ಸರ್ಕಾರಿ ಶಾಲೆಗಳನ್ನು ಮುಚ್ಚುವ ಕೆಪಿಎಸ್ ಮ್ಯಾಗ್ನೆಟ್ ಯೋಜನೆಯನ್ನು ವಿರೋಧಿಸಿ ಗುರುವಾರ ಹರಿಹರದ ಜೈ ಭಿಮ್ ನಗರ ಹಾಗೂ ನೀಲಕಂಠ ನಗರದಲ್ಲಿ ಪೋಷಕರು ಪ್ರತಿಭಟನೆ ನಡೆಸಿದರು.

ಹರಿಹರ: ಸರ್ಕಾರಿ ಶಾಲೆಗಳನ್ನು ಮುಚ್ಚುವ ಕೆಪಿಎಸ್ ಮ್ಯಾಗ್ನೆಟ್ ಯೋಜನೆಯನ್ನು ವಿರೋಧಿಸಿ ಗುರುವಾರ ಹರಿಹರದ ಜೈ ಭಿಮ್ ನಗರ ಹಾಗೂ ನೀಲಕಂಠ ನಗರದಲ್ಲಿ ಪೋಷಕರು ಪ್ರತಿಭಟನೆ ನಡೆಸಿದರು.

ಪ್ರತಿಭಟನಾ ಸಭೆಯ ನೇತೃತ್ವವಹಿಸಿ, ಎಐಡಿಎಸ್ಓ ಜಿಲ್ಲಾಧ್ಯಕ್ಷೆ ಪೂಜಾ ನಂದಿಹಳ್ಳಿ ಮಾತನಾಡಿ, ರಾಜ್ಯಾದ್ಯಂತ ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಅಡಿಯಲ್ಲಿ ರಾಜ್ಯ ಸರ್ಕಾರ 40,000 ಶಾಲೆಗಳನ್ನು ಮುಚ್ಚ ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಂಥಹ ಕ್ರಮಕ್ಕೆ ರಾಜ್ಯಾದ್ಯಂತ ಇರುವ ಗ್ರಾಮಸ್ಥರು, ಪೋಷಕರು ವಿರೋಧ ವ್ಯಕ್ತಪಡಿಸುತ್ತಿದ್ದು, ಕರ್ನಾಟಕದ ಹಿರಿಯ ಸಾಹಿತಿಗಳೂ ಶಾಲೆಯ ಉಳಿವಿಗಾಗಿ ಧ್ವನಿ ಎತ್ತುತ್ತಿದ್ದಾರೆ. ಆದರೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಒಂದೇ ಒಂದು ಮಗುವಿದ್ದರೂ ಶಾಲೆ ಮುಚ್ಚುವುದಿಲ್ಲ ಎಂದು ಬಾಯಲ್ಲಿ ಮಾತ್ರ ಹೇಳುತ್ತಿದ್ದಾರೆ. ಯಾವುದೇ ಕಾರಣಕ್ಕೂ ನಾವು ವಿಲೀನಗೊಳಿಸುವುದಿಲ್ಲ. ಆದರೆ ಸ್ವಯಂ ಪ್ರೇರಿತವಾಗಿ ಬಂದರೆ ಬರಲಿ ಅದಕ್ಕೆ ನಾವು ಅಡ್ಡಿ ಮಾಡುವುದಿಲ್ಲ. ಕೆಪಿಎಸ್ ಯೋಜನೆ ತುಂಬಾ ಒಳ್ಳೆಯದಿದೆ ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು

ರಾಜ್ಯ ಸರ್ಕಾರ ಕೆಪಿಎಸ್ ಮ್ಯಾಗ್ನೆಟ್ ಯೋಜನೆಯನ್ನು ಜಾರಿಗೊಳಿಸಲು ಸಂಪೂರ್ಣ ತಯಾರಿ ಮಾಡಿದೆ. ಈಗ ಹೇಳುತ್ತಿದ್ದಾರೆ ಎಸ್‌ಡಿಎಂಸಿ ಅನುಮತಿ ಇಲ್ಲದೆ ಶಾಲೆ ವಿಲೀನಗೊಳ್ಳುವುದಿಲ್ಲವೆಂದು. ಸಚಿವರಿಗೆ ಕೆಪಿಎಸ್ ಮ್ಯಾಗ್ನೆಟ್ ಯೋಜನೆ ರೂಪಿಸುವ ಮುನ್ನ ವಿದ್ಯಾರ್ಥಿ ಸಂಘಟನೆ ಮತ್ತು ಶಿಕ್ಷಕರ ಸಘಟನೆ ಮತ್ತು ಎಸ್‌ಡಿಎಂಸಿ ಅಥವಾ ಪೋಷಕರ ಜೊತೆ ಚರ್ಚೆ ಮಾಡಿ ಅನುಮತಿ ತೆಗೆದುಕೊಳ್ಳದೇ, ಬಣ್ಣ ಬಣ್ಣದ ಮಾತುಗಳಿಂದ ಜನಗಳಿಗೆ ನಯವಂಚನೆ ಮಾಡುತ್ತಿದೆ ಎಂದು ದೂರಿದರು.

ರಾಜ್ಯ ಸರ್ಕಾರವು ಎಡಿಬಿ ಬ್ಯಾಂಕ್ ಸಾಲ ಯೋಜನೆಯಡಿ ಕೆಪಿಎಸ್ ಮ್ಯಾಗ್ನೆಟ್ ಯೋಜನೆಯನ್ನು ಜಾರಿಗೊಳಿಸುತ್ತಿದೆ, ಇದರ ಜೊತೆಗೆ ಕೆಕೆಆರ್‌ಡಿಬಿ ಮತ್ತು ಮೈನಿಂಗ್ ಹಣವನ್ನು ಮತ್ತು ಸಿಎಸ್‌ಆರ್ ಹಣವನ್ನು ಬಳಸಿಕೊಂಡು ಶಾಲೆಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಸ್ಪಷ್ಟವಾಗಿ ಹೇಳುತ್ತಿದೆ. ಇದರ ಅರ್ಥ ಅಕ್ಟೋಬರ್ 15 ರ ಆದೇಶದಂತೆ ಸರ್ಕಾರಿ ಶಾಲೆಗಳನ್ನು ಬಲಗೊಳಿಸಲು ಸರ್ಕಾರಿ ಅನುದಾನದ ಕುರಿತು ಯಾವ ಸ್ಪಷ್ಟೀಕರಣ ಇದರಲ್ಲಿ ಇಲ್ಲ. ಭಾರತದ ಎಲ್ಲಾ ಮಹಾನ್ ವ್ಯಕ್ತಿಗಳ ಆಶಯವನ್ನು ಗಾಳಿಗೆ ತೂರಿ ಶಿಕ್ಷಣದ ಸಂಪೂರ್ಣ ಖಾಸಗಿಕರಣ ಮಾಡುವ ಷಡ್ಯಂತ್ರ ನಡೆಸಿದೆ ಎಂದು ಕಿಡಿಕಾರಿದರು.

ಸರ್ಕಾರಕ್ಕೆ ನಿಜವಾಗಲೂ ಕಾಳಜಿ ಇದ್ದರೆ 61000 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಅವುಗಳನ್ನು ಭರ್ತಿ ಮಾಡಲಿ. ಶಾಲೆಗಳಿಗೆ ಸುಸಜ್ಜಿತ ಕಟ್ಟಡ ಶೌಚಾಲಯಗಳನ್ನು ಒದಗಿಸಲಿ ಆದರೆ ಶಾಲೆಯನ್ನು ಮುಚ್ಚಲು ಬಂದರೆ ರಾಜ್ಯದ ಯಾವ ಜನತೆಯೂ ಒಪ್ಪುವುದಿಲ್ಲ. ಉಗ್ರ ಹೋರಾಟವನ್ನು ನಡೆಸುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಜೈ ಭೀಮ್ ನಗರದ ಮುಖಂಡ ಜಗದೀಶ್, ಸೈಯದ್ ಅಬ್ದುಲ್ಲಾ ಮಾತನಾಡಿದರು.

ಪ್ರತಿಭಟನೆಯಲ್ಲಿ ಎಐಡಿಎಸ್ಓ ಸಂಘಟನಾಕಾರ ಗಂಗಾಧರ.ಎಚ್.ಡಿ, ಊರಿನ ಯುವಕರು ಪೋಷಕರು ಭಾಗವಹಿಸಿದ್ದರು.