ರಂಗೇರಿದ ಅಂಜುಮನ್‌ ಸಂಸ್ಥೆ ಚುನಾವಣೆಗೆ ಪ್ರತಿಭಟನೆ ಬಿಸಿ

| Published : Feb 06 2024, 01:33 AM IST

ಸಾರಾಂಶ

ಅಂಜುಮನ್‌ ಸಂಸ್ಥೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಬಂದಿದ್ದ ಅಭ್ಯರ್ಥಿಗಳು ಹಾಗೂ ಹಳೇ ಹುಬ್ಬಳ್ಳಿ ಗಲಾಟೆ ಬಂಧಿತರ ಕುಟುಂಬಸ್ಥರ ನಡುವೆ ವಾಗ್ವಾದ ನಡೆಯಿತು.

ಹುಬ್ಬಳ್ಳಿ:

ಇಲ್ಲಿನ ಮುಸ್ಲಿಂ ಸಮಾಜದ ಪ್ರತಿಷ್ಠಿತ ಸಂಸ್ಥೆಯಾಗಿರುವ ಅಂಜುಮನ್‌-ಏ-ಇಸ್ಲಾಂ ಸಂಸ್ಥೆ ಚುನಾವಣೆಯ ರಂಗು ದಿನದಿಂದ ದಿನಕ್ಕೆ ಏರುತ್ತಿದೆ. ಈ ನಡುವೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದ ಸೋಮವಾರ ಹಳೇ ಹುಬ್ಬಳ್ಳಿ ಗಲಾಟೆಯಲ್ಲಿ ಬಂಧಿತರಾದವರನ್ನು ಮೊದಲು ಬಿಡುಗಡೆಗೊಳಿಸಿ, ನಂತರವೇ ಚುನಾವಣೆ ನಡೆಸಬೇಕು ಎಂಬ ಬೇಡಿಕೆ ಮುಂದಿಟ್ಟು ಪ್ರತಿಭಟನೆ ಕೂಡ ನಡೆಯಿತು.

ನಾಮಪತ್ರ ಸಲ್ಲಿಸಲು ಬಂದಿದ್ದ ಅಭ್ಯರ್ಥಿಗಳು ಹಾಗೂ ಬಂಧಿತರ ಕುಟುಂಬಸ್ಥರ ನಡುವೆ ವಾಗ್ವಾದವೂ ನಡೆಯಿತು. ಒಂದು ಹಂತದಲ್ಲಿ ಅಭ್ಯರ್ಥಿಗಳ ಬೆಂಬಲಿಗರು ಹಾಗೂ ಕುಟುಂಬಸ್ಥರ ಮಧ್ಯೆ ಕೈ ಕೈ ಮಿಲಾಯಿಸುವ ಹಂತಕ್ಕೂ ವಾಗ್ವಾದ ತಲುಪಿತ್ತು. ಇದರಿಂದ ಕೆಲ ಕಾಲ ಗೊಂದಲಮಯ ವಾತಾವರಣ ಕೂಡ ಉಂಟಾಗಿತ್ತು. ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ಶಾಂತಗೊಳಿಸಿದರು.

ಆಗಿದ್ದೇನು?

ಪ್ರತಿ 3 ವರ್ಷಕ್ಕೊಮ್ಮೆ ಅಂಜುಮನ್‌-ಏ-ಇಸ್ಲಾಂ ಸಂಸ್ಥೆಗೆ ಚುನಾವಣೆ ನಡೆಯಬೇಕು. ಆದರೆ ಕೊರೋನಾ ಹಾಗೂ ಕೆಲವೊಂದಿಷ್ಟುವಿವಾದದಿಂದಾಗಿ ಕಳೆದ 5 ವರ್ಷದಿಂದ ಚುನಾವಣೆ ನಡೆದಿರಲಿಲ್ಲ. ಇದೀಗ ಚುನಾವಣೆ ಘೋಷಣೆಯಾಗಿದೆ. ಅಧ್ಯಕ್ಷ, ಕಾರ್ಯದರ್ಶಿ, ಉಪಾಧ್ಯಕ್ಷ, ಕೋಶಾಧ್ಯಕ್ಷ, ಜಂಟಿ ಕಾರ್ಯದರ್ಶಿ ಸೇರಿದಂತೆ ಪದಾಧಿಕಾರಿಗಳು, 25 ಜನ ಅಜೀವ ಸದಸ್ಯರು, ಶಿಕ್ಷಣ ಸಂಸ್ಥೆಗಳಿಗೆ 7, ಆಸ್ಪತ್ರೆ ವಿಭಾಗಕ್ಕೆ 4, ಪೆಟ್ರೋನ್‌ ಮೇಂಬರಶಿಪ್‌ಗಾಗಿ 10 ಜನ ಸೇರಿದಂತೆ ವಿವಿಧ ಹುದ್ದೆಗಳಿಗೆ ಬರೋಬ್ಬರಿ 52 ಜನ ಸ್ಥಾನಗಳಿಗೆ ಫೆ.18ರಂದು ಚುನಾವಣೆ ನಡೆಯಲಿದೆ.

ಚುನಾವಣೆ ನಡೆಸಬೇಡಿ

2022ರ ಏಪ್ರಿಲ್‌ 16ರಂದು ಹಳೇಹುಬ್ಬಳ್ಳಿಯಲ್ಲಿ ಗಲಭೆ ನಡೆದಿತ್ತು. ಪೊಲೀಸ್ ಠಾಣೆ, ಆಸ್ಪತ್ರೆ, ದೇವಸ್ಥಾನಗಳ ಮೇಲೆ ಕಲ್ಲು ತೂರಾಟ ಮಾಡಲಾಗಿತ್ತು. 7 ಜನ ಪೊಲೀಸರು ಗಾಯಗೊಂಡರೆ, ಹತ್ತಕ್ಕೂ ಹೆಚ್ಚು ವಾಹನ ಜಖಂಗೊಂಡಿದ್ದವು. ಈ ಕುರಿತು ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ 13 ಎಫ್‌ಐಆರ್ ದಾಖಲಾಗಿದ್ದವು. 152 ಜನರು ಬಂಧನಕ್ಕೊಳಗಾಗಿದ್ದರು. ಅದರಲ್ಲಿ 44 ಜನರು ಇದೀಗ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಇನ್ನು 108 ಜನ ಯುವಕರು ಜೈಲಿನಲ್ಲೇ ಇದ್ದಾರೆ. ಇವರನ್ನು ಬಿಡಿಸಿಕೊಂಡು ಬನ್ನಿ ಎಂಬ ಬೇಡಿಕೆ ಬಂಧನಕ್ಕೊಳಗಾದ ಯುವಕರ ಕುಟುಂಬಸ್ಥರದ್ದು.

ಇದಕ್ಕಾಗಿ ಪ್ರತಿ ಸಲ ಮಂತ್ರಿಗಳು, ಶಾಸಕರು, ಮುಖ್ಯಮಂತ್ರಿಗಳು ಸೇರಿದಂತೆ ಎಲ್ಲರಿಗೂ ಮನವಿ ಕೊಟ್ಟಾಗಿದೆ. ಆದರೂ ಈ ವರೆಗೂ 108 ಜನರ ಜೈಲಿನಿಂದ ಬಿಡುಗಡೆಯಾಗಿಲ್ಲ. ದುಡಿಯುವ ಮಕ್ಕಳು ಜೈಲಿನಲ್ಲಿದ್ದಾರೆ ಅವರನ್ನು ಬಿಡಿಸಿಕೊಂಡ ಮೇಲೆಯೇ ಚುನಾವಣೆ ನಡೆಸಬೇಕು ಎಂದು ಬೇಡಿಕೆ ಕುಟುಂಬಸ್ಥರದ್ದು. ಇದಕ್ಕಾಗಿ ಇಲ್ಲಿನ ಅಂಜುಮನ್‌ ಸಂಸ್ಥೆಯ ಬಳಿ ಜಮೆಯಾಗಿದ್ದ ಕುಟುಂಬಸ್ಥರು, ಆಕ್ರೋಶ ಹೊರಹಾಕುತ್ತ ಪ್ರತಿಭಟನೆ ನಡೆಸಿದರು.

ನಾಮಪತ್ರ ಸಲ್ಲಿಸಲು ತೆರಳುತ್ತಿದ್ದ ಅಭ್ಯರ್ಥಿಗಳನ್ನು ಅಡ್ಡಗಟ್ಟಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಅಭ್ಯರ್ಥಿಗಳ ಬೆಂಬಲಿಗರು ಹಾಗೂ ಕುಟುಂಬಸ್ಥರ ಮಧ್ಯೆ ವಾಗ್ವಾದ ನಡೆಯಿತು. ಕೈ ಕೈ ಮಿಲಾಯಿಸುವ ಹಂತಕ್ಕೂ ವಾಗ್ವಾದ ಮುಂದುವರಿಯಿತು. ಕೂಡಲೇ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ಶಾಂತಗೊಳಿಸಿದರು.

ಈ ವೇಳೆ ಒಂದು ಬಣದ ಮುಖಂಡರೂ ಆಗಿರುವ ಮಾಜಿ ಸಚಿವ ಎ.ಎಂ. ಹಿಂಡಸಗೇರಿ ಕುಟುಂಬಸ್ಥರೊಂದಿಗೆ ಚರ್ಚೆ ನಡೆಸಿ, ಪ್ರಕರಣ ಇದೀಗ ಕೋರ್ಟ್‌ನಲ್ಲಿದೆ. ಜಾಮೀನು ಕೊಡಿಸಲು ಪ್ರಯತ್ನ ನಡೆದಿದೆ ಎಂದು ಸಮಾಧಾನ ಪಡಿಸಲು ಯತ್ನಿಸಿದರು. ಅನ್ವರ ಮುಧೋಳ ಬಣ ಕೂಡ ಯಾರೇ ಚುನಾವಣೆಯಲ್ಲಿ ಗೆಲ್ಲಲಿ. ನಿಮ್ಮ ಮಕ್ಕಳಿಗೆ ಜಾಮೀನು ಕೊಡಿಸಲು ಸಂಸ್ಥೆಯಿಂದ ಪ್ರಯತ್ನ ಮುಂದುವರಿಸುವುದಾಗಿ ಭರವಸೆ ನೀಡಿದರು.

ಈ ವೇಳೆ ತಳ್ಳಾಟ ನೂಕಾಟವೂ ನಡೆದು ಸ್ಥಳದಲ್ಲಿ ಕೆಲ ಬಿಗುವಿನ ವಾತಾವರಣವೂ ಉಂಟಾಗಿತ್ತು. ಕೊನೆಗೆ ಪೊಲೀಸರು ಎಲ್ಲರನ್ನು ಸಮಾಧಾನ ಪಡಿಸಿ ಕಳುಹಿಸಿದರು. ಸ್ಥಳದಲ್ಲೇ ಹೆಚ್ಚುವರಿ ಪೊಲೀಸ್‌ ಸಿಬ್ಬಂದಿ ನಿಯೋಜಿಸಲಾಗಿದೆ.

ಬಣಗಳ ನಡುವೆ ಪೈಪೋಟಿ

52 ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ನಾಲ್ಕು ಪ್ಯಾನಲ್‌ಗಳು ಕಣದಲ್ಲಿವೆ. ಹಾಲಿ ಅಧ್ಯಕ್ಷರಾಗಿರುವ ಯೂಸೂಫ್‌ ಸವಣೂರ, ಅಲ್ತಾಫ್‌ ಕಿತ್ತೂರು ನೇತೃತ್ವದ ಬಣ, ಮಾಜಿ ಸಚಿವ ಎ.ಎಂ. ಹಿಂಡಸಗೇರಿ ನೇತೃತ್ವದ ಪ್ಯಾನಲ್‌, ಅಶ್ರಫ್‌ಅಲಿ ನೇತೃತ್ವದ ಪ್ಯಾನಲ್‌, ಹಾಗೂ ಅನ್ವರ ಮುಧೋಳ, ಮಜರಖಾನ್‌ ನೇತೃತ್ವದ ತಂಡ ಹೀಗೆ ನಾಲ್ಕು ಬಣಗಳು ಚುನಾವಣಾ ಕಣದಲ್ಲಿವೆ. ಒಟ್ಟು 208 ಜನರಲ್ಲಿ 52 ಜನರನ್ನು ಆಯ್ಕೆ ಮಾಡಬೇಕಿದೆ. ಚುತುಷ್ಕೋನ್‌ ಸ್ಪರ್ಧೆ ಏರ್ಪಟಿದೆ. ಯಾವ ಪ್ಯಾನಲ್‌ ಗೆಲ್ಲಲಿದೆ ಎಂಬುದನ್ನು ಕಾಯ್ದು ನೋಡಬೇಕು.

ಅಂಜುಮನ್‌ ಚುನಾವಣೆ ನಡೆಯುತ್ತಿದೆ. 52 ಜನರನ್ನು ಆಯ್ಕೆ ಮಾಡಬೇಕಿದೆ. ತಮ್ಮ ನೇತೃತ್ವದ ಪ್ಯಾನಲ್‌ ಕೂಡ ನಾಮಪತ್ರ ಸಲ್ಲಿಸಿದೆ. ಹಳೇಹುಬ್ಬಳ್ಳಿ ಗಲಾಟೆಯಲ್ಲಿ ಬಂಧಿತರಾದವರ ಕುಟುಂಬಸ್ಥರು ಆಗಮಿಸಿ ಬಿಡುಗಡೆಗೊಳಿಸುವಂತೆ ಒತ್ತಾಯಿಸಿದರು. ಕೋರ್ಟ್‌ನಲ್ಲಿ ಪ್ರಕರಣ ಇದೆ. ಹೀಗಾಗಿ, ಸಮಾಧಾನ ಮಾಡಿ ಕಳುಹಿಸಿದ್ದೇವೆ ಎಂದು ಮಾಜಿ ಸಚಿವ ಎ.ಎಂ. ಹಿಂಡಸಗೇರಿ ಹೇಳಿದರು.