ಮದ್ದೂರು ತಾಲೂಕಿನ ಗೆಜ್ಜಲಗೆರೆ ಗ್ರಾಮವನ್ನು ಮದ್ದೂರು ನಗರಸಭೆ ವ್ಯಾಪ್ತಿಗೆ ಸೇರ್ಪಡೆ ಮಾಡಿರುವುದನ್ನು ವಿರೋಧಿಸಿ ಗ್ರಾಪಂ ಹೋರಾಟ ಸಮಿತಿ ನೇತೃತ್ವದಲ್ಲಿ ಸೋಮವಾರದಿಂದ ಚಳವಳಿ ತೀವ್ರಗೊಳಿಸಲು ಭಾನುವಾರ ನಡೆದ ರೈತರು ಮತ್ತು ಗ್ರಾಮಸ್ಥರ ಸಭೆಯಲ್ಲಿ ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು.

ಕನ್ನಡಪ್ರಭ ವಾರ್ತೆ ಮದ್ದೂರು

ತಾಲೂಕಿನ ಗೆಜ್ಜಲಗೆರೆ ಗ್ರಾಮವನ್ನು ಮದ್ದೂರು ನಗರಸಭೆ ವ್ಯಾಪ್ತಿಗೆ ಸೇರ್ಪಡೆ ಮಾಡಿರುವುದನ್ನು ವಿರೋಧಿಸಿ ಗ್ರಾಪಂ ಹೋರಾಟ ಸಮಿತಿ ನೇತೃತ್ವದಲ್ಲಿ ಸೋಮವಾರದಿಂದ ಚಳವಳಿ ತೀವ್ರಗೊಳಿಸಲು ಭಾನುವಾರ ನಡೆದ ರೈತರು ಮತ್ತು ಗ್ರಾಮಸ್ಥರ ಸಭೆಯಲ್ಲಿ ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು.

ಗ್ರಾಪಂ ಆವರಣದಲ್ಲಿ ರೈತ ನಾಯಕಿ ಸುನಂದ ಜಯರಾಮ್ ಅಧ್ಯಕ್ಷತೆಯಲ್ಲಿ ನಡೆದ ರೈತರು, ಸ್ಥಳೀಯ ಜನಪ್ರತಿನಿಧಿಗಳು, ಬುದ್ಧಿಜೀವಿಗಳು, ಪ್ರಗತಿಪರ ಸಂಘಟನೆಗಳು ಹಾಗೂ ಗ್ರಾಮಸ್ಥರ ಸಭೆಯಲ್ಲಿ ಕಾನೂನು ಹೋರಾಟದ ಜೊತೆಗೆ ಕಾವೇರಿ ಮತ್ತು ಕಬ್ಬಿನ ಚಳವಳಿ ಮಾದರಿಯಲ್ಲಿ ಹೋರಾಟ ನಡೆಸಿ ಸರ್ಕಾರ, ಪೌರಾಡಳಿತ ನಿರ್ದೇಶನಾಲಯ ಹಾಗೂ ಶಾಸಕರಿಗೆ ಬಿಸಿ ಮುಟ್ಟಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ಹೋರಾಟದ ಮೊದಲ ಹಂತವಾಗಿ ಡಿ.22ರಿಂದ ಗೆಜ್ಜಲಗೆರೆ ಗ್ರಾಪಂ ಎದುರು ಬೆಳಗಿನಿಂದ ಸಂಜೆವರೆಗೆ ಅನಿದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲಾಗುವುದು. ಗ್ರಾಪಂಗೆ ಸೇರಿದ ದಾಖಲಾತಿಗಳನ್ನು ಅಧಿಕಾರಿಗಳು ಗೌಪ್ಯವಾಗಿ ತಾಲೂಕು ಪಂಚಾಯ್ತಿಗೆ ಸಾಗಿಸಿ ಮದ್ದೂರು ನಗರಸಭೆ ವ್ಯಾಪ್ತಿಗೆ ಸೇರ್ಪಡೆ ಮಾಡುವ ಪ್ರಕ್ರಿಯೆಗಳು ನಡೆಯುತ್ತಿದ್ದು, ಇದನ್ನು ತಡೆಗಟ್ಟುವ ಜೊತೆಗೆ ದಾಖಲಾತಿಗಳನ್ನು ಸಾಗಿಸುವ ಅಧಿಕಾರಿಗಳಿಗೆ ಗ್ರಾಪಂ ಕಚೇರಿಯಲ್ಲಿ ದಿಗ್ಬಂಧನ ವಿಧಿಸಿ ಬೀಗ ಜಡಿಯುವ ಕಾರ್ಯಕ್ರಮ ಹಮ್ಮಿಕೊಳ್ಳಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ಸರ್ಕಾರ ಮತ್ತು ಪೌರಾಡಳಿತ ನಿರ್ದೇಶನಾಲಯ ನಮ್ಮ ಶಾಂತಿಯುತ ಚಳವಳಿಗೆ ಮಣಿದು ಗೆಜ್ಜಲಗೆರೆ ಗ್ರಾಮವನ್ನು ಮದ್ದೂರು ನಗರಸಭೆ ವ್ಯಾಪ್ತಿಗೆ ಸೇರ್ಪಡೆ ಮಾಡುವುದನ್ನು ಕೈಬಿಡಬೇಕು. ಇಲ್ಲವಾದಲ್ಲಿ ನ್ಯಾಯಾಲಯದಲ್ಲಿ ನಡೆಯುತ್ತಿರುವ ಕಾನೂನು ಹೋರಾಟದೊಂದಿಗೆ ಮುಂದಿನ ದಿನಗಳಲ್ಲಿ ಕಾವೇರಿ ಚಳವಳಿ ಮತ್ತು ಕಬ್ಬಿನ ಚಳವಳಿ ಮಾದರಿಯಲ್ಲಿ ಬೀದಿಗಿಳಿದು

ಹೋರಾಟ ನಡೆಸಲು ರೈತರು ಮತ್ತು ಗ್ರಾಮಸ್ಥರು ಮಾಡಿದ ಸಲಹೆಗೆ ಸಭೆಯಲ್ಲಿ ಒಮ್ಮತದ ಸಹಮತ ವ್ಯಕ್ತವಾಯಿತು.

ಸಭೆಯಲ್ಲಿ ನಗರಸಭೆ ವ್ಯಾಪ್ತಿಗೆ ಗ್ರಾಪಂಗಳನ್ನು ಸೇರ್ಪಡೆ ಮಾಡುವುದರಿಂದ ಕುಡಿಯುವ ನೀರಿನ ತೆರಿಗೆ, ಮನೆ ಕಂದಾಯ ದುಬಾರಿ ಮತ್ತು ಗ್ರಾಮದ ಅಭಿವೃದ್ಧಿ, ಗೆಜ್ಜಲಗೆರೆಕೈಗಾರಿಕಾ ಪ್ರದೇಶದ ಕಾರ್ಖಾನೆಗಳಿಂದ ಗ್ರಾಪಂಗೆ ಬರುವ ತೆರಿಗೆ ಕುಂಠಿತದೊಂದಿಗೆ ವಿದ್ಯಾರ್ಥಿಗಳು ಗ್ರಾಮೀಣ ಕೃಪಾಂಕ ನಿಂದ ವಂಚಿತರಾಗಿ ಉನ್ನತ ವಿದ್ಯಾಭ್ಯಾಸ ಮತ್ತು ಸರ್ಕಾರಿ ಉದ್ಯೋಗ ಪಡೆಯಲು ತೊಂದರೆಯಾಗುತ್ತದೆ ಎಂದರು.

ವಸತಿ ಯೋಜನೆಗಳಿಂದ ರೈತರಿಗೆ ನಿವೇಶನ ದೊರಕುವುದಿಲ್ಲ ಹಾಗೂ ಗ್ರಾಮದ ಅಭಿವೃದ್ಧಿಗೆ ಮತ್ತು ಹಾಲಿನ ಡೇರಿಗಳ ಸ್ಥಾಪನೆಗೆ ಅಡ್ಡಿಯಾಗುತ್ತದೆ. ಹೀಗಾಗಿ ಎಲ್ಲಾ ಸಮಸ್ಯೆಗಳನ್ನು ಅರಿತು ಗ್ರಾಪಂ ಅನ್ನು ಮದ್ದೂರು ನಗರಸಭೆ ವ್ಯಾಪ್ತಿಗೆ ಸೇರ್ಪಡೆ ಮಾಡುವುದನ್ನು ಕೈಬಿಡಬೇಕು ಎಂದು ಸಭೆಯಲ್ಲಿ ರೈತ ಮುಖಂಡರು ಆಗ್ರಹಪಡಿಸಿದರು.

ಸಭೆಯಲ್ಲಿ ಗ್ರಾಪಂ ಅಧ್ಯಕ್ಷ ರಾಧಾ, ರೈತ ಮುಖಂಡರಾದ ಜಿ.ಎ.ಶಂಕರ್, ಲಿಂಗಪ್ಪಾಜಿ, ವೀರಪ್ಪ, ಚಂದ್ರಶೇಖರ್, ಮೋಹನ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.