ಒಂಬತ್ತು ವಿವಿ ಮುಚ್ಚುವ ಸಚಿವ ಸಂಪುಟ ತೀರ್ಮಾನಕ್ಕೆ ವಿರೋಧ

| Published : Feb 18 2025, 12:33 AM IST

ಸಾರಾಂಶ

ಆರ್ಥಿಕವಾಗಿ ದಿವಾಳಿಯಾಗಿರುವ ರಾಜ್ಯ ಸರ್ಕಾರ ೯ ವಿಶ್ವವಿದ್ಯಾನಿಲಯಗಳನ್ನು ಮುಚ್ಚಲು ಸಚಿವ ಸಂಪುಟ ಮುಂದಾಗಿರುವ ನಡೆ ಖಂಡಿಸಿ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಸೋಮವಾರ ಪ್ರತಿಭಟಿಸಿ ನಡೆಸಿದರು.

ಎಬಿವಿಪಿ ನೇತೃತ್ವದಲ್ಲಿ ಪ್ರತಿಭಟನೆ । ಗ್ಯಾರಂಟಿಗೆ ನೀಡುವುದರಲ್ಲಿ ಶೇ.1 ವಿವಿಗೆ ನೀಡಿದರೆ ಅನುಕೂಲ

ಕನ್ನಡಪ್ರಭ ವಾರ್ತೆ ಹಾಸನ

ಆರ್ಥಿಕವಾಗಿ ದಿವಾಳಿಯಾಗಿರುವ ರಾಜ್ಯ ಸರ್ಕಾರ ೯ ವಿಶ್ವವಿದ್ಯಾನಿಲಯಗಳನ್ನು ಮುಚ್ಚಲು ಸಚಿವ ಸಂಪುಟ ಮುಂದಾಗಿರುವ ನಡೆ ಖಂಡಿಸಿ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಸೋಮವಾರ ಪ್ರತಿಭಟಿಸಿ ನಡೆಸಿದರು. ಎಬಿವಿಪಿ ವಿಭಾಗ ಸಂಚಾಲಕ ಜಿ. ಗಿರೀಶ್ ಮಾತನಾಡಿ, ಚಾಮರಾಜನಗರ, ಕೊಪ್ಪಳ, ಬೀದರ್, ಕೊಡಗು ಅಂತಹ ಹಿಂದುಳಿದ ಜಿಲ್ಲೆಗಳಲ್ಲಿರುವ ವಿಶ್ವವಿದ್ಯಾಲಯಗಳನ್ನು ಮುಚ್ಚಲು ಹೊರಟಿರುವ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸುತ್ತೇವೆ. ಇದರಿಂದ ಆಯಾ ಜಿಲ್ಲೆಗಳ ಜನರಿಗೆ ಅನ್ಯಾಯ ಎಸೆದಂತಾಗುತ್ತದೆ. ರಾಜ್ಯ ಸರ್ಕಾರ ತನ್ನ ಗ್ಯಾರಂಟಿಗಳಿಗೆ ಪ್ರತಿ ವರ್ಷ ೫೦ ಸಾವಿರ ಕೋಟಿ ರು. ನೀಡುತ್ತಿದೆ. ಅದರಲ್ಲಿ ಶೇ.೧ ರಷ್ಟು ಅಂದರೆ ೫೦೦ ಕೋಟಿ ರು. ವಿಶ್ವವಿದ್ಯಾಲಯಗಳಿಗೆ ನೀಡಿದರೆ ರಾಜ್ಯದ ವಿಶ್ವವಿದ್ಯಾಲಯಗಳ ಸ್ಥಿತಿ-ಗತಿ ಸುಧಾರಿಸುತ್ತದೆ. ಕಳೆದ ೧೦-೧೫ ವರ್ಷಗಳಿಂದ ರಾಜ್ಯ ಸರ್ಕಾರಗಳು ವಿಶ್ವವಿದ್ಯಾಲಯಗಳಿಗೆ ಯಾವುದೇ ರೀತಿಯ ಅನುದಾನಗಳನ್ನು ನೀಡಿರುವುದಿಲ್ಲ. ಎಲ್ಲಾ ವಿಶ್ವವಿದ್ಯಾನಿಲಯಗಳು ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕ, ಮರುಎಣಿಕೆ ಅಥವಾ ಮರು ಮೌಲ್ಯ ಮಾಪನ ಶುಲ್ಕಗಳಲ್ಲಿ ಮತ್ತು ಆಂತರಿಕ ಹಣಕಾಸು ಉತ್ಪಾದನೆಯ ಮೂಲಕ ಇಂದು ವಿಶ್ವವಿದ್ಯಾಲಯಗಳು ನಡೆಯುತ್ತಿರುವುದು ಅವಮಾನದ ಸಂಗತಿಯಾಗಿದೆ.

ಕರ್ನಾಟಕದಂತಹ ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ತನ್ನದೇ ಆದ ಗೌರವ ಮತ್ತು ಹೆಗ್ಗಳಿಕೆ ಇದೆ. ಆದ್ದರಿಂದ ಕೇವಲ ಹಣಕಾಸಿನ ದೃಷ್ಠಿಯಿಂದ ವಿಶ್ವವಿದ್ಯಾಲಯಗಳನ್ನು ಮುಚ್ಚಲು ಹೊರಟಿರುವುದು, ಈ ಘನ ಸರ್ಕಾರಕ್ಕೆ ಶೋಭೆ ತರುವಂತಹ ಕಾರ್ಯವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಹಿಂದಿನ ರಾಜ್ಯ ಸರ್ಕಾರ ಜಿಲ್ಲೆಗೊಂದು ವಿಶ್ವವಿದ್ಯಾಲಯ ಪ್ರಾರಂಭಿಸಿದರೆ ಅಲ್ಲಿನ ಗ್ರಾಮೀಣ ಮಕ್ಕಳ ಉನ್ನತ ಶಿಕ್ಷಣಕ್ಕೆ ಅನುಕೂಲವಾಗುತ್ತದೆ ಎಂಬ ಉದ್ದೇಶದಿಂದ ಹೊಸದಾಗಿ ೧೦ ವಿಶ್ವವಿದ್ಯಾನಿಲಯಗಳನ್ನು ಪ್ರಾರಂಭಿಸಿತ್ತು. ಹಾಸನ, ಚಾಮರಾಜನಗರ, ಹಾವೇರಿ, ಕೊಡಗು, ಕೊಪ್ಪಳ, ಬಾಗಲಕೋಟೆ, ಮಹಾರಾಣಿ ಕ್ಲಸ್ಟರ್, ಮಂಡ್ಯ, ನೃಪತುಂಗ ವಿಶ್ವವಿದ್ಯಾಲಯ ಹಾಗೂ ಬೀದರ್‌ನಲ್ಲಿ ಹೊಸ ವಿಶ್ವವಿದ್ಯಾನಿಲಯ ಪ್ರಾರಂಭಿಸುವುದಕ್ಕೆ ಹಿಂದಿನ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿತ್ತು.

ಇಂದಿನ ರಾಜ್ಯ ಸರ್ಕಾರ ವಿಶ್ವ ವಿದ್ಯಾನಿಲಯಗಳಿಗೆ ಅನುದಾನ ನೀಡಿ, ಅಭಿವೃದಿಪಡಿಸದೆ ಅವುಗಳನ್ನು ಮುಚ್ಚುವುದಕ್ಕೆ ಸಚಿವ ಸಂಪುಟ ಉಪ ಸಮಿತಿಯಲ್ಲಿ ನಿರ್ಧರಿಸುವುದು ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ರಾಜ್ಯ ಸರ್ಕಾರ ಅನ್ಯಾಯ ಮಾಡುತ್ತಿರುವುದನ್ನು ತೀವ್ರವಾಗಿ ಖಂಡಿಸುವುದಾಗಿ ಹೇಳಿದರು.

ಸರ್ಕಾರಿ ವಿಶ್ವವಿದ್ಯಾಲಯಗಳನ್ನು ಬಲಿಷ್ಟಗೊಳಿಸುವ ಕಾಳಜಿ ಮತ್ತು ಇಚ್ಚಾಶಕ್ತಿಯನ್ನು ರಾಜ್ಯ ಸರ್ಕಾರ ಮಾಡಬೇಕು. ರಾಜ್ಯದಲ್ಲಿ ಇತ್ತೀಚೆಗೆ ಖಾಸಗಿ ವಿಶ್ವವಿದ್ಯಾಲಯಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಸರ್ಕಾರಿ ವಿಶ್ವವಿದ್ಯಾಲಯಗಳನ್ನು ಮುಚ್ಚುತ್ತಿರುವುದರಿಂದ ರಾಜ್ಯದ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮಾಡುತ್ತಿರುವ ಅನ್ಯಾಯವಾಗಿದೆ. ರಾಜ್ಯ ಸರ್ಕಾರ ಉಚಿತ ಗ್ಯಾರಂಟಿ ಯೋಜನೆಗಳಿಗಾಗಿ ಸಾವಿರಾರು ಕೋಟಿ ರು. ಬಜೆಟ್‌ನಲ್ಲಿ ಕೊಟ್ಟಿದೆ. ಆದರೆ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಹಣ ಒದಗಿಸುವುದಕ್ಕೆ ಆಗದೆ ೯ ವಿಶ್ವವಿದ್ಯಾನಿಯಗಳನ್ನು ಮುಚ್ಚಲು ಮುಂದಾಗಿದೆ ಎಂದು ಆರೋಪಿಸಿದರು.

ಯಾವ ಶಿಕ್ಷಣ ತಜ್ಞರ ಶಿಫಾರಸ್ಸಿನ ಮೇಲೆ ವಿಶ್ವವಿದ್ಯಾನಿಲಯಗಳನ್ನು ಮುಚ್ಚುತ್ತಿದ್ದೀರಾ? ಎಂಬುವುದನ್ನು ತಿಳಿಸಬೇಕು. ರಾಜ್ಯದ ಉನ್ನತ ಶಿಕ್ಷಣ ಪರಿಷತ್ ಶಿಫಾರಸು ಮಾಡಿರುವ ಹಣವನ್ನು ರಾಜ್ಯ ಸರ್ಕಾರ ಕೂಡಲೇ ಬಿಡುಗಡೆ ಮಾಡಬೇಕು ಇಲ್ಲವಾದಲ್ಲಿ ವಿದ್ಯಾರ್ಥಿ ಪರಿಷತ್ ರಾಜ್ಯದಾದ್ಯಂತ ಪ್ರತಿಭಟನೆಯನ್ನು ನಡೆಸುತ್ತಿದೆ ಎಂದು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಎಬಿವಿಪಿ ಮುಖಂಡರಾದ ಸ್ಮಿತಾ, ಲ್ಯಾನಾ, ಲೇಪಾಕ್ಷಿ, ವೇಣು, ಶ್ರೀನಿವಾಸ್ , ಮೋನಿಕಾ, ಸುಶ್ಮಿತಾ, ವರುಣ್ ಇದ್ದರು.