ಸಾರಾಂಶ
ಎಲ್ಲ ಪಾಲಕರ ಅಭಿಪ್ರಾಯದಂತೆ ಈಗಿರುವ ಜಾಗದಲ್ಲೇ ಮೌಲಾನಾ ಆಜಾದ್ ಶಾಲೆ ನಿರ್ಮಿಸಲು ಆ.4ರಂದು ಕೊಪ್ಪಳಕ್ಕೆ ಬರುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಗುವುದು.
ಕೊಪ್ಪಳ:
ಮೌಲಾನಾ ಆಜಾದ್ ಮಾದರಿ ಆಂಗ್ಲ ಮಾಧ್ಯಮ ಶಾಲೆ ಸ್ಥಳಾಂತರಿಸಲು ಸರ್ದಾರ್ ಗಲ್ಲಿ ಶಾಲಾ ಪಾಲಕರ ಸಭೆಯಲ್ಲಿ ವಿರೋಧಿಸಿ ನಿರ್ಣಯ ಕೈಗೊಳ್ಳಲಾಯಿತು.ನಗರದ ಇಂದಿರಾ ಕ್ಯಾಂಟೀನ್ ಹಿಂದೆ ಇರುವ ಮೌಲಾನಾ ಆಜಾದ್ ಮಾದರಿ ಆಂಗ್ಲ ಮಾಧ್ಯಮ ಶಾಲಾ ಪಾಲಕರ ಹೋರಾಟ ಸಮಿತಿ ಅಧ್ಯಕ್ಷ ಮುನೀರ್ ಅಹ್ಮದ್ ಸಿದ್ದೀಕಿ ಮಾತನಾಡಿ, ಎಲ್ಲ ಪಾಲಕರ ಅಭಿಪ್ರಾಯದಂತೆ ಈಗಿರುವ ಜಾಗದಲ್ಲೇ ಮೌಲಾನಾ ಆಜಾದ್ ಶಾಲೆ ನಿರ್ಮಿಸಲು ಆ.4ರಂದು ಕೊಪ್ಪಳಕ್ಕೆ ಬರುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸೋಣ ಎಂದು ಹೇಳಿದರು.ಸಮಿತಿ ಉಪಾಧ್ಯಕ್ಷ ಅಯ್ಯೂಬ್ ಅಡ್ಡೆ ವಾಲೆ ಮಾತನಾಡಿ, ನಮ್ಮ ಮಕ್ಕಳಿಗೆ ಇದೇ ಶಾಲೆಯಲ್ಲಿ ಓದಲು ಮುಂದುವರಿಸುತ್ತೇವೆ. ಬೇರೆ ಎಲ್ಲೂ ಸೂಕ್ತ ಜಾಗವಿಲ್ಲ. ಈ ಭಾಗದ ಮಕ್ಕಳಿಗೆ ಶಾಲೆ ಅನುಕೂಲಕರವಾಗಿದೆ. ಯಾವುದೇ ಕಾರಣಕ್ಕೂ ಸ್ಥಳಾಂತರ ಸಹಿಸುವುದಿಲ್ಲ ಎಂದರು.ಸಲೀಮ್ ಖಾದ್ರಿ, ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಎಸ್.ಎ. ಗಫಾರ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಅಜ್ಮೀರ್ ಅಲಿ ಸ್ಥಳಾಂತರ ವಿರೋಧಿಸಿದರು.
ಸಭೆಯಲ್ಲಿ ಶಾಮೀದ್ ಕಿಲ್ಲೇದಾರ್, ಅಖಾನಿ ಖಾಝಿ, ಹುಸೇನ್ ಪಾಶಾ ಮಾನವಿ, ನಝೀರ್ ಅಹ್ಮದ್ ಬೇಗ, ಪ್ರಭಾರಿ ಮುಖ್ಯೋಪಾಧ್ಯಾಯ ಲಾಲ್ ಸಾಬ್ ವಾಲಿಕಾರ, ನಗರಸಭೆ ಸದಸ್ಯ ಅರುಣ ಶೆಟ್ಟಿ, ವಸಿ ರೆಹಮಾನ್, ಮೈನುದ್ದೀನ್ ಮೇಸ್ತ್ರಿ, ಸೈಯ್ಯದ್ ಅಬ್ದುಲ್ ನಯೀಮ್, ಝಹುರ್ ಮೇಸ್ತ್ರಿ, ಗಾಳೆಪ್ಪ ಭಾಗವಹಿಸಿದ್ದರು.