ಸಾರಾಂಶ
ಅರಣ್ಯ ಇಲಾಖೆ ವರ್ತನೆ ವಿರುದ್ಧ ರೈತರು ನ್ಯಾಯಲಯದ ಮೋರೆ ಹೋಗಿದ್ದಾರೆ. ಅಲ್ಲಿ ಇದುವರಿಗೂ ಯಾವುದೇ ಇತ್ಯರ್ಥವಾಗಿಲ್ಲ. ಅಷ್ಟರಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಆ ಜಮೀನಿನಲ್ಲಿ ಸಸಿ ನಾಟಿ ಮಾಡುವುದು ಅಕ್ರಮ ಎಂಬುದು ಬಗರ್‌ಹುಕುಂ ಸಾಗುವಳಿ ಮಾಡುತ್ತಿರುವ ರೈತರ ವಾದ.
ಕನ್ನಡಪ್ರಭ ವಾರ್ತೆ ಶ್ರೀನಿವಾಸಪುರ
ರೈತರು ಉಳುಮೆ ಮಾಡುತ್ತಿದ್ದ ಜಮೀನನ್ನು ಇತ್ತೀಚೆಗೆ ಅರಣ್ಯ ಇಲಾಖೆ ಅಧಿಕಾರಿಗಳು ತೆರವು ಮಾಡಿಸಿ ಅಲ್ಲಿ ಗಿಡನಾಟಿ ಮಾಡಲು ಮುಂದಾಗಿದ್ದರು. ಆದರೆ ಇದನ್ನು ವಿರೋಧಿಸಿದ ರೈತ ಕುಟುಂಬಗಳು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ನಡುವೆ ತಳ್ಳಾಟ ನೂಕಾಟ ನಡೆದ ಘಟನೆ ತಾಲೂಕಿನ ಕೋಟಬಲ್ಲಪಲ್ಲಿ ಗ್ರಾಮದ ಬಳಿ ನಡೆದಿದೆ. ಈ ಸಂದರ್ಭದಲ್ಲಿ ಒಬ್ಬ ರೈತ ಮಹಿಳೆ ಅಯಾತಪ್ಪಿ ಕೆಳಗೆ ಬಿದ್ದು ಅಸ್ವಸ್ತರಾಗಿದ್ದು ತಕ್ಷಣ ಸ್ಥಳೀಯರು 108 ಆ್ಯಂಬುಲೆನ್ಸ್ ಕರೆಸಿ ಅಸ್ಪತ್ರೆಗೆ ದಾಖಲಿಸಿದ್ದಾರೆ. ಸಸಿ ನಾಟಿಗೆ ರೈತರ ವಿರೋಧನಾವು ಉಳುಮೆ ಮಾಡುತ್ತಿದ್ದ ಜಾಗ ನಮ್ಮದು ಎಂದು ರೈತರು ಘೋಷಣೆಗಳನ್ನು ಕೂಗಿದರು. ತಾವು ಬೆಳೆದಿದ್ದ ಮಾವು ಇತರೆ ಬೆಳೆಗಳನ್ನು ನಾಶ ಮಾಡಿ ಈಗ ಸಸಿ ನೆಡಲು ಅರಣ್ಯ ಇಲಾಖೆ ಮುಂದಾಗಿದೆ. ಇದಕ್ಕೆ ನಾವು ಅವಕಾಶ ನೀಡುವುದಿಲ್ಲ ಎಂದು ರೈತರು ಪ್ರತಿಭಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡ ಪಾತಕೋಟೆ ನವೀನ್, ಅರಣ್ಯ ಇಲಾಖೆ ವರ್ತನೆ ವಿರುದ್ಧ ರೈತರು ನ್ಯಾಯಲಯದ ಮೋರೆ ಹೋಗಿದ್ದಾರೆ. ಅಲ್ಲಿ ಇದುವರಿಗೂ ಯಾವುದೇ ಇತ್ಯರ್ಥವಾಗಿಲ್ಲ. ಅಷ್ಟರಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಆ ಜಮೀನಿನಲ್ಲಿ ಸಸಿ ನಾಟಿ ಮಾಡುವುದು ಅಕ್ರಮ ಎಂದರು.ಪೊಲೀಸರ ಮಧ್ಯ ಪ್ರವೇಶಸ್ಥಳಕ್ಕೆ ಆಗಮಿಸಿದ ರಾಯಲ್ಪಾಡು ಪ್ರಭಾರಿ ಠಾಣಾಧಿಕಾರಿ ರಾಮ್, ಜಮೀನಿಗೆ ಸಂಬಂದಿಸಿದಂತೆ ದಾಖಲೆಗಳು ಇದ್ದರೆ ಠಾಣೆಗೆ ತರುವಂತೆ ರೈತರಿಗೆ ತಿಳಿ ಹೇಳಿದರು. ದಾಖಲೆ ಪರಿಶೀಲಿಸುವವರೆಗೆ ಅರಣ್ಯ ಇಲಾಖೆ ಸಸಿ ನಾಟಿ ಮಾಡದಂತೆ ಸೂಚಿಸಿದರು.