ಬೆಂಗ್ಳೂರಲ್ಲಿ ಈದ್ ಮಿಲಾದ್‌ ಸಮ್ಮೇಳನಕ್ಕೆ ವಿರೋಧ

| Published : Sep 04 2025, 01:00 AM IST

ಬೆಂಗ್ಳೂರಲ್ಲಿ ಈದ್ ಮಿಲಾದ್‌ ಸಮ್ಮೇಳನಕ್ಕೆ ವಿರೋಧ
Share this Article
  • FB
  • TW
  • Linkdin
  • Email

ಸಾರಾಂಶ

ಅರಮನೆ ಮೈದಾನದಲ್ಲಿ ಸೆ.5 ಮತ್ತು 6ರಂದು ಆಯೋಜಿಸಿರುವ ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ಹಿಂದೂ ಸಂಘಟನೆಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಇಸ್ಲಾಂ ಧರ್ಮ ಸಂಸ್ಥಾಪಕ ಮೊಹಮದ್‌ ಪೈಗಂಬರರ 1500ನೇ ಜನ್ಮ ದಿನಾಚರಣೆ ಅಂಗವಾಗಿ ಅರಮನೆ ಮೈದಾನದಲ್ಲಿ ಸೆ.5 ಮತ್ತು 6ರಂದು ‘ಮಿಲದುನ್ನಬಿ’ ಹೆಸರಲ್ಲಿ ಆಯೋಜಿಸಿರುವ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರವಾಸೀ ವೀಸಾದಡಿ ಹಲವು ವಿದೇಶಿ ಮುಸ್ಲಿಂ ಧರ್ಮ ಗುರುಗಳು, ಮುಖಂಡರು ಭಾವಹಿಸುತ್ತಿರುವುದಕ್ಕೆ ಹಿಂದೂ ಸಂಘಟನೆಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ಈದ್‌ ಮಿಲಾದ್‌ ಹೆಸರಲ್ಲಿ ಕೆಲ ಮುಸ್ಲಿಂ ಸಂಘಟನೆಗಳು, ಮುಖಂಡರು ವಿದೇಶಿ ಧರ್ಮಗುರುಗಳನ್ನು ಕರೆಸಿ ಇಸ್ಲಾಂ ಧರ್ಮ ಪ್ರಚಾರಕ್ಕೆ ಮುಂದಾಗಿದ್ದಾರೆ. ಇದಕ್ಕೆ ಯಾವುದೇ ಕಾರಣಕ್ಕೂ ಸರ್ಕಾರ ಅವಕಾಶ ನೀಡಬಾರದು ಎಂದು ಹಿಂದೂ ಪರ ಹೋರಾಟಗಾರರು, ಸಂಘಟನೆಗಳ ಮುಖಂಡರು ಆಗ್ರಹಿಸಿದ್ದಾರೆ. ಈ ಸಂಬಂಧ ಹಿಂದೂ ಪರ ಹೋರಾಟಗಾರ ತೇಸ್‌ ಗೌಡ ಮತ್ತಿತರರು ನಗರ ಪೊಲೀಸ್‌ ಆಯುಕ್ತರಿಗೆ ದೂರು ಕೂಡ ನೀಡಿದ್ದಾರೆ.

ನಿಯಮಾನುಸಾರ ಟೂರಿಸ್ಟ್ ವೀಸಾ ಪಡೆದು ಧರ್ಮ ಪ್ರಚಾರ ಮಾಡುವಂತಿಲ್ಲ. ಕಾರ್ಯಕ್ರಮದಲ್ಲಿ ಭಾಗಿ ಆಗಬಹುದೇ ಹೊರತು ಧರ್ಮಪ್ರಚಾರಕರು ಭಾಷಣ ಮಾಡುವಂತಿಲ್ಲ. ಆದರೆ, ಈ ಕಾರ್ಯಕ್ರಮಕ್ಕೆ ಟೂರಿಸ್ಟ್‌ ವೀಸಾ ಪಡೆದು ಬರುತ್ತಿರುವ ಅನೇಕ ಧರ್ಮಗುರುಗಳು, ಮುಖಂಡರಿಗೆ ಭಾಷಣ ಮಾಡಲು, ಧರ್ಮ ಪ್ರಚಾರ ಮಾಡಲು ಅನುಮತಿ ನೀಡಲಾಗಿದೆ. ಇದು ಕಾನೂನು ಬಾಹಿರ. ಈ ನೆಲದ ಕಾನೂನು ಉಲ್ಲಂಘನೆ ಮಾಡುತ್ತಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಇದರ ಬೆನ್ನಲ್ಲೇ ಎಚ್ಚೆತ್ತ ಸರ್ಕಾರ, ಇಂತಹ ಕಾರ್ಯಕ್ರಮದಲ್ಲಿ ಯಾವುದೇ ವಿದೇಶಿಗರು ಬಂದು ಭಾಷಣ, ಧರ್ಮ ಪ್ರಚಾರ ಮಾಡಲು ಅವಕಾಶವಿಲ್ಲ. ಇಲ್ಲಿ ಯಾವುದೇ ನಿಯಮ ಉಲ್ಲಂಘನೆ ಆಗದಂತೆ ಕ್ರಮ ವಹಿಸಲಾಗುವುದು ಎಂದು ಹೇಳಿದೆ. ಮತ್ತೊಂದೆಡೆ ಈ ಸಮ್ಮೇಳನದ ಬಗ್ಗೆ ಸ್ಪಷ್ಟನೆ ನೀಡಿರುವ ಸಚಿವ ಜಮೀರ್‌ ಅಹಮದ್‌ ಖಾನ್‌, ಈ ಕಾರ್ಯಕ್ರಮದಲ್ಲಿ ಯಾವುದೇ ಧರ್ಮಗುರುಗಳು ಭಾಗವಿಸುತ್ತಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

====

-ಬಾಕ್ಸ್‌-

ನಿಯಮ ಏನು ಹೇಳುತ್ತದೆ?

ಭಾರತೀಯ ವೀಸಾ ನಿಯಮಗಳು ಹಾಗೂ ಫಾರಿನರ್ಸ್ ಆಕ್ಟ್ ಅನ್ವಯ ಭಾರತಕ್ಕೆ ಧರ್ಮಭೋಧನೆಗೆ ಧರ್ಮ ಪ್ರಚಾರಕ್ಕೆ ಅಡ್ಡ ಧಾರ್ಮಿಕ ಚಟುವಟಿಕೆಗಳಲ್ಲಿ ಯಾವುದೇ ವೀಸಾ ಪಡೆದರೂ ಭಾಗವಹಿಸುವಂತಿಲ್ಲ. ನಿಜಾಮುದ್ದೀನ್ ಜಮಾತ್ ಘಟನೆಯ ಬಳಿಕ ಬೆಂಗಳೂರು ನಗರದಲ್ಲಿ ಬೆಂಗಳೂರು ಪೊಲೀಸರು 19 ವಿದೇಶಿಯರನ್ನು ಬಂಧಿಸಿದ್ದಾರೆ.

ದುರಂತವೆಂದರೆ ಇವರೆಲ್ಲರೂ ಟೂರಿಸ್ಟ್ ವೀಸಾ ಪಡೆದ ಭಾರತದಲ್ಲಿ ಧರ್ಮ ಪ್ರಚಾರಕ್ಕೆ ಬಂದಿದ್ದರು ಎನ್ನಲಾಗಿದೆ. ಇವರ ಕಾರ್ಯಕ್ರಮಗಳು ಹಾಗೂ ಓಡಾಟಗಳು ಗುಪ್ತವಾಗಿರುವುದರಿಂದ ಇವರು ರಾಷ್ಟ್ರದ ಆಂತರಿಕ ಭದ್ರತೆಗೆ ಮಾರಕವಾಗಿದ್ದಾರೆ. ಅಲ್ಲದೆ, ಬಾಂಗ್ಲಾದೇಶ ಹಾಗೂ ಇತರೆ ರಾಷ್ಟ್ರಗಳಿಂದ ಬಂದಿರುವ ಪ್ರಜೆಗಳು ವೀಸಾ ದುರ್ಬಳಕೆ ಮಾಡುತ್ತಿದ್ದಾರೆ. ಕೆಲವರ ವೀಸಾ ಅವಧಿ ಮುಗಿದು ಹೋಗಿದೆ. ವೀಸಾ ನಿಯಮ ಕೇಂದ್ರದ ವಿಷಯವಾಗಿದ್ದರೂ, ರಾಜ್ಯದ ಆಂತರಿಕ ಭದ್ರತೆ ಹಾಗೂ ಐಕ್ಯತ ದೃಷ್ಟಿಯಲ್ಲಿಟ್ಟುಕೊಂಡು ಪೊಲೀಸ್ ಇಲಾಖೆ ವೀಸಾ ಉಲ್ಲಂಘಿಸಿದವರ ವಿರುದ್ದ ಕ್ರಮ ಕೈಗೊಂಡು ಅಂತಹವರನ್ನು ಗಡಿಪಾರು ಮಾಡಬೇಕಾಗಿ ಕೋರುತ್ತೇವೆ ಎಂದು ಹಿಂದೂ ಸಂಘಟನೆಗಳು ಒತ್ತಾಯಿಸಿವೆ.-ಬಾಕ್ಸ್‌-

ನಿಯಮ ಉಲ್ಲಂಘನೆ ಮಾಡಿದ್ರೆ ಕ್ರಮ: ಪರಂ

ಅರಮನೆ ಮೈದಾನದಲ್ಲಿ ಆಯೋಜಿಸಿರುವ ‘ಮಿಲದುನ್ನಬಿ’ ಹೆಸರಿನ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಧರ್ಮ ಪ್ರಚಾರ ಭಾಷಣ ಸೇರಿ ಯಾವುದೇ ನಿಯಮ ಉಲ್ಲಂಘನೆ ಕಂಡುಬಂದರೆ ಆಯೋಜಕರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ವಿದೇಶಿಗರು ಬಂದು ಧಾರ್ಮಿಕ ಪ್ರಚಾರ ಮಾಡೋದಕ್ಕೆ ನಮ್ಮ ಕಾನೂನಲ್ಲಿ ಅವಕಾಶ ಇಲ್ಲ. ಇದನ್ನ ನಿಯಂತ್ರಣ ಮಾಡಬೇಕು ಅಂತ ಆಯೋಜಕರಿಗೆ ಸೂಚಿಸಲಾಗಿದೆ. ಕಾರ್ಯಕ್ರಮದಲ್ಲಿ ಯಾವುದೇ ವಿದೇಶಿಗರ ಭಾಷಣಕ್ಕೆ ಅವಕಾಶ ನೀಡಬಾರದು ಅಂತ ತಿಳಿಸಲಾಗಿದೆ. ಕಾರ್ಯಕ್ರಮದಲ್ಲಿ ಏನಾದ್ರು ನಿಯಮಗಳ ಉಲ್ಲಂಘನೆ ಮಾಡಿದರೆ ನಿಗಾ ಇಡುತ್ತೇವೆ. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುತ್ತೇವೆ ಎಂದು ತಿಳಿಸಿದ್ದಾರೆ.