ರೈಲ್ವೆ ಇಲಾಖೆಯಲ್ಲಿನ ಖಾಸಗೀಕರಣ ಮತ್ತು ಹೊರಗುತ್ತಿಗೆ ಪದ್ಧತಿ ವಿರೋಧಿಸಿ, ನೌಕರರ ದೀರ್ಘಕಾಲದ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ದಕ್ಷಿಣ ಪಶ್ಚಿಮ ರೈಲ್ವೆ ಮಜ್ದೂರ್ ಯೂನಿಯನ್ (ಎಸ್ಡಬ್ಲ್ಯೂಆರ್ಎಂಯು) ವತಿಯಿಂದ ಬುಧವಾರ ಹುಬ್ಬಳ್ಳಿಯ ರೈಲ್ ಸೌಧದ ಎದುರು ಪ್ರತಿಭಟನೆ ನಡೆಸಲಾಯಿತು.
ಹುಬ್ಬಳ್ಳಿ:
ರೈಲ್ವೆ ಇಲಾಖೆಯಲ್ಲಿನ ಖಾಸಗೀಕರಣ ಮತ್ತು ಹೊರಗುತ್ತಿಗೆ ಪದ್ಧತಿ ವಿರೋಧಿಸಿ, ನೌಕರರ ದೀರ್ಘಕಾಲದ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ದಕ್ಷಿಣ ಪಶ್ಚಿಮ ರೈಲ್ವೆ ಮಜ್ದೂರ್ ಯೂನಿಯನ್ (ಎಸ್ಡಬ್ಲ್ಯೂಆರ್ಎಂಯು) ವತಿಯಿಂದ ಬುಧವಾರ ಹುಬ್ಬಳ್ಳಿಯ ರೈಲ್ ಸೌಧದ ಎದುರು ಪ್ರತಿಭಟನೆ ನಡೆಸಲಾಯಿತು.ಪ್ರಧಾನ ಕಾರ್ಯದರ್ಶಿ ಕೆ.ವಿ. ರಾಘವೇಂದ್ರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ರೈಲ್ವೆ ನೌಕರರು ಹಾಗೂ ಸಂಘಟನೆಯ ಪದಾಧಿಕಾರಿಗಳು ಭಾಗವಹಿಸಿ, ನೌಕರರ ಸಮಸ್ಯೆಗಳಿಗೆ ತಕ್ಷಣ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿದರು.
ರೈಲ್ವೆಯ ವಿದ್ಯುತ್, ಯಾಂತ್ರಿಕ, ಸಿಗ್ನಲ್ ಮತ್ತು ದೂರಸಂಪರ್ಕ ಹಾಗೂ ವಾಣಿಜ್ಯ ವಿಭಾಗಗಳ ಪ್ರಮುಖ ಕಾರ್ಯಚಟುವಟಿಕೆಗಳನ್ನು ಖಾಸಗೀಕರಣ ಮತ್ತು ಹೊರಗುತ್ತಿಗೆಗೆ ವಹಿಸುವ ಕ್ರಮವನ್ನು ಪ್ರತಿಭಟನಾಕಾರರು ವಿರೋಧಿಸಿದರು. ರೈಲ್ವೆಯ ವಿವಿಧ ವಿಭಾಗಗಳಲ್ಲಿನ ಖಾಲಿ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕು. ಹೆಚ್ಚುವರಿ ಹುದ್ದೆಗಳನ್ನು ಸೃಷ್ಟಿಸಿ ಸಿಬ್ಬಂದಿ ಕೊರತೆ ನಿವಾರಿಸಬೇಕು ಎಂದು ಆಗ್ರಹಿಸಿದರು.ಪ್ರಮುಖ ಬೇಡಿಕೆ:
ರೈಲ್ವೆಯ ಪ್ರಮುಖ ವಿಭಾಗಗಳಲ್ಲಿ ಖಾಸಗೀಕರಣ ಮತ್ತು ಹೊರಗುತ್ತಿಗೆ ಪದ್ಧತಿ ನಿಲ್ಲಿಸಬೇಕು. ದಕ್ಷಿಣ ಪಶ್ಚಿಮ ರೈಲ್ವೆಯ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕು. ಸ್ಟೆಷನ್ ಮಾಸ್ಟರ್, ಟಿಕೆಟ್ ತಪಾಸಕರು, ಟ್ರ್ಯಾಕ್ ನಿರ್ವಹಣಾ ಸಿಬ್ಬಂದಿ, ಸಿಗ್ನಲ್ ಮತ್ತು ದೂರಸಂಪರ್ಕ ಹಾಗೂ ಇತರ ವಿಭಾಗಗಳಲ್ಲಿ ಹೆಚ್ಚುವರಿ ಹುದ್ದೆ ಸೃಷ್ಟಿಸಬೇಕು. ಅಂತರ್ ರೈಲ್ವೆ ವರ್ಗಾವಣೆ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಿ, ಸಂಗಾತಿಯ ಆಧಾರದ ಮೇಲಿನ ವರ್ಗಾವಣೆ ಅರ್ಜಿಗಳಿಗೆ ವಿಳಂಬವಿಲ್ಲದೆ ಪರಿಹಾರ ಒದಗಿಸಬೇಕು. ಬಾಕಿ ಉಳಿದಿರುವ ಪರೀಕ್ಷೆಗಳನ್ನು ಬೇಗನೆ ನಡೆಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲಾಯಿತು. ನಂತರ ಪ್ರತಿಭಟನಾಕಾರರು ದಕ್ಷಿಣ ಪಶ್ಚಿಮ ರೈಲ್ವೆಯ ಮಹಾಪ್ರಬಂಧಕರಿಗೆ ಬೇಡಿಕೆಗಳ ಪಟ್ಟಿಯೊಂದಿಗೆ ಮನವಿ ಸಲ್ಲಿಸಿದರು.ಈ ವೇಳೆ ಸಂಘಟನೆಯ ವಲಯ ಅಧ್ಯಕ್ಷ ಎಂ. ನಾಗೇಂದ್ರನ್, ವಿಭಾಗೀಯ ಕಾರ್ಯದರ್ಶಿಗಳಾದ ಎಂ. ಜಾಕೋಬ್, ಪಿ. ಶಿವಪ್ರಕಾಶ, ಟಿ.ಸ್. ಶ್ರೀನಿವಾಸ, ಬಿ.ಜಿ. ಶಿವಪ್ರಸಾದ್, ಜಾಕೀರ್ ಸನದಿ, ಸಂತೋಷ ನಾಲ್ವಾಡ, ಮನೋಹರ ಎಂ., ಎ.ಕೆ. ಸುಂದರಾಮ್, ಶಿವಕುಮಾರ ವಿ., ಪ್ರವೀಣ ಪಾಟೀಲ, ಸಿ.ಮುರುಘನ್ ಸೇರಿದಂತೆ ಹಲವರಿದ್ದರು.