ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಕ್ಕೆ ವಿರೋಧ

| Published : Jun 20 2024, 01:06 AM IST

ಸಾರಾಂಶ

ಕಲ್ಯಾಣ ಕರ್ನಾಟಕ ಭಾಗದ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ತರಗತಿ ಪ್ರಾರಂಭಿಸುವ ಸರ್ಕಾರದ ನಿರ್ಧಾರ ವಿರೋಧಿಸಿ, ಕೂಡಲೇ ಆದೇಶ ಹಿಂಪಡೆಯುವಂತೆ ಒತ್ತಾಯಿಸಿ ನೂರಾರು ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು.

ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ । ಕೂಡಲೇ ಆದೇಶ ಹಿಂಪಡೆಯುವಂತೆ ಒತ್ತಾಯ

ಕನ್ನಡಪ್ರಭ ವಾರ್ತೆ ಕಾರಟಗಿ

ಕಲ್ಯಾಣ ಕರ್ನಾಟಕ ಭಾಗದ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ತರಗತಿ ಪ್ರಾರಂಭಿಸುವ ಸರ್ಕಾರದ ನಿರ್ಧಾರ ವಿರೋಧಿಸಿ, ಕೂಡಲೇ ಆದೇಶ ಹಿಂಪಡೆಯುವಂತೆ ಒತ್ತಾಯಿಸಿ ನೂರಾರು ಅಂಗನವಾಡಿ ಕಾರ್ಯಕರ್ತೆಯರು ಪಟ್ಟಣದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಇಲ್ಲಿನ ವಿಶೇಷ ಎಪಿಎಂಸಿಯಲ್ಲಿನ ತಹಸೀಲ್ ಕಚೇರಿ ಮುಂದೆ ವಿವಿಧಡೆಯಿಂದ ಆಗಮಿಸಿ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಅಂಗನವಾಡಿ ಕಾರ್ಯಕರ್ತೆರು ರಾಜ್ಯ ಅಂಗನವಾಡಿ ನೌಕರರ ಸಂಘ ಮತ್ತು ಸಿಐಟಿಯು ನೇತೃತ್ವದಲ್ಲಿ ಅನಿರ್ದಿಷ್ಟ ಅವಧಿಯ ಪ್ರತಿಭಟನೆ ಪ್ರಾರಂಭಿಸಿದರು.

ಜಿಲ್ಲಾ ಕೇಂದ್ರವನ್ನು ಬಿಟ್ಟು ರಾಜ್ಯ ಸರ್ಕಾರದ ಗಮನ ಸೆಳೆಯಲು ಜಿಲ್ಲಾ ಉಸ್ತುವಾರಿ ಸಚಿವರ ಊರಿನಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಕ-ಕ ಭಾಗದಲ್ಲಿ ಎಲ್‌ಕೆಜಿ ಆರಂಭಿಸುವ ಆದೇಶ ರದ್ದುಗೊಳಿಸಬೇಕು. ೧೦೦೮ ಅಂಗನವಾಡಿ ಕೇಂದ್ರಗಳನ್ನು ಗುರುತಿಸಿ, ಅಲ್ಲಿಯೇ ಈ ತರಗತಿ ಪ್ರಾರಂಭಿಸಲು ಕ್ರಮ ಕೈಗೊಳ್ಳಬೇಕು. ಅಲ್ಲಿಯೇ ಎಲ್ಲ ಸೌಲಭ್ಯ ನೀಡಬೇಕು. ಇದೀಗ ನಾವು ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳ ಉಸ್ತುವಾರಿ ಸಚಿವರ ಮನೆಯ ಮುಂದೆ ಪ್ರತಿಭಟನೆ ಆರಂಭಿಸಿದ್ದೇವೆ. ಇಲ್ಲೂ ಕೂಡ ಸಚಿವರೇ ಖುದ್ದು ಸ್ಥಳಕ್ಕೆ ಬಂದು ನಮ್ಮ ಮನವಿ ಸ್ವೀಕರಿಸಿ ಸರ್ಕಾರಕ್ಕೆ ವರದಿ ನೀಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಗೆ ಚಾಲನೆ ನೀಡಿದ ಅಂಗನವಾಡಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷೆ ಕಲಾವತಿ ಕುಲಕರ್ಣಿ ಮಾತನಾಡಿ, ಸಚಿವ ಸಂಪುಟದಲ್ಲಿ ಚರ್ಚಿಸದೇ ಕಲ್ಯಾಣ ಕರ್ನಾಟಕಕ್ಕೆ ಭಾಗದ ಆಯುಕ್ತರು ೧೦೦೮ ಶಾಲೆಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ಆರಂಭಿಸಲು ಮುಂದಾಗಿದ್ದಾರೆ. ಈ ತೀರ್ಮಾನ ಅಂಗನವಾಡಿ ಕಾರ್ಯಕರ್ತೆಯರ ಪಾಲಿಗೆ ಮರಣ ಶಾಸನವಾಗಿದೆ. ಮಕ್ಕಳಿಗೆ ಪೌಷ್ಠಿಕ ಆಹಾರ, ಆರೋಗ್ಯದ ಸೇವೆ ಮತ್ತು ಅಕ್ಷರ ಕಲಿಕೆ ಪ್ರಾರಂಭಕ್ಕೆ ಅಂಗನವಾಡಿ ಕೇಂದ್ರಗಳ ಸ್ಥಾಪನೆಯಾಗಿದೆ. ಆದರೆ ಸರ್ಕಾರದ ಹೊಸ ನಿರ್ಧಾರದಿಂದ 4 ವರ್ಷ ಮೇಲ್ಪಟ್ಟ ಮಕ್ಕಳಿಲ್ಲದ ಕೇಂದ್ರಗಳನ್ನು ಮುಚ್ಚಬೇಕಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.

ಶಿಕ್ಷಣ ಇಲಾಖೆಯಿಂದ ಪ್ರಾರಂಭವಾಗುವ ಎಲ್‌ಕೆಜಿ ಮತ್ತು ಯುಕೆಜಿಗೆ ದಾಖಲಾಗುವ ಮಕ್ಕಳು ಐಸಿಡಿಎಸ್‌ನಲ್ಲಿ ಈಗಾಗಲೇ ದಾಖಲಾಗಿದ್ದಾರೆ. ಇಲಾಖೆಯಲ್ಲಿ ಅನೌಪಚಾರಿಕ ಶಿಕ್ಷಣವನ್ನು ಮತ್ತು ಇಂಗ್ಲಿಷ್ ವರ್ಣಮಾಲೆ ಹಾಗೂ ಪದ ಗುಚ್ಚಗಳನ್ನು ಮಾತ್ರವೇ ಬೋಧಿಸುವುದು ಇದೆ. ಮಕ್ಕಳ ಅಪೌಷ್ಠಿಕತೆಯಡೆಗೆ ಅವರ ಗಮನ ಇರುವುದಿಲ್ಲ. ಅಂಗನವಾಡಿ ಕೇಂದ್ರ ಪೂರ್ವ ಪ್ರಾಥಮಿಕ ಶಿಕ್ಷಣ ಮತ್ತು ಪೌಷ್ಠಿಕತೆ ಎರಡರ ಬಗ್ಗೆಯೂ ಕಾಳಜಿ ವಹಿಸಲಾಗುತ್ತದೆ ಎಂದರು.

ಸಿಐಟಿಯು ಜಿಲ್ಲಾಧ್ಯಕ್ಷ ನಿರುಪಾದಿ ಬೆಣಕಲ್ ಮಾತನಾಡಿ, ರಾಜ್ಯದಲ್ಲಿ ಪ್ರಾಯೋಗಿಕವಾಗಿ ಕ-ಕ ಭಾಗದ ಏಳು ಜಿಲ್ಲೆಗಳ ಸಾವಿರದ ಎಂಟು ಸರ್ಕಾರಿ ಶಾಲೆಯಲ್ಲಿ ಈ ವರ್ಷದಿಂದ ಎಲ್‌ಕೆಜಿ, ಯುಕೆಜಿ ಆರಂಭ ಮಾಡಲು ಸರ್ಕಾರ ಪರವಾನಿಗೆ ನೀಡಿದೆ. ಕೂಡಲೇ ಈ ಆದೇಶ ಹಿಂಪಡೆಯಬೇಕು, ಆ ಮೂಲಕ ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರ ಬೆಂಬಲಕ್ಕೆ ನಿಲ್ಲಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಂಘಟನೆ ಜಿಲ್ಲಾ ಕಾರ್ಯದರ್ಶಿ ಗಿರಿಜಮ್ಮ, ಅಮರಮ್ಮ, ಲಲಿತಮ್ಮ, ಲಕ್ಷ್ಮೀದೇವಿ, ಅನಂತಲಕ್ಷ್ಮೀ, ದುರುಗಮ್ಮ, ಸಿಐಟಿಯುನ ಕೃಷ್ಣಪ್ಪ ನಾಯಕ್, ಮಂಜುನಾಥ್ ಡಗ್ಗಿ, ಚಂದುಸಾಬ್ ಸೇರಿದಂತೆ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಾರು ಅಂಗನವಾಡಿ ಕಾರ್ಯಕರ್ತೆಯರಿದ್ದರು.