಸಂಘದ ರಾಜ್ಯ ಉಪಾಧ್ಯಕ್ಷ ವಿ. ನಾಗಮ್ಹಾಳ ಮಾತನಾಡಿ, ಗ್ರಾಮೀಣ ಜನತೆಗೆ ಉದ್ಯೋಗ ಖಾತ್ರಿಪಡಿಸುವ ಉದ್ದೇಶದಿಂದ ತಂದಿದ್ದ ಎಂಜಿ ನರೇಗಾ ಕಾಯ್ದೆಯ ಬದಲಿಗೆ ಹೊಸ ಮಸೂದೆ ಜಾರಿಗೊಳಿಸಲು ಕೇಂದ್ರ ಬಿಜೆಪಿ ಸರ್ಕಾರ ಮುಂದಾಗಿದ್ದು ದುರಂತ. ಈ ಮಸೂದೆಯು ಮನರೇಗಾ ಕಾಯ್ದೆ ಮತ್ತು ಅದರಲ್ಲಿದ್ದ ಉದ್ಯೋಗದ ಶಾಸನಬದ್ಧ ಖಾತ್ರಿಯನ್ನು ತೆಗೆದು ಹಾಕುವುದು ಹಾಗೂ ಅದರ ಬದಲಿಗೆ ಗ್ರಾಮೀಣ ಬಡ ಕುಟುಂಬಗಳಿಗೆ ಉದ್ಯೋಗದ ಭರವಸೆ ಇಲ್ಲವಾಗಿಸುತ್ತದೆ ಎಂದರು.
ಯೋಜನೆಯ ಕುರಿತು ನಿರ್ಧಾರ ತೆಗೆದುಕೊಳ್ಳುವಾಗ ರಾಜ್ಯ ಸರ್ಕಾರಗಳ ಯಾವುದೇ ಅಭಿಪ್ರಾಯಕ್ಕೆ ಬೆಲೆ ಇಲ್ಲದಾಗಿದೆ. ಇದು ಒಕ್ಕೂಟ ವ್ಯವಸ್ಥೆ ಅಡಿಪಾಯ ನಾಶಗೊಳಿಸುವ ಪ್ರಯತ್ನ. ಹಾಗೆಯೇ, ಕೇಂದ್ರ ಬಿಜೆಪಿ ಸರ್ಕಾರವು ತನ್ನ ಹಣಕಾಸಿನ ಜವಾಬ್ದಾರಿಯನ್ನು ಶೇ.60ಕ್ಕೆ (ಹಿಂದೆ ಶೇ.90) ಇಳಿಸುವುದು ಮತ್ತು ಅದರ ಶೇ.40 ರಷ್ಟು ಹೊರೆಯನ್ನು ರಾಜ್ಯ ಸರ್ಕಾರಗಳಿಗೆ ವರ್ಗಾಯಿಸುತ್ತಿದೆ. ಜಾಬ್ ಕಾರ್ಡ್‌ಗಳನ್ನು ಸುಧಾರಣೆ ಮಾಡುವ ಘೋಷಣೆಯ ಮೂಲಕ ಗ್ರಾಮೀಣ ಜನರನ್ನು ಉದ್ಯೋಗದ ಹಕ್ಕಿನಿಂದ ವಂಚಿತರನ್ನಾಗಿ ಮಾಡುವುದು ಈ ಯೋಜನೆಯ ಭಾಗವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಜಿಲ್ಲಾಧ್ಯಕ್ಷೆ ದೀಪಾ ಧಾರವಾಡ ಮಾತನಾಡಿ, ಕೇಂದ್ರ ಸರ್ಕಾರ ವಿಬಿ ಜಿ ರಾಮ್ ಜಿ ಮಸೂದೆಯನ್ನು ಕೈಬಿಟ್ಟು, ಈ ಹಿಂದೆ ಇದ್ದ ಮನರೇಗಾ ಯೋಜನೆಯನ್ನು ಮುಂದುವರಿಸಬೇಕು ಮತ್ತು ಕೂಲಿ ಕಾರ್ಮಿಕರ ಬದುಕನ್ನು ಸುಧಾರಿಸುವ ಸಲುವಾಗಿ ಪ್ರತಿ ಕುಟುಂಬಕ್ಕೆ ವಾರ್ಷಿಕ 200 ಮಾನವ ದಿನಗಳ ಕೆಲಸ, ₹ 600 ವೇತನ ನೀಡಬೇಕು. ಇಲ್ಲದಿದ್ದಲ್ಲಿ ಕೇಂದ್ರ ಬಿಜೆಪಿ ಸರ್ಕಾರದ ಈ ಜನ ವಿರೋಧಿಗೆ ಹೋರಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ವೇಳೆ ಮುಖಂಡರಾದ ಶರಣು ಗೋನವರ, ರಾಣಪ್ಪ ಸಾವಂತನವರ, ಮಡಿವಾಳಪ್ಪ, ಮಲ್ಲಪ್ಪ, ಮಾರುತಿ ಪೂಜಾರ, ಸಿದ್ದಮ್ಮ, ಮಂಜುನಾಥ ಪಾಟೀಲ, ವಿಜಯಲಕ್ಷ್ಮಿ ನಿಕ್ಕಮ್, ಶ್ರೀದೇವಿ ದೊಡ್ಡಮನೆ, ಹನುಮವ್ವ, ಇಮಾಮ್ ಸಾಬ್ ಇದ್ದರು.