ಕನಕಪುರ: ಕಾವೇರಿ ವನ್ಯಧಾಮ ವಿಭಾಗದ ಚಿಲಂದವಾಡಿ ಅರಣ್ಯ ಪ್ರದೇಶದ ಸರ್ವೆ ನಂ. 2,3,4,6,7ರಲ್ಲಿ ಓಂ ಶಾಂತಿ ಧಾಮದ ಶೈಕ್ಷಣಿಕ ಕೇಂದ್ರದಲ್ಲಿ ಕಾನೂನು ಬಾಹಿರ ವಸತಿ ಸಂಕೀರ್ಣಗಳನ್ನು ನಿರ್ಮಿಸುತ್ತಿರುವುದಾಗಿ ರೈತ ಮುಖಂಡ ನಲ್ಲಹಳ್ಳಿ ಶ್ರೀನಿವಾಸ್ ಆರೋಪಿಸಿದರು.
ತಾಲೂಕಿನ ಸಂಗಮ ಅರಣ್ಯ ಪ್ರದೇಶ ವ್ಯಾಪ್ತಿಯ ಕಾವೇರಿ ವನ್ಯಜೀವಿಧಾಮ ಚಿಲ್ಲಿಂದವಾಡಿ ಅರಣ್ಯ ಪ್ರದೇಶದ ಸರ್ವೆ ಸಂಖ್ಯೆ 2, 3, 4, 5, 6, 7ರಲ್ಲಿ ಓಂ ಶಾಂತಿಧಾಮ/ಓಂ ಶಾಂತಿಧಾಮ ಶೈಕ್ಷಣಿಕ ಕೇಂದ್ರ/ಆನಂದಧಾಮ/ ಎಂಬ ಹೆಸರುಗಳಲ್ಲಿ ಯೋಗ ಆಧ್ಯಾತ್ಮಿಕ ಕೇಂದ್ರ ನಡೆಸುತ್ತೇವೆಂದು ಹೇಳಿ, ಈಗ ಇಲ್ಲಿ ವಸತಿ ಸಂಕೀರ್ಣ ನಿರ್ಮಿಸಲು ಅನುಮತಿ ಕೋರಿದೆ ಎಂದು ಆರೋಪಿಸಿದರು.ಅಧ್ಯಾತ್ಮದ ಹೆಸರಿನಲ್ಲಿ ಅಕ್ರಮ ಪ್ರವಾಸೋದ್ಯಮ, ರೆಸಾರ್ಟ್ ನಡೆಸುತ್ತಿರುವ ಬಗ್ಗೆ ಸೆಂಟ್ರಲ್ ಎಂಪವರ್ಡ್ ಸಮಿತಿ(ಸಿಇಸಿ)ಯಲ್ಲಿ ಮೇ 2014ರಲ್ಲಿ ಇವರ ವಿರುದ್ಧ ದೂರು ದಾಖಲಿಸಿದ್ದರು. ಅರಣ್ಯ ಇಲಾಖೆಯಿಂದ ಎಷ್ಟೇ ನೋಟಿಸ್ ಕೊಟ್ಟರೂ ಉತ್ತರ ನೀಡದೆ ನಿರ್ಲಕ್ಷಿಸಿದ್ದರು. ಇವರ ವಿರುದ್ಧ ಅರಣ್ಯ ಇಲಾಖೆ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಮೊಕೊದ್ದಮೆ ಹೂಡಿತ್ತು. ವನ್ಯಜೀವಿ ಧಾಮದೊಳಗಿರುವ ಖಾಸಗಿ ಜಾಗಗಳನ್ನು ವಾಣಿಜ್ಯ ಉದ್ದೇಶಗಳಿಗೆ ಉಪಯೋಗಿಸಬಾರದು ಎಂದು ನ್ಯಾಯಾಲಯದ ಆದೇಶದಲ್ಲಿ ಸ್ಪಷ್ಟವಾಗಿ ಸೂಚಿಸಿದ್ದರೂ ಆದೇಶವನ್ನು ಗಾಳಿಗೆ ತೂರಿ ಅಕ್ರಮವಾಗಿ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಮುಂದಾಗಿರುವ ಆಶ್ರಮದ ವಾರಸುದಾರರಿಗೆ ಅರಣ್ಯ ಇಲಾಖೆ ಅನುಮತಿ ನೀಡಬಾರದು ಎಂದು ಕಾವೇರಿ ವನ್ಯಧಾಮದ ಉಪ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಇಲಾಖೆ ಅನುಮತಿ ನೀಡಿದರೆ ರೈತ ಸಂಘದ ವತಿಯಿಂದ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕೆ ಕೆ ಪಿ ಸುದ್ದಿ 02:ಕಾವೇರಿ ವನ್ಯಧಾಮದ ಉಪ ಅಧಿಕಾರಿಗಳಿಗೆ ಕಾವೇರಿ ವನ್ಯಜೀವಿ ವ್ಯಾಪ್ತಿಯಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸದಂತೆ ರೈತ ಮುಖಂಡ ನಲ್ಲಹಳ್ಳಿ ಶ್ರೀನಿವಾಸ್ ನೇತೃತ್ವದಲ್ಲಿ ಮುಖಂಡರು ಮನವಿ ಸಲ್ಲಿಸಿದರು.