ಸಾರಾಂಶ
ಕನ್ನಡಪ್ರಭ ವಾರ್ತೆ ಮುದಗಲ್ಕೇಂದ್ರ ಸರ್ಕಾರ ವಕ್ಪ್ ಬಿಲ್ ತಿದ್ದುಪಡಿ ಮಾಡಿರುವುರುದನ್ನು ಖಂಡಿಸಿ, ಮುಸ್ಲಿಮರು ವಿರೋಧ ಮಾಡುವುದು ಸರಿಯಲ್ಲ ಎಂದು ಶ್ರೀರಾಮ ಸೇನೆ ಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ್ ಹೇಳಿದರು. ಪಟ್ಟಣದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮುಸ್ಲಿಂ ಸಮಾಜದ ಸುನ್ನಿ ಪಂಗಡದ ಅಧೀನಲ್ಲಿದ್ದ ವಕ್ಪ್ ಬೋರ್ಡಿನ 29 ಸಾವಿರ ಎಕರೆ ಆಸ್ತಿಯನ್ನು ಬಡವರಿಗೆ ಹಂಚದೇ ಶ್ರೀಮಂತರಿಗೆ ನೀಡಿ ವಂಚನೆ ಮಾಡಿದ್ದರು. ಇದರಿಂದ ಕೇಂದ್ರ ಸರ್ಕಾರ ಸುನ್ನಿ, ಮತ್ತು ಶಿಯಾ ಸಮಾಜದ ಬಡವರಿಗೆ ಕಾನೂನು ಪ್ರಕಾರ ಹಂಚಿಕೆಯಾಗಲಿ ಎನ್ನುವ ಉದ್ದೇಶದಿಂದ ಬಿಲ್ ಪಾಸ್ ಮಾಡಿದೆ. ವಕ್ಫ್ ಮಸೂದೆಯ ಕರುಡು ಪ್ರತಿಯನ್ನು ಕೂಲಂಕುಷವಾಗಿ ಪರಿಶೀಲಿಸಿ ಅರ್ಥೈಸಿಕೊಂಡ ನಂತರ ಬಿಲ್ ಗೆ ವಿರೋಧಿಸುವುದು ಮೂರ್ಖತನ ಎಂದರು.
ರಾಜ್ಯ ಸರ್ಕಾರ ಜಾತಿವಾರು ಸಮೀಕ್ಷೆಗೆ ಮುಂದಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸರ್ಕಾರಗಳು ಹಿಂದೂ ಸಮಾಜವನ್ನು ಜಾತಿಕರಣಗೊಳಿಸಿ, ಸಮಾಜವನ್ನು ಒಡೆದು ಹಾಕುವ ಕುತಂತ್ರ ಮಾಡುತ್ತಿದ್ದು, ತುಷ್ಠೀಕರಣ ರಾಜಕಾರಣ ಮಾಡದೇ ಸ್ವಪಕ್ಷದಲ್ಲಿನ ಪರ ವಿರೋಧದ ಮಧ್ಯೆ ಜಾತಿಗಣತಿಯನ್ನು ಅಸ್ತ್ರವನ್ನಾಗಿಸಿಕೊಂಡು ಷಡ್ಯಂತ್ರ ನಡೆಸಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.ಕಾಂಗ್ರೆಸ್ ಸರ್ಕಾರ ಎಸ್.ಸಿ,ಎಸ್.ಟಿ ಹಣ ಹಾಗೂ ವಾಕ್ಮೀಕಿ ನಿಗಮದ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ವರ್ಗಾಯಿಸಿದೆ. ಸರ್ಕಾರದಲ್ಲಿ ಅತಿಥಿ ಉಪನ್ಯಾಶಕರಿಗೆ ಹಣ ನೀಡುತ್ತಿಲ್ಲ, ಗುತ್ತಿಗೆದಾರರಿಗೆ, ನೌಕರರಿಗೆ ನೀಡಲು ಸರ್ಕಾರದ ಬಳಿ ಹಣವಿಲ್ಲ. ಸರ್ಕಾರಗಳು ಪದೇ ಪದೇ ಬೆಲೆ ಏರಿಕೆ ಮಾಡುತ್ತಿರುವುದರಿಂದ ದಿನ ಬಳಕೆ ವಸ್ತುಗಳು ದಾರಣೆ ಗಗನಕ್ಕೇರಿದೆ. ಶಾಸಕರು, ಸಂಸದರು ಸ್ಥಿತಿವಂತರಿದ್ದರು. ಇವರ ವೇತನವನ್ನು ದುಪ್ಪಟ್ಟು ಮಾಡುವುದು ಸರಿಯೇ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದರು.
ಹಿಂದೂ ಮುಖಂಡ ಹಾಗೂ ಶಾಸಕ ಬಸನಗೌಡ ಪಾಟೀಲ್ ಅವರನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡಿರುವುದು ಸರಿಯಲ್ಲ. ಪಕ್ಷದ ಲ್ಲಿ ಭಿನ್ನಾಪ್ರಾಯಗಳನ್ನು ಪರಿಶೀಲಿಸಿ ಕೇಂದ್ರ ಶಿಸ್ತು ಸಮಿತಿ ಯತ್ನಾಳ ರನ್ನು ಉಳಿಸಿಕೊಳ್ಳುವುದು ಸೂಕ್ತ ಎಂದರು. ಡಾ.ಗುರುರಾಜ ದೇಶಪಾಂಡೆ, ಮಹಾಂತೇಶ ಅಕ್ಷತಿ, ಹೇಮಂತ ನಾಗಲಾಪೂರ ಸೇರಿದಂತೆ ಆರ್.ಎಸ್.ಎಸ್ ಕಾರ್ಯಕರ್ತರು ಇದ್ದರು.