ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಂಘಟನೆಗಳು ಸಂವಿಧಾನಬದ್ಧವಾಗಿ ಹೋರಾಟ ನಡೆಸುತ್ತಿದ್ದು, ಎಸ್‌ಸಿ, ಎಸ್‌ಟಿ ಸಮುದಾಯದ ಜನರಿಗೆ ನ್ಯಾಯ ಒದಗಿಸುವುದು ಅವುಗಳ ಉದ್ದೇಶವಾಗಿದೆ.

ಕಾರವಾರ: ಪರಿಶಿಷ್ಟ ಜಾತಿಗೆ ಸೇರದ ಮೊಗೇರ ಸಮುದಾಯದ ವ್ಯಕ್ತಿಯನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಉತ್ತರ ಕನ್ನಡ ಜಿಲ್ಲಾ ಸಂಚಾಲಕರನ್ನಾಗಿ ನೇಮಕ ಮಾಡಿರುವುದಕ್ಕೆ ಸಮಿತಿಯ ರಾಜ್ಯ ಸಮಿತಿ ಸದಸ್ಯ ದೀಪಕ ಬಿ. ಕುಡಾಳಕರ ವಿರೋಧ ವ್ಯಕ್ತಪಡಿಸಿದ್ದಾರೆ.ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಂಘಟನೆಗಳು ಸಂವಿಧಾನಬದ್ಧವಾಗಿ ಹೋರಾಟ ನಡೆಸುತ್ತಿದ್ದು, ಎಸ್‌ಸಿ, ಎಸ್‌ಟಿ ಸಮುದಾಯದ ಜನರಿಗೆ ನ್ಯಾಯ ಒದಗಿಸುವುದು ಅವುಗಳ ಉದ್ದೇಶವಾಗಿದೆ. ಆದರೆ ಶಿವಮೊಗ್ಗ ಜಿಲ್ಲೆಯ ಗುರುಮೂರ್ತಿ ಅವರು ಪರಿಶಿಷ್ಟ ಜಾತಿಗೆ ಸೇರದ, ಹಿಂದುಳಿದ ಮೀನುಗಾರ ಸಮುದಾಯದ ಮೊಗೇರ ಸಮುದಾಯದ ವ್ಯಕ್ತಿಯನ್ನು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕರನ್ನಾಗಿ ನೇಮಕ ಮಾಡಿರುವುದು ನೈಜ ಪರಿಶಿಷ್ಟ ಸಮುದಾಯದವರಿಗೆ ಅನ್ಯಾಯ ಮಾಡಿದಂತಾಗಿದೆ ಎಂದು ಆರೋಪಿಸಿದರು.ಜಿಲ್ಲೆಯಲ್ಲಿ ಮೀನುಗಾರ ಸಮುದಾಯದ ಕೆಲವರು ಪರಿಶಿಷ್ಟ ಜಾತಿಯ ಮೊಗವೀರ ಹೆಸರಿನಲ್ಲಿ ಸುಳ್ಳು ಜಾತಿ ಪ್ರಮಾಣಪತ್ರ ಪಡೆದು ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು. ಈ ಹಿನ್ನೆಲೆ ವಿವಿಧ ಎಸ್‌ಸಿ, ಎಸ್‌ಟಿ ಸಂಘಟನೆಗಳ ಹೋರಾಟದ ಫಲವಾಗಿ 2006ರಿಂದ ಸರ್ಕಾರ ಜಾತಿ ಪ್ರಮಾಣಪತ್ರಗಳ ಪರಿಶೀಲನೆಯನ್ನು ಕಟ್ಟುನಿಟ್ಟುಗೊಳಿಸಿ, ಅನರ್ಹರಿಗೆ ಪ್ರಮಾಣಪತ್ರ ನೀಡುವುದನ್ನು ತಡೆದಿದೆ ಎಂದು ತಿಳಿಸಿದರು.ಇಂತಹ ಸಂದರ್ಭದಲ್ಲಿ ಮೊಗೇರ ಸಮುದಾಯದ ವ್ಯಕ್ತಿಗೆ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಸ್ಥಾನ ನೀಡಿರುವುದು ಜಿಲ್ಲೆಯ ನೈಜ ಪರಿಶಿಷ್ಟ ಸಮುದಾಯದ ಹಿತಾಸಕ್ತಿಗೆ ಧಕ್ಕೆಯಾಗಿದೆ ಎಂದು ಕುಡಾಳಕರ ಹೇಳಿದರು. ಗುರುಮೂರ್ತಿ ಅವರೊಂದಿಗೆ ಗುರುತಿಸಿಕೊಂಡಿರುವ ನೈಜ ಪರಿಶಿಷ್ಟ ಸಮುದಾಯದವರು ಅವರಿಂದ ದೂರ ಸರಿಯಬೇಕು. ರಾಜ್ಯ ಹಾಗೂ ವಿವಿಧ ಜಿಲ್ಲೆಗಳ ಮುಖಂಡರು ಈ ನೇಮಕಾತಿ ವಿರುದ್ಧ ಧ್ವನಿ ಎತ್ತಬೇಕು ಎಂದು ಒತ್ತಾಯಿಸಿದ ಅವರು, ಈ ಸಂಬಂಧ ಕ್ರಮಕ್ಕೆ ಜಿಲ್ಲಾಧಿಕಾರಿಗಳಿಗೂ ಮನವಿ ಸಲ್ಲಿಸಿರುವುದಾಗಿ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಎಸ್. ಫಕೀರಪ್ಪ, ಪರಿಶಿಷ್ಟ ಜಾತಿ- ಪಂಗಡ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಕಿರಣ ಶಿರೂರು ಸೇರಿದಂತೆ ಇತರರು ಉಪಸ್ಥಿತರಿದ್ದರು.