ಸಾರಾಂಶ
ಗದಗ: ಇತ್ತೀಚಿಗೆ ರಾಜ್ಯ ಸರ್ಕಾರ ಹಾಲಿನ ದರ, ವಿದ್ಯುತ್ ದರ, ಡೀಸೆಲ್, ಟೋಲ್ ತೆರಿಗೆ, ಬಾಂಡ್ ಪೇಪರ್, ಆಸ್ತಿ ನೋಂದಣಿ ಹೀಗೆ ದಿನಬಳಕೆ ಮತ್ತು ಇತರೆ ಸರ್ಕಾರದ ಸೇವೆಗಾಗಿ ಇರುವ ಶುಲ್ಕಗಳನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಳ ಮಾಡಿರುವುದನ್ನು ವಿರೋಧಿಸಿ ನವ ಕರ್ನಾಟಕ ಜನಪರ ಅಭಿವೃದ್ಧಿ ವೇದಿಕೆಯ ರಾಜ್ಯಾಧ್ಯಕ್ಷ ಪಿ.ಸುಬ್ರಮಣ್ಯಂರೆಡ್ಡಿಯವರ ನೇತೃತ್ವದಲ್ಲಿ ಅಪರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ವೇದಿಕೆಯ ಕಾರ್ಮಿಕ ಘಟಕದ ರಾಜ್ಯಾಧ್ಯಕ್ಷ ಶಿವಾನಂದಯ್ಯ ಈ. ಹಿರೇಮಠ ಮಾತನಾಡಿ, ಬೆಲೆ ಏರಿಕೆ ಬಡವರಿಗೆ, ಮಧ್ಯಮ ವರ್ಗದ, ಗ್ರಾಮೀಣ ಜನತೆ, ರೈತರು, ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದ ಸೇರಿದಂತೆ ರಾಜ್ಯದ ಜನತೆಗೆ ಬಹಳ ಆರ್ಥಿಕ ತೊಂದರೆಯನ್ನುಂಟು ಮಾಡಿದೆ. ಇದರಿಂದ ಜನರ ಜೀವನ ನಡೆಸಲಿಕ್ಕೆ ಬಹಳ ತೊಂದರೆಯಾಗಿದೆ. ರಾಜ್ಯ ಸರ್ಕಾರ ಈ ಕೂಡಲೇ ಈ ಎಲ್ಲ ಬೆಲೆ ಏರಿಕೆಗಳನ್ನು ಕಡಿಮೆ ಮಾಡಿ ಜನತೆಗೆ ನೆಮ್ಮದಿಯ ಜೀವನ ಸಾಗಿಸುವಂತೆ ಅನುಕೂಲ ಮಾಡಬೇಕೆಂದು ಆಗ್ರಹಿಸಿದರು.ಜಿಲ್ಲಾಧ್ಯಕ್ಷ ಶಿವಕುಮಾರ ರಾಮನಕೊಪ್ಪ ಮಾತನಾಡಿ, ಒಂದು ವೇಳೆ ರಾಜ್ಯ ಸರ್ಕಾರ ಬೆಲೆ ಏರಿಕೆಗಳನ್ನು ಕಡಿಮೆಗೊಳಿಸದಿದ್ದರೆ ರಾಜ್ಯದ ಎಲ್ಲ ಕನ್ನಡ ಪರ ಹಾಗೂ ವಿವಿಧ ಸಂಘಟನೆಗಳು ರಾಜ್ಯಾದ್ಯಂತ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.
ರಾಜ್ಯ ರೈತ ಘಟಕದ ಅಧ್ಯಕ್ಷ ಶಿವಾನಂದ ಪಲ್ಲೇದ, ರಾಜ್ಯ ಪ್ರಧಾನ ಕಾರ್ಯದರ್ಶಿ ಯು.ಆರ್. ಭೂಸನೂರಮಠ, ರಾಜ್ಯ ಸಂಚಾಲಕ ಪ್ರಭಾಕರ ಹೆಬಸೂರ, ರಾಜ್ಯ ವಕ್ತಾರ ಎಂ.ಎಸ್. ಪರ್ವತಗೌಡ್ರ, ಜಿಲ್ಲಾ ಕಾರ್ಯದರ್ಶಿ ಷಣ್ಮುಖ ಸುಲಾಖೆ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.