ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ತಾಲೂಕಿನ ಕೋರಮಂಡಲ್ ಸಕ್ಕರೆ ಕಾರ್ಖಾನೆ ಸ್ಥಾಪಿಸಲು ಉದ್ದೇಶಿಸಿರುವ 150 ಕೆಎಲ್‌ಡಿ ಡಿಸ್ಟಿಲರಿ ಮತ್ತು ಎಥೆನಾಲ್ ಘಟಕಕ್ಕೆ ಪರಿಸರ ಇಲಾಖೆ ಕ್ಲಿಯರೆನ್ಸ್ ಪತ್ರ ನೀಡಬಾರದೆಂದು ಒತ್ತಾಯಿಸಿ ಗ್ರಾಮಸ್ಥರು, ರೈತರು ತಹಸೀಲ್ದಾರ್‌ಗೆ ಮನವಿ ಪತ್ರ ಅರ್ಪಿಸಿದರು.ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಸಭೆ ನಡೆಸಿದ ಕಾರ್ಖಾನೆ ವ್ಯಾಪ್ತಿಯ ಗ್ರಾಮಸ್ಥರು, ರೈತರು ಆನಂತರ ಮಿನಿ ವಿಧಾನ ಸೌಧಕ್ಕೆ ಆಗಮಿಸಿ ಧರಣಿ ನಡೆಸಿ ಕಾರ್ಖಾನೆ ಹಾಗೂ ಪರಿಸರ ಇಲಾಖೆ ವಿರುದ್ಧ ಧಿಕ್ಕಾರ ಕೂಗಿದರು.
ರೈತ ಸಂಘದ ಜಿಲ್ಲಾ ಮಾಜಿ ಅಧ್ಯಕ್ಷ ಎಂ.ವಿ.ರಾಜೇಗೌಡ ಮಾತನಾಡಿ, ರೈತನ ಮಿತ್ರ ಅಂತ ಹೇಳಿ ಕೋರಮಂಡಲ್ ಕಾರ್ಖಾನೆ ರೈತರ ಬದುಕಿಗೆ ವಿಷ ಹಾಕುತ್ತಿದೆ. ನಿಯಮಾವಳಿ ಮೀರಿ ತನ್ನ ಪ್ರಭಾವ ಬಳಸಿ ಹೇಮಾವತಿ ನದಿ ದಡದಲ್ಲಿ ಮಾಲೀಕ ಕಾರ್ಖಾನೆ ಆರಂಭಿಸಿದ್ದಾನೆ ಎಂದು ಕಿಡಿಕಾರಿದರು.ಕಾರ್ಖಾನೆ ಆರಂಭಿಸಿದ ನಂತರ ಮುನ್ನೆಚ್ಚರಿಕೆ ಕ್ರಮ ಪಾಲಿಸುತ್ತಿಲ್ಲ. ಕಲುಷಿತ ತ್ಯಾಜ್ಯ ನೀರನ್ನು ಹೇಮಾವತಿ ನದಿಗೆ ಹರಿಸಿ ಪಟ್ಟಣ ಸೇರಿದಂತೆ ಕಾರ್ಖಾನೆ ಪರಿಸರದ ಜನರಿಗೆ ವಿಷದ ನೀರು ಕುಡಿಸಲಾಗುತ್ತಿದೆ ಎಂದು ದೂರಿದರು.
ಕೋಜನ್ ಘಟಕ ಆರಂಭಿಸಲ್ಲ ಎನ್ನುತ್ತಲೇ ವಿದ್ಯುತ್ ಉತ್ಪಾದನಾ ಘಟಕ ಆರಂಭಿಸಿ ಸುತ್ತಮುತ್ತಲ ಜನರಿಗೆ ಅನ್ನದ ಜೊತೆಗೆ ಹಾರುಬೂದಿ ಉಣಿಸಲಾಗುತ್ತಿದೆ. ಪರಿಸರದ ಹಾನಿ ಜೊತೆಗೆ ಕೃಷಿ ಉತ್ಪನ್ನಗಳ ಇಳುವರಿ ಕಡಿಮೆಯಾಗಿ ಜನರು ಆರೋಗ್ಯ ಸಮಸ್ಯೆಗಳಿಗೆ ಒಳಗಾಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕೃಷಿ ಅಧಿಕಾರಿಗಳು ಈಗಾಗಲೇ ಸ್ಥಳ ಪರಿಶೀಲನೆ ನಡೆಸಿ ಹಾರು ಬೂದಿಯಿಂದ ಕೃಷಿ ಉತ್ಪಾದನೆ ಮೇಲೆ ಆಗುತ್ತಿರುವ ದುಷ್ಪರಿಣಾಮದ ಬಗ್ಗೆ ಸರ್ಕಾರಕ್ಕೆ ವರದಿ ನೀಡಿದ್ದಾರೆ. ಚೆನ್ನೈ ಮಹಾನಗರದ ಹಸಿರು ನ್ಯಾಯಾಲಯದ ಮುಂದೆ ಡಿಸ್ಟಿಲರಿ ಮತ್ತು ಎಥೆನಾಲ್ ಉತ್ಪಾದನಾ ಘಟಕ ಆರಂಭಿಸುವುದಿಲ್ಲ ಎಂದು ಹೇಳಿಕೆ ನೀಡಿ ಈಗ ಕಾರ್ಖಾನೆ ತನ್ನ ಆವರಣದಲ್ಲಿ ಎಥೆನಾಲ್ ಘಟಕ ಆರಂಭಕ್ಕೆ ಸಿದ್ಧತೆ ನಡೆಸುತ್ತಿದೆ ಎಂದು ಕಿಡಿಕಾರಿದರು.
ಪರಿಸರ ಇಲಾಖೆ ಮತ್ತು ಜಿಲ್ಲಾಡಳಿತ ಕೇವಲ ನೋಟಿಸ್ ನೀಡಿ ಕಾರ್ಖಾನೆ ಪರ ನಡೆದುಕೊಳ್ಳುತ್ತಿದೆ. ಕಾರ್ಖಾನೆ ಇತ್ತೀಚೆಗೆ ತನ್ನ ಗೆಸ್ಟ್ ಹೌಸ್ ನಲ್ಲಿ ಲೇಬರ್ ಗುತ್ತಿಗೆದಾರರು ಮತ್ತು ಆಮಿಷಕ್ಕೆ ಒಳಗಾದ ಕೆಲವು ವ್ಯಕ್ತಿಗಳನ್ನು ಸೇರಿಸಿಕೊಂಡು ಗುಪ್ತ ಸಭೆ ನಡೆಸಿ ಎಥೆನಾಲ್ ಘಟಕ ಮತ್ತು ಡಿಸ್ಟಿಲರಿ ಘಟಕ ಸ್ಥಾಪನೆಗೆ ಅನುಮತಿ ನೀಡುವಂತೆ ರೈತರ ಹೆಸರಿನಲ್ಲಿ ಜಿಲ್ಲಾಡಳಿತ ಮತ್ತು ಪರಿಸರ ಇಲಾಖೆಗೆ ಮನವಿ ನೀಡಲು ನಮ್ಮ ಗಮನಕ್ಕೆ ಎಂದರು.ಬಂಡವಾಳ ಶಾಹಿ ವ್ಯವಸ್ಥೆ ಭ್ರಷ್ಟ ರಾಜಕೀಯ ಪುಡಾರಿಗಳು ಮತ್ತು ಅಧಿಕಾರಿಗಳ ಮೂಲಕ ತನ್ನ ಕಾರ್ಯ ಸಾಧನೆಗೆ ಮುಂದಾಗಿದ್ದು ರೈತಸಂಘ ಇದನ್ನು ಪ್ರಬಲವಾಗಿ ವಿರೋಧಿಸುತ್ತದೆ. ರಕ್ತ ಕೊಟ್ಟಿಯಾದರೂ ಎಥೆನಾಲ್ ಉತ್ಪಾದನಾ ಘಟಕ ಸ್ಥಾಪನೆ ನಿಲ್ಲಿಸುತ್ತೇವೆಂದು ಎಚ್ಚರಿಸಿ ತಹಸೀಲ್ದಾರ್ ಎಸ್.ಯು.ಅಶೋಕ್ ಗೆ ಮನವಿ ಪತ್ರ ಸಲ್ಲಿಸಿದರು.
ಈ ವೇಳೆ ಜಿಲ್ಲಾ ರೈತಸಂಘದ ಉಪಾಧ್ಯಕ್ಷ ಮರುವನಹಳ್ಳಿ ಶಂಕರ್, ಮುಖಂಡರಾದ ಕರೋಟಿ ತಮ್ಮಯ್ಯ, ಎಲ್.ಬಿ.ಜಗದೀಶ್, ಮುದ್ದುಕುಮಾರ್, ನಗರೂರು ಕುಮಾರ್, ಹೊನ್ನೇಗೌಡ, ಕೃಷ್ಣಾಪುರ ರಾಜಣ್ಣ, ನೀತಿಮಂಗಲ ಮಹೇಶ್, ಕಾಗೇಪುರ ಮಹೇಶ್, ಚೌಡೇನಹಳ್ಳಿ ಕೃಷ್ಣೇಗೌಡ, ಬ್ಯಾಲದಕೆರೆ ಶಿವಣ್ಣ, ಮಾಕವಳ್ಳಿ ಯೋಗೆಶ್ ಸೇರಿದಂತೆ ಕಾರ್ಖಾನೆ ಸುತ್ತಮುತ್ತಲ ಗ್ರಾಮಗಳ ರೈತರು ಭಾಗವಹಿಸಿದ್ದರು.