ಕಾರಡಗಿ ಗ್ರಾಮದಲ್ಲಿ ಅತಿಕ್ರಮಣ ಜಾಗದಲ್ಲಿ ಕಾಂಪೌಂಡ್‌ ಕಾಮಗಾರಿಗೆ ವಿರೋಧ

| Published : May 16 2025, 01:54 AM IST

ಕಾರಡಗಿ ಗ್ರಾಮದಲ್ಲಿ ಅತಿಕ್ರಮಣ ಜಾಗದಲ್ಲಿ ಕಾಂಪೌಂಡ್‌ ಕಾಮಗಾರಿಗೆ ವಿರೋಧ
Share this Article
  • FB
  • TW
  • Linkdin
  • Email

ಸಾರಾಂಶ

ಸ್ಥಳಕ್ಕೆ ಆಗಮಿಸಿದ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಶಿಡೇನೂರ ಅವರು, ಕಾಂಪೌಂಡ್ ಕಾಮಗಾರಿಯನ್ನು ಸದ್ಯಕ್ಕೆ ಸ್ಥಗಿತಗೊಳಿಸಿ. ಒಂದು ವಾರ ಕಾಲಾವಕಾಶ ನೀಡಿ. ಈ ಕುರಿತು ಎಲ್ಲ ದಾಖಲೆಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರಿಂದ ಪರಿಸ್ಥಿತಿ ತಿಳಿಯಾಯಿತು.

ಸವಣೂರು: ತಾಲೂಕಿನ ಕಾರಡಗಿ ಗ್ರಾಮದ ಜುಮ್ಮಾ ಮಸೀದಿ ಪಕ್ಕದ ಗಾಂವಠಾಣ ಜಾಗವನ್ನು ಅತಿಕ್ರಮಣ ಮಾಡಿ ಕಾಂಪೌಂಡ್ ನಿರ್ಮಿಸುತ್ತಿದ್ದಾರೆಂದು ಆರೋಪಿಸಿ ಒಂದು ಸಮುದಾಯದವರು ವಿರೋಧ ವ್ಯಕ್ತಪಡಿಸಿದ್ದರಿಂದ ಬುಧವಾರ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.ಗ್ರಾಮದ ಅಂಜುಮನ್ ಕಮಿಟಿಯವರು ಮಸೀದಿ ಪಕ್ಕದ ಗಾಂವಠಾಣ ಜಾಗವನ್ನು ಅತಿಕ್ರಮಣ ಮಾಡಿ ಕಾಂಪೌಂಡ್ ಕಾಮಗಾರಿ ಕೈಗೊಂಡಿದ್ದರು ಎನ್ನಲಾಗಿದೆ. ಈ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಇನ್ನೊಂದು ಸಮುದಾಯವದರು ಗ್ರಾಪಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಆದರೂ ಕಾಮಗಾರಿ ಮುಂದುವರಿದಿತ್ತು. ಬುಧವಾರ ಸ್ಥಳಕ್ಕೆ ಒಂದು ಸಮುದಾಯದ ಜನರು ತೆರಳಿ ಕಾಂಪೌಂಡ್‌ ಕಾಮಗಾರಿ ಸ್ಥಗಿತಗೊಳಿಸುವಂತೆ ಆಗ್ರಹಿಸಿದಾಗ ಎರಡು ಸಮುದಾಯದವರ ಮಧ್ಯೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಆಗ ಸ್ಥಳಕ್ಕೆ ಆಗಮಿಸಿದ ಸಿಪಿಐ ಅನಿಲಕುಮಾರ ರಾಠೋಡ ಎರಡೂ ಸಮುದಾಯದ ಜನರನ್ನು ಸಮಾಧಾನಪಡಿಸಿ, ಗ್ರಾಪಂ ಕಾರ್ಯಾಲಯಕ್ಕೆ ಕರೆಸಿ ಮಾತುಕತೆ ನಡೆಸಿದರು.ಆಗ ಸ್ಥಳಕ್ಕೆ ತಹಸೀಲ್ದಾರ್, ತಾಪಂ ಅಧಿಕಾರಿಗಳು ಬರಬೇಕು, ಕಾರಡಗಿ ಗ್ರಾಮದಲ್ಲಿ ಗಾಂವಠಾಣ ಜಾಗ, ಕೆರೆ ಒತ್ತುವರಿ ಸಮಸ್ಯೆಗಳ ಬಗ್ಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನಯಾಗಿಲ್ಲ. ಈ ಸಮಸ್ಯೆಗಳಿಗೆ ಪರಿಹಾರ ನೀಡಬೇಕೆಂದು ಸಾರ್ವಜನಿಕರು ಆಗ್ರಹಿಸಿದರು.ಗ್ರಾಪಂ ಅಭಿವೃದ್ಧಿ ಅಧಿಕಾರಿಯವರು ಗ್ರಾಪಂ ಗಾಂವಠಾಣ ಜಾಗ ಅತಿಕ್ರಮಣ ಮಾಡಿಕೊಂಡವರಿಗೆ ಇ ಸ್ವತ್ತು ಉತಾರ ನೀಡಿದ್ದಾರೆ. ಈ ವಿಷಯವನ್ನು ಸದಸ್ಯರ ಗಮನಕ್ಕೆ ಅಥವಾ ಸಭೆಗಳಲ್ಲಿ ಚರ್ಚಿಸಿರುವ ನಿರ್ಣಯ, ಠರಾವು ಸಹ ಇಲ್ಲ. ಹೇಗೆ ಇ ಸ್ವತ್ತು ಉತಾರ ನೀಡಿದ್ದಿರಿ ಎಂದು ಒಂದು ಸಮುದಾಯದ ಜನರು ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡರು.ನಂತರ ಆಗಮಿಸಿದ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಶಿಡೇನೂರ ಅವರು, ಕಾಂಪೌಂಡ್ ಕಾಮಗಾರಿಯನ್ನು ಸದ್ಯಕ್ಕೆ ಸ್ಥಗಿತಗೊಳಿಸಿ. ಒಂದು ವಾರ ಕಾಲಾವಕಾಶ ನೀಡಿ. ಈ ಕುರಿತು ಎಲ್ಲ ದಾಖಲೆಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರಿಂದ ಪರಿಸ್ಥಿತಿ ತಿಳಿಯಾಯಿತು.

ಉಗ್ರ ಹೋರಾಟ: ಗ್ರಾಪಂ ಗಾಂವಠಾಣ ಜಾಗವನ್ನು ಅತಿಕ್ರಮಣ ಮಾಡಿದವರಿಗೆ ಇ ಸ್ವತ್ತು ಉತಾರ ನೀಡಿರುವುದನ್ನು ರದ್ದುಪಡಿಸಬೇಕು. ಅತಿಕ್ರಮಣ ಜಾಗದಲ್ಲಿ ನಿರ್ಮಿಸುತ್ತಿರುವ ಕಾಂಪೌಂಡ್ ಕಾಮಗಾರಿಯನ್ನು ತೆರವುಗೊಳಿಸಬೇಕು. ಇಲ್ಲವಾದಲ್ಲಿ ಗ್ರಾಪಂ ಕಾರ್ಯಾಲಯಕ್ಕೆ ಬೀಗ ಹಾಕಿ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಗ್ರಾಮಸ್ಥರಾದ ಗದಿಗೆಪ್ಪ ಕುರುವತ್ತಿ ತಿಳಿಸಿದರು.