ಮದ್ದೂರು ನಗರಸಭಾ ವ್ಯಾಪ್ತಿಗೆ ಗ್ರಾಪಂಗಳ ವಿಲೀನಕ್ಕೆ ವಿರೋಧ

| Published : Sep 05 2025, 01:00 AM IST

ಸಾರಾಂಶ

ಗೆಜ್ಜಲಗೆರೆ, ಸೋಮನಹಳ್ಳಿ, ಚಾಮನಹಳ್ಳಿ ಹಾಗೂ ಗೊರವನಹಳ್ಳಿ ಗ್ರಾಪಂಗಳನ್ನು ಮದ್ದೂರು ನಗರಸಭಾ ವ್ಯಾಪ್ತಿಗೆ ವಿಲೀನಗೊಳಿಸಿರುವ ಶಾಸಕ ಕೆ.ಎಂ.ಉದಯ್ ಕ್ರಮ ವಿರೋಧಿಸಿ ಗ್ರಾಪಂಗಳ ವ್ಯಾಪ್ತಿಯ ಜನಪ್ರತಿನಿಧಿಗಳು, ಗ್ರಾಮಸ್ಥರು ಹಾಗೂ ರೈತ ಸಂಘದ ಬೆಂಬಲದೊಂದಿಗೆ ತಾಲೂಕು ಕಚೇರಿ ಎದುರು ಕಪ್ಪು ಬಾವುಟ ಪ್ರದರ್ಶನ ಮಾಡಿ ಗುರುವಾರ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಮದ್ದೂರು

ತಾಲೂಕಿನ ಗೆಜ್ಜಲಗೆರೆ, ಸೋಮನಹಳ್ಳಿ, ಚಾಮನಹಳ್ಳಿ ಹಾಗೂ ಗೊರವನಹಳ್ಳಿ ಗ್ರಾಪಂಗಳನ್ನು ಮದ್ದೂರು ನಗರಸಭಾ ವ್ಯಾಪ್ತಿಗೆ ವಿಲೀನಗೊಳಿಸಿರುವ ಶಾಸಕ ಕೆ.ಎಂ.ಉದಯ್ ಕ್ರಮ ವಿರೋಧಿಸಿ ಗ್ರಾಪಂಗಳ ವ್ಯಾಪ್ತಿಯ ಜನಪ್ರತಿನಿಧಿಗಳು, ಗ್ರಾಮಸ್ಥರು ಹಾಗೂ ರೈತ ಸಂಘದ ಬೆಂಬಲದೊಂದಿಗೆ ತಾಲೂಕು ಕಚೇರಿ ಎದುರು ಕಪ್ಪು ಬಾವುಟ ಪ್ರದರ್ಶನ ಮಾಡಿ ಗುರುವಾರ ಪ್ರತಿಭಟನೆ ನಡೆಸಿದರು.

ರೈತ ನಾಯಕಿ ಸುನಂದಾ ಜಯರಾಂ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ನೂರಾರು ಗ್ರಾಮಸ್ಥರು ಪುರಸಭೆ ಆವರಣದಲ್ಲಿ ನಗರಸಭಾ ನಾಮಫಲಕ ಅನಾವರಣ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ವಿಫಲ ಯತ್ನ ನಡೆಸಿದರು.

ಪುರಸಭೆ ಕಚೇರಿ ಸಮೀಪದ ಅನತಿ ದೂರದಲ್ಲಿ ಪ್ರತಿಭಟನೆಗಿಳಿದ ವಿವಿಧ ಗ್ರಾಮಗಳ ಗ್ರಾಮಸ್ಥರು ಪುರಸಭೆ ಕಚೇರಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದರು. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಪೋಲೀಸರು ಪ್ರತಿಭಟನಾಕಾರರು ಕಚೇರಿಗೆ ಬಳಿ ಬರದಂತೆ ದಿಗ್ಬಂಧನ ವಿಧಿಸಿದರು.

ಈಗಾಗಲೇ ನಾಲ್ಕು ಗ್ರಾಪಂಗಳನ್ನು ಮದ್ದೂರು ನಗರಸಭೆ ವ್ಯಾಪ್ತಿಗೆ ಸೇರ್ಪಡೆ ಮಾಡಿದರೇ ಹಲವು ಸೌಲಭ್ಯಗಳು ಮತ್ತು ಯೋಜನೆಗಳಿಂದ ವಂಚಿತವಾಗುತ್ತವೆ. ನರೇಗಾ ಯೋಜನೆ, ಬಡ ಮಕ್ಕಳಿಗೆ ಗ್ರಾಮೀಣ ಕೃಪಾಂಕ, ಜಿಲ್ಲಾ ಮತ್ತು ತಾಲೂಕು ಪಂಚಾಯತಿ ಅನುದಾನ, ತೆರಿಗೆ ಹೆಚ್ಚಳ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸಬೇಕಾದ ಪರಿಸ್ಥಿತಿ ಉದ್ಭವವಾಗುತ್ತದೆ. ಹೀಗಾಗಿ, ನಾಲ್ಕು ಗ್ರಾಮ ಪಂಚಾಯಿತಿಗಳನ್ನು ಮದ್ದೂರು ನಗರಸಭೆ ವ್ಯಾಪ್ತಿಗೆ ಸೇರ್ಪಡೆ ಮಾಡಬಾರದೆಂದು ಒತ್ತಾಯಿಸಿ ಪ್ರತಿಭಟನೆ ಮೂಲಕ ಎಚ್ಚರಿಸಲಾಗಿತ್ತು.

ಆದರೆ, ಶಾಸಕ ಉದಯ್ ನಮ್ಮ ಎಲ್ಲಾ ಮನವಿಗಳಿಗೆ ಸ್ಪಂದಿಸದೆ ಏಕ ಪಕ್ಷಿಯ ನಿರ್ಧಾರ ಕೈಗೊಂಡು ನಗರಸಭಾ ವ್ಯಾಪ್ತಿಗೆ ಸೇರ್ಪಡೆ ಮಾಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ಶಾಸಕರ ಕ್ರಮ ವಿರೋಧಿಸಿ ನ್ಯಾಯಾಲಯದ ಮೂಲಕ ಕಾನುನಾತ್ಮಕ ಹೋರಾಟ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದರು.

ಶಾಸಕರು ಎಚ್ಚೆತ್ತುಕೊಂಡು ಗೆಜ್ಜಲಗೆರೆ, ಸೋಮನಹಳ್ಳಿ, ಚಾಮನಹಳ್ಳಿ ಹಾಗೂ ಗೊರವನಹಳ್ಳಿ ಗ್ರಾಮಗಳ ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ಜೊತೆ ಚರ್ಚಿಸಿ ಗ್ರಾಮಗಳನ್ನು ಮದ್ದೂರು ನಗರಸಭೆ ವ್ಯಾಪ್ತಿಯಿಂದ ಕೈಬಿಡುವಂತೆ ಸರ್ಕಾರದೊಂದಿಗೆ ಮಾತುಕತೆ ನಡೆಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟದ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಗೆಜ್ಜಲಗೆರೆ ಗ್ರಾಪಂ ಅಧ್ಯಕ್ಷೆ ರಾಧಾ, ಉಪಾಧ್ಯಕ್ಷ ದೀಪಕ್, ಚಾಮನಹಳ್ಳಿ ಗ್ರಾಪಂ ಸದಸ್ಯ ಕೃಷ್ಣಪ್ಪ, ತಾಪಂ ಮಾಜಿ ಸದಸ್ಯ ಸತೀಶ್, ರೈತ ಮುಖಂಡರಾದ ಜಿ.ಎ.ಶಂಕರ್, ಲಿಂಗಪ್ಪಾಜಿ, ವೀರಪ್ಪ ಮುಖಂಡರಾದ ಮೋಹನ್, ಮನು, ಭಗವಾನ್, ಗೊವನಹಳ್ಳಿ ಪ್ರಸನ್ನ ಸೇರಿದಂತೆ ನಾಲ್ಕು ಗ್ರಾಪಂಗಳ ವ್ಯಾಪ್ತಿಯ ಮುಖಂಡರು ಭಾಗವಹಿಸಿದ್ದರು.