ಸಾರಾಂಶ
ಮಂಡ್ಯ : ಮಂಡ್ಯ ವಿಶ್ವ ವಿದ್ಯಾಲಯವನ್ನು ಮೈಸೂರು ವಿಶ್ವ ವಿದ್ಯಾಲಯದೊಂದಿಗೆ ವಿಲೀನಗೊಳಿಸುವುದಕ್ಕೆ ಮಂಡ್ಯ ವಿವಿ ಉಳಿಸಿ ಹೋರಾಟ ವೇದಿಕೆಯ ಮುಖಂಡ ಬೇಕ್ರಿ ರಮೇಶ್ ವಿರೋಧ ವ್ಯಕ್ತಪಡಿಸಿದರು.
ಯಾವುದೇ ಸ್ಪಷ್ಟ ಕಾರಣವಿಲ್ಲದೆ ಮಂಡ್ಯ ವಿವಿಯನ್ನು ಮೈಸೂರು ವಿವಿ ಜೊತೆ ವಿಲೀನಗೊಳಿಸಲಾಗುತ್ತಿದೆ. ಸಮಿತಿ ವರದಿ, ಆರ್ಥಿಕ ಹೊರೆಯನ್ನು ನೆಪವಾಗಿಟ್ಟುಕೊಂಡು ಮೈಸೂರು ವಿವಿಗೆ ಹಸ್ತಾಂತರ ಮಾಡಲು ಹೊರಟಿರುವುದು ಸರ್ಕಾರದ ವೈಫಲ್ಯಕ್ಕೆ ಸಾಕ್ಷಿಯಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಂಡ್ಯ ವಿವಿಯಲ್ಲಿ ವಾಣಿಜ್ಯ ವಿಭಾಗ, ಗ್ರಂಥಾಲಯ ಕಾಂಪ್ಲೆಕ್ಸ್ ಸೇರಿದಂತೆ ಹಲವು ಕಟ್ಟಡಗಳನ್ನು ಕೋಟ್ಯಂತರ ರು. ವೆಚ್ಚದಲ್ಲಿ ನಿರ್ಮಿಸಲಾಗಿದೆ. ವಿವಿ ವಿಲೀನದಿಂದ ಅದೆಲ್ಲವೂ ಉಪಯೋಗಕ್ಕೆ ಬಾರದಂತಾಗುತ್ತವೆ. ಕಾಂಗ್ರೆಸ್ ಪಕ್ಷದ ಸಚಿವರು, ಶಾಸಕರು, ಮುಖಂಡರು ಮಂಡ್ಯ ವಿವಿ ಮುಚ್ಚುವುದಕ್ಕೆ ಹೆಚ್ಚಿನ ಉತ್ಸಾಹ ತೋರುತ್ತಿರುವರೇ ವಿನಃ ವಿವಿ ಉಳಿಸುವ ಬಗ್ಗೆ ಯಾರಿಗೂ ಆಸಕ್ತಿ ಇಲ್ಲದಂತಾಗಿದೆ ಎಂದು ದೂರಿದರು.
ಮಂಡ್ಯ ವಿಶ್ವವಿದ್ಯಾಲಯ ಸ್ಥಾಪನೆಗೆ ತೂಬಿನಕೆರೆ ಬಳಿ ಇರುವ ವಿಶ್ವೇಶ್ವರಯ್ಯ ಸ್ನಾತಕೋತ್ತರ ಕೇಂದ್ರದ ಬಳಿ ೧೦೦ ಎಕರೆ ಜಮೀನಿದ್ದರೂ ಅಭಿವೃದ್ಧಿಗೆ ಆಸಕ್ತಿ ತೋರುತ್ತಿಲ್ಲ. ಮಂಡ್ಯ ಜಿಲ್ಲೆ ಶೈಕ್ಷಣಿಕವಾಗಿ ಅಭಿವೃದ್ಧಿಯಾಗುತ್ತಿದ್ದರೂ ಅದನ್ನರಿಯದೆ ಹಿನ್ನಡೆಗೆ ಆಳುವವರು ಕಾರಣರಾಗುತ್ತಿದ್ದಾರೆಂದು ಆರೋಪಿಸಿದರು.
ಮಾ.೧ರಂದು ಎಲ್ಲಾ ರೈತ, ದಲಿತ, ಭಾರತೀಯ ಕಿಸಾನ್ ಮೋರ್ಚಾ, ದಲಿತ ಸಂಘಟನೆಗಳ ಮುಖಂಡರೊಂದಿಗೆ ಚರ್ಚೆ ನಡೆಸಿ ಮಂಡ್ಯ ವಿಶ್ವವಿದ್ಯಾಲಯವನ್ನು ಉಳಿಸುವ ನಿಟ್ಟಿನಲ್ಲಿ ಹೋರಾಟ ರೂಪಿಸಲಾಗುವುದು ಎಂದರು.
ಗೋಷ್ಠಿಯಲ್ಲಿ ಡಿ.ಅಶೋಕ್, ಹೆಮ್ಮಿಗೆ ಚಂದ್ರಶೇಖರ್, ಹೊಳಲು ಶಿವಣ್ಣ, ಮೋಹನ್, ಅಚ್ಚುತ್ ಇದ್ದರು.