ನ್ಯಾ.ನಾಗಮೋಹನ್‍ ದಾಸ್ ವರದಿ ಜಾರಿಗೆ ವಿರೋಧ: ಶಶಿಕುಮಾರ್

| Published : Aug 30 2025, 01:00 AM IST

ನ್ಯಾ.ನಾಗಮೋಹನ್‍ ದಾಸ್ ವರದಿ ಜಾರಿಗೆ ವಿರೋಧ: ಶಶಿಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ನ್ಯಾ.ನಾಗಮೋಹನ್‍ ದಾಸ್ ಆಯೋಗದ ವರದಿಯನ್ನು ರಾಜ್ಯ ಸರ್ಕಾರ ತರಾತುರಿಯಲ್ಲಿ ಜಾರಿಗೊಳಿಸುತ್ತಿರುವುದನ್ನು ವಿರೋಧಿಸಿ, ಸೆ.1ರಂದು ಬೆಳಿಗ್ಗೆ 10.30ಕ್ಕೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಬಂಜಾರ ಸಮಾಜದ ಮಾಜಿ ಕಾರ್ಯದರ್ಶಿ ಕೆ.ಶಶಿಕುಮಾರ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ನ್ಯಾ.ನಾಗಮೋಹನ್‍ ದಾಸ್ ಆಯೋಗದ ವರದಿಯನ್ನು ರಾಜ್ಯ ಸರ್ಕಾರ ತರಾತುರಿಯಲ್ಲಿ ಜಾರಿಗೊಳಿಸುತ್ತಿರುವುದನ್ನು ವಿರೋಧಿಸಿ, ಸೆ.1ರಂದು ಬೆಳಿಗ್ಗೆ 10.30ಕ್ಕೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಬಂಜಾರ ಸಮಾಜದ ಮಾಜಿ ಕಾರ್ಯದರ್ಶಿ ಕೆ.ಶಶಿಕುಮಾರ್ ತಿಳಿಸಿದರು.

ನಗರದಲ್ಲಿ ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿ, ಒಳಮೀಸಲಾತಿ ಮಾಡುವುದೇ ಅವೈಜ್ಞಾನಿಕವಾಗಿದ್ದು, ಬಿಜೆಪಿ, ಈಗಿನ ಕಾಂಗ್ರೆಸ್ ಸರ್ಕಾರ ಮಾಡಿರುವ ವರ್ಗೀಕರಣವನ್ನು ಖಂಡಿಸಿ ನ್ಯಾಯಯುತವಾಗಿ ಮೀಸಲಾತಿಯಲ್ಲಿ ಬರುವ ಎಲ್ಲಾ ಸಮುದಾಯಕ್ಕೆ ಅನ್ಯಾಯವಾಗದೆ ಸರಿಯಾದ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದರು.

ಹಿಂದೆ ಬಿಜೆಪಿ ಸರ್ಕಾರ ಶೇ.4.5 ನೀಡಿ, 99 ಜಾತಿಯನ್ನು ಒಟ್ಟು ಮಾಡಿದ್ದರು. ಇದು ಸಹಾ ಅವೈಜ್ಞಾನಿಕವಾಗಿದ್ದು, ಈಗಿನ ಕಾಂಗ್ರೆಸ್ ಸರ್ಕಾರ 63 ಜಾತಿಗಳನ್ನು ಒಟ್ಟುಮಾಡಿ, ಶೇ.5ರಷ್ಟು ಮೀಸಲಾತಿ ನೀಡಿದ್ದು ಸಹ ಅವೈಜ್ಞಾನಿಕವಾಗಿದೆ. ಮುಖ್ಯವಾಗಿ ಬೇಡವ, ಜಂಗಮ ಸಮುದಾಯವನ್ನು ಮೀಸಲಾತಿಯಲ್ಲಿ ಸೇರಿಸಿರುವುದು ಸಹ ಅವೈಜ್ಞಾನಿಕ ಎಂದರು. ನಾಗಮೋಹನ್‍ದಾಸ್ ಆಯೋಗದಿಂದ ತಾಂಡಾಗಳಲ್ಲಿ ಸಮೀಕ್ಷೆ ಮಾಡಿರುವುದು ಸರಿಯಲ್ಲ. ಮತ್ತು ನಮ್ಮ ಸಮುದಾಯದ ಅಂಕಿಅಂಶ ತಪ್ಪಾಗಿದೆ ಎಂದು ತಿಳಿಸಿದರು.

ಅಂದರೆ 2011ರ ಜಾತಿಗಣತಿಯಲ್ಲಿ ಎಸ್ಸಿ ಜನಸಂಖ್ಯೆ 1.8 ಕೋಟಿ ಇತ್ತು. ಈಗಿನ ಜಾತಿಗಣತಿಯಲ್ಲಿ 1.5 ಕೋಟಿಯಾಗಿದೆ. ಹಾಗಾದರೆ ಜನಸಂಖ್ಯೆ ಕಡಿಮೆ ಹೇಗಾಯಿತು ಎಂಬ ಪ್ರಶ್ನೆ ಕಾಡುತ್ತಿದೆ. ಹಾಗಾಗಿ ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಈ ವರದಿಯನ್ನು ಜಾರಿಮಾಡದೆ ಸರಿಯಾದ ಮತ್ತು ಕ್ರಮಬದ್ಧ ಸಮೀಕ್ಷೆಮಾಡಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸಂವಿಧಾನದಲ್ಲಿ ಸ್ಪೃಶ್ಯ ಮತ್ತು ಅಸ್ಪೃಶ್ಯ ಪದಬಳಕೆ ನಿಷೇಧವಾಗಿದ್ದು, ಆಯೋಗದ ವರದಿಯಲ್ಲೂ ಈ ಪದಗಳ ಬಳಕೆ ಮಾಡಿ ವರ್ಗೀಕರಣ ಮಾಡಿರುವುದು ಸರಿಯಲ್ಲ. ಸಮಾಜದವರು ಉದ್ಯೋಗ ಅರಿಸಿ ಗುಳೇ ಹೋಗಿರುವುದರಿಂದ ಒಳಮೀಸಲಾತಿಯ ಸಮೀಕ್ಷೆಯಿಂದ ಹೊರಗಿದ್ದಾರೆ. ಸದರಿ ಸದಸ್ಯರ ಸಂಖ್ಯೆಯನ್ನು ಪರಿಗಣಿಸಬೇಕು ಎಂದು ಆಗ್ರಹಿಸಿದರು.

ಪಾರ್ವತಿಬಾಯಿ, ರವಿನಾಯ್ಕ, ಕೆ. ರೇಣುಕಾನಾಯ್ಕ, ಜಿ. ಹನುಮಂತ ನಾಯ್ಕ, ಟಿ. ನಾನ್ಯಾನಾಯ್ಕ್, ಎಚ್.ಡಿ. ಬಸವರಾಜ ನಾಯ್ಕ್, ಡಿ. ಶಿವಾನಾಯ್ಕ್, ಜಯನಾಯ್ಕ್, ಪುಷ್ಪಾಬಾಯಿ, ಮಲ್ಲಿಕಾರ್ಜುನ ನಾಯ್ಕ್ ಹಾಜರಿದ್ದರು.