ವಕ್ಫ್‌ ಹೆಸರಲ್ಲಿ ಜಮೀನು ಕಬಳಿಕೆಗೆ ವಿರೋಧ

| Published : Nov 11 2024, 11:45 PM IST

ವಕ್ಫ್‌ ಹೆಸರಲ್ಲಿ ಜಮೀನು ಕಬಳಿಕೆಗೆ ವಿರೋಧ
Share this Article
  • FB
  • TW
  • Linkdin
  • Email

ಸಾರಾಂಶ

ರೈತರ ಜಮೀನನ ಜತೆಗೆ ಮಠ-ಮಂದಿರಗಳ ಆಸ್ತಿಯನ್ನು ಸಹ ವಕ್ಫ್‌ ಆಸ್ತಿಯನ್ನಾಗಿ ಮಾಡಲಾಗಿದೆ. ಇದು ನಾಚಿಗೇಡಿನ ಸಂಗತಿಯಾಗಿದ್ದು, ಸರ್ಕಾರದ ಈ ನಡೆ ತೀವ್ರ ಖಂಡನಾರ್ಹ.

ಹುಬ್ಬಳ್ಳಿ:

ರಾಜ್ಯ ಸರ್ಕಾರ ವಕ್ಸ್ ಹೆಸರಲ್ಲಿ ರೈತರ ಜಮೀನನ್ನು ಕಬಳಿಸುತ್ತಿರುವುದನ್ನು ಖಂಡಿಸಿ ವಿಶ್ವಹಿಂದೂ ಪರಿಷತ್‌ ಬಜರಂಗದಳದ ಕಾರ್ಯಕರ್ತರು ಸೋಮವಾರ ನಗರದ ಏಳು ಕಡೆಗಳಲ್ಲಿ ಪ್ರತಿಭಟನೆ ನಡೆಸಿದರು. ರಸ್ತೆ ತಡೆ ನಡೆಸಲು ಮುಂದಾದ ಹಲವು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಬಿಡುಗಡೆಗೊಳಿಸಿದ ಘಟನೆ ನಡೆಯಿತು.

ಇಲ್ಲಿನ ಭೈರಿದೇವರಕೊಪ್ಪದ ಶಿವಾನಂದ ಮಠದ ಮುಂಭಾಗ, ವಿದ್ಯಾನಗರದ ಕೋತಂಬ್ರಿ ಕಾಲೇಜು, ಗೋಕುಲ ರಸ್ತೆ ಅಕ್ಷಯ ಪಾರ್ಕ್ ವೃತ್ತ, ಹಳೇಹುಬ್ಬಳ್ಳಿ ಇಂಡಿಪಂಪ್ ವೃತ್ತ, ಬಂಕಾಪುರ ಚೌಕ್‌, ಗದಗ ರಸ್ತೆಯ ರೈಲ್ವೆ ಬ್ರಿಡ್ಜ್ ಮತ್ತು ಕೇಶ್ವಾಪುರದ ಸರ್ವೋದಯ ವೃತ್ತದ ಬಳಿ ವಾಹನಗಳನ್ನು ತಡೆದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಂತರ ವಕ್ಫ್‌ ಖಾತೆ ಸಚಿವ ಜಮೀ‌ರ್ ಅಹಮದ್ ಖಾನ್‌ ರಾಜೀನಾಮೆಗೆ ಆಗ್ರಹಿಸಿದ ಕಾರ್ಯಕರ್ತರು, ರೈತರ ಏಳಿಗೆಗೆ ಬಜರಂಗದಳ ಸದಾ ಸಿದ್ಧ, ವಕ್ಫ್‌ ಕಾಯ್ದೆ ರದ್ದುಗೊಳಿಸಿ, ಸಂವಿಧಾನ ಉಳಿಸಿ, ನಮ್ಮ ಆಸ್ತಿ-ನಮ್ಮ ಹಕ್ಕು ಬರಹ ಹೊಂದಿದ ಫಲಕಗಳನ್ನು ಪ್ರದರ್ಶಿಸಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ನಂತರ ತಹಸೀಲ್ದಾರ್, ಇನ್‌ಸ್ಪೆಕ್ಟರ್‌ಗಳಿಗೆ ಮನವಿ ಸಲ್ಲಿಸಿದರು.

ರೈತರ ಜಮೀನನ ಜತೆಗೆ ಮಠ-ಮಂದಿರಗಳ ಆಸ್ತಿಯನ್ನು ಸಹ ವಕ್ಫ್‌ ಆಸ್ತಿಯನ್ನಾಗಿ ಮಾಡಲಾಗಿದೆ. ಇದು ನಾಚಿಗೇಡಿನ ಸಂಗತಿಯಾಗಿದ್ದು, ಸರ್ಕಾರದ ಈ ನಡೆ ತೀವ್ರ ಖಂಡನಾರ್ಹ. ಈಗಾಗಲೇ ನೀಡಿರುವ ನೋಟಿಸ್ ಹಿಂಪಡೆಯಲಾಗಿದೆ. ಆದರೆ, ನಮುದಾಗಿರುವ ವಕ್ಫ್‌ ಹೆಸರನ್ನು ಯಾವುದೇ ದಾಖಲೆಗಳಿಲ್ಲದೆ ತೆಗೆಯಬೇಕು. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮಿತಿ ರಚಿಸಿ, ಇಂತಹ ಪ್ರಕರಣಗಳನ್ನು ತಕ್ಷಣ ಇತ್ಯರ್ಥ ಮಾಡಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ತೀವ್ರ ಸ್ವರೂಪದ ಹೋರಾಟ ಹಮ್ಮಿಕೊಳ್ಳುವ ಎಚ್ಚರಿಕೆ ನೀಡಲಾಯಿತು.

ನ್ಯಾಯ ಸಿಗುವ ವರೆಗೆ ಹೋರಾಟ:

ನಮ್ಮ ಪ್ರತಿಭಟನೆ ಸರ್ಕಾರದ ಹಾಗೂ ಯಾರ ವಿರುದ್ಧವೂ ಅಲ್ಲ. ಅನ್ಯಾಯಕ್ಕೊಳಗಾದವರ ನೆರವಿಗೆ ನಾವಿದ್ದೇವೆ ಎಂದು ತಿಳಿಸಿ, ಜಾಗೃತಿ ಮೂಡಿಸಲು ವಿಶ್ವ ಹಿಂದೂ ಪರಿಷತ್ ಉತ್ತರ ಪ್ರಾಂತ ಭಾಗದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದೆ. ಇದು ಆರಂಭವಷ್ಟೇ, ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಯಲಿದೆ ಎಂದು ಪ್ರತಿಭಟನಾ ನಿರತರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಈ ವೇಳೆ ಶಿವಾನಂದ ಸತ್ತಿಗೇರಿ, ಸುಭಾಷ್‌ಸಿಂಗ್‌ ಜಮಾದಾರ, ಚಿದಾನಂದ, ಕೊಟ್ರೇಶ, ಶಶಿ, ವೀಣಾ ತಿಳವಳ್ಳಿ, ಸುಮಾ ಅಂಗಡಿ, ಯಲ್ಲಪ್ಪ ಬಾಗಲಕೋಟೆ, ವಿಶ್ವನಾಥ ಬುದುರ, ಪ್ರಕಾಶ ಬಿದರಣ್ಣವರ, ವಿನೋದ ಬಂಕಾಪುರ, ಮಂಜುನಾಥ ತೇರದಾಳ, ಶ್ರೀಕಾಂತ ಗಣಾಚಾರಿ, ನಾರಾಯಣ ಮೊರಬ, ಮನೋಜ ಮಾನೆ, ರಾಮು ಬೆಟಗೇರಿ, ನಾರಾಯಣ ದಾಸರ, ಯಶೋದಾ ತಾಂಬೆ ಸೇರಿದಂತೆ ಅನೇಕ ಕಾರ್ಯಕರ್ತರು ಪಾಲ್ಗೊಂಡಿದ್ದರು.ಕಾರ್ಯಕರ್ತರ ಬಂಧನ:

ಇಲ್ಲಿನ ಹಳೇಹುಬ್ಬಳ್ಳಿ ಇಂಡಿಪಂಪ್‌ ವೃತ್ತದ ಬಳಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ವಾಹನಗಳ ಸಂಚಾರಕ್ಕೆ ತಡೆಯೊಡ್ಡಲು ಮುಂದಾದ ವಿಎಚ್‌ಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದರು. ಈ ವೇಳೆ ಕಾರ್ಯಕರ್ತರ ಮತ್ತು ಪೊಲೀಸರ ನಡುವೆ ತೀವ್ರ ವಾಗ್ವಾದ ನಡೆಯಿತು.