ಎಸ್ಐಆರ್ ಪ್ರಕ್ರಿಯೆಯನ್ನು ವಿರೋಧಿಸಿ ಸಿಐಟಿಯು ಸಂಯುಕ್ತ ರೈತ ಮೋರ್ಚಾದಿಂದ ದೇಶದಾದ್ಯಂತ ಪ್ರತಿಭಟನೆಗೆ ಕರೆ ನೀಡಲಾಗಿದ್ದು, ಈ ಹಿನ್ನಲೆಯಲ್ಲಿ ಶುಕ್ರವಾರ ಪುತ್ತೂರಿನ ಗಾಂಧಿ ಕಟ್ಟೆಯ ಮುಂಭಾಗದಲ್ಲಿ ಸಿಐಟಿಯು ನೇತೃತ್ವದಲ್ಲಿ ಧರಣಿ ಪ್ರತಿಭಟನೆ ನಡೆಸಲಾಯಿತು.
ಕನ್ನಡಪ್ರಭವಾರ್ತೆ ಪುತ್ತೂರು
ಎಸ್ಐಆರ್ ಪ್ರಕ್ರಿಯೆಯನ್ನು ವಿರೋಧಿಸಿ ಸಿಐಟಿಯು ಸಂಯುಕ್ತ ರೈತ ಮೋರ್ಚಾದಿಂದ ದೇಶದಾದ್ಯಂತ ಪ್ರತಿಭಟನೆಗೆ ಕರೆ ನೀಡಲಾಗಿದ್ದು, ಈ ಹಿನ್ನಲೆಯಲ್ಲಿ ಶುಕ್ರವಾರ ಪುತ್ತೂರಿನ ಗಾಂಧಿ ಕಟ್ಟೆಯ ಮುಂಭಾಗದಲ್ಲಿ ಸಿಐಟಿಯು ನೇತೃತ್ವದಲ್ಲಿ ಧರಣಿ ಪ್ರತಿಭಟನೆ ನಡೆಸಲಾಯಿತು.ಈ ಸಂದರ್ಭ ಮಾತನಾಡಿದ ಸಿಐಟಿಯು ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ವಕೀಲ ಬಿ.ಎಂ. ಭಟ್ ದೇಶದಲ್ಲಿ ಪ್ರಜಾಪ್ರಭುತ್ವ ನಾಶವಾಗುತ್ತಿದೆ. ತಾಯಿ-ಮಗನ ಸಂಬಂಧವನ್ನು ಸಾಬೀತುಪಡಿಸಲೂ ದಾಖಲೆ ಕೇಳುವಂತಹ ಪರಿಸ್ಥಿತಿಯನ್ನು ಕೇಂದ್ರ ಸರ್ಕಾರ ಸೃಷ್ಟಿಸುತ್ತಿದೆ ಎಂದರು.
ಕರ್ನಾಟಕ ರಾಜ್ಯ ರೈತ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ರೂಪೇಶ್ ರೈ ಅಲಿಮಾರು ಮಾತನಾಡಿ, ಎಸ್ಐಆರ್ ಪ್ರಕ್ರಿಯೆ ಅವ್ಯವಸ್ಥೆಯಿಂದ ಕೂಡಿದೆ. ಪ್ರಧಾನಿ, ಗೃಹ ಸಚಿವ ನೇತೃತ್ವದಲ್ಲಿ ದೇಶದ ವಿವಿಧ ವ್ಯವಸ್ಥೆಗಳು ಹದಗೆಡುತ್ತಿವೆ ಎಂದರು. ಸಿಐಟಿಯು ತಾಲೂಕು ಕಾರ್ಯದರ್ಶಿಯಾದ ವಕೀಲ ಪಿ.ಕೆ. ಸತೀಶನ್ ಮಾತನಾಡಿ ಕಮ್ಯುನಿಸ್ಟ್ ಪಕ್ಷದ ನೇತೃತ್ವದಲ್ಲಿ ದೇಶಾದ್ಯಂತ ಹೋರಾಟ ನಡೆಯುತ್ತಿದ್ದು, ಅಖಿಲ ಭಾರತ ಕಿಸಾನ್ ಸಭಾ ಈ ಹೋರಾಟಕ್ಕೆ ಬೆಂಬಲ ನೀಡುತ್ತಿದೆ ಎಂದರು. ಶ್ಯಾಮರಾಜ್, ಪ್ರಶಾಂತ್ ರೈ, ಸಿಐಟಿಯು ಮುಖಂಡ ದಾಮೋದರ್ ಗೌಡ ಹಿರೇಬಂಡಾಡಿ, ಜನಾರ್ದನ ಗೌಡ ಹಾಗೂ ಗುಡ್ಡಪ್ಪ ಉಪಸ್ಥಿತರಿದ್ದರು.