ಔಷಧ ಮತ್ತು ಮಾರಾಟ ಪ್ರತಿನಿಧಿಗಳ ರಕ್ಷಣೆಗೆ ಇದ್ದಂತಹ ಕಾರ್ಮಿಕ ಸಂಹಿತೆಗಳನ್ನು ಬಿಟ್ಟು ಮಾರಕವಾಗುವ ಹೊಸ ಕಾರ್ಮಿಕ ಸಂಹಿತೆಗಳನ್ನು ಕೇಂದ್ರ ಸರ್ಕಾರವು ಜಾರಿಗೆ ತರಲು ಹೊರಟಿರುವುದನ್ನು ವಿರೋಧಿಸಿ ಬುಧವಾರ ಭಾರತ ವೈದ್ಯಕೀಯ ಮತ್ತು ಮಾರಾಟ ಪ್ರತಿನಿಧಿಗಳ ಸಂಘಗಳ ಒಕ್ಕೂಟದ ಜಿಲ್ಲಾ ಶಾಖೆಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.
ಶಿವಮೊಗ್ಗ: ಔಷಧ ಮತ್ತು ಮಾರಾಟ ಪ್ರತಿನಿಧಿಗಳ ರಕ್ಷಣೆಗೆ ಇದ್ದಂತಹ ಕಾರ್ಮಿಕ ಸಂಹಿತೆಗಳನ್ನು ಬಿಟ್ಟು ಮಾರಕವಾಗುವ ಹೊಸ ಕಾರ್ಮಿಕ ಸಂಹಿತೆಗಳನ್ನು ಕೇಂದ್ರ ಸರ್ಕಾರವು ಜಾರಿಗೆ ತರಲು ಹೊರಟಿರುವುದನ್ನು ವಿರೋಧಿಸಿ ಬುಧವಾರ ಭಾರತ ವೈದ್ಯಕೀಯ ಮತ್ತು ಮಾರಾಟ ಪ್ರತಿನಿಧಿಗಳ ಸಂಘಗಳ ಒಕ್ಕೂಟದ ಜಿಲ್ಲಾ ಶಾಖೆಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.
ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, ಕೇಂದ್ರ ಸರ್ಕಾರ ದೇಶದ ಲಕ್ಷಾಂತರ ಕಾರ್ಮಿಕರ ವ್ಯಾಪಕ ವಿರೋಧವಿದ್ದರೂ ನ.೨೧ ರಿಂದ ಏಕಪಕ್ಷೀಯವಾಗಿ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತಂದಿದೆ. ಈ ಕಾರ್ಮಿಕ ವಿರೋಧಿ ನಡೆಯನ್ನು ನಮ್ಮ ಒಕ್ಕೂಟ ವಿರೋಧಿಸಿದೆ. ಈಗಾಗಲೇ ಕಾರ್ಮಿಕ ಸಂಹಿತೆಗಳ ಪ್ರತಿಗಳನ್ನು ಕೂಡ ದೇಶಾದ್ಯಂತ ಸುಟ್ಟುಹಾಕುವ ಮೂಲಕ ಪ್ರತಿಭಟನೆ ಮಾಡಿದ್ದರೂ ಕೂಡ ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.ಕೇಂದ್ರ ಸರ್ಕಾರ ಕಾರ್ಪೋರೇಟ್ ಕಂಪನಿಗಳ ಋಣ ತೀರಿಸುವ ಸಲುವಾಗಿ ಇದೂವರೆಗೂ ಕಾರ್ಮಿಕ ವಿರೋಧಿ ಕಾರ್ಮಿಕ ಸಂಹಿತೆಗಳನ್ನು ವಾಪಾಸ್ಸು ಪಡೆದಿಲ್ಲ. ಔಷಧ ಮತ್ತು ಮಾರಾಟ ಪ್ರತಿನಿಧಿಗಳಿಗೆ ಇದರಿಂದ ತೊಂದರೆಯಾಗಿದೆ. ಪ್ರತಿನಿಧಿಗಳ ರಕ್ಷಣೆಗೆ ಇದ್ದ ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸಿದೆ. ಉದ್ದೇಶ ಪೂರ್ವಕವಾಗಿ ಹೊಸ ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತರಲು ಹೊರಟಿದೆ. ಇದು ಖಂಡನೀಯ. ಕಾರ್ಮಿಕರ ಆಕ್ರೋಶ ಇಡೀ ದೇಶದಲ್ಲಿ ಇದೆ. ಕರ್ನಾಟಕ ಸರ್ಕಾರ ಇದನ್ನು ನೋಡುತ್ತಿದ್ದರೂ ಕೂಡ ಇಂತಹ ವಿರೋಧಿ ಸಂಹಿತೆಗಳನ್ನು ಜಾರಿಗೆ ತರುವುದಿಲ್ಲವೆಂದು ಕಾರ್ಮಿಕರಿಗೆ ಭರವಸೆ ನೀಡಿಲ್ಲ. ಹಾಗಾಗಿ ಕೇಂದ್ರ ಸರ್ಕಾರದಂತೆ ರಾಜ್ಯ ಸರ್ಕಾರವೂ ಕೂಡ ಕಾರ್ಪೋರೇಟ್ ಕಂಪನಿಗಳ ಪರವಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.ಆದ್ದರಿಂದ ಕೇಂದ್ರ ಸರ್ಕಾರ ಕೂಡಲೇ ಕಾರ್ಪೋರೇಟ್ ಕಂಪನಿಗಳ ಪರವಾಗಿರುವ ಈ ನಾಲ್ಕೂ ಸಂಹಿತೆಗಳನ್ನು ವಾಪಾಸ್ಸು ಪಡೆಯಬೇಕು. ರಾಜ್ಯ ಸರ್ಕಾರ ಕೂಡ ರಾಜ್ಯದಲ್ಲಿ ಇದನ್ನು ಜಾರಿಮಾಡುವುದಿಲ್ಲ ಎಂದು ಭರವಸೆ ನೀಡಬೇಕು ಎಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಎಸ್.ಜಿ.ಅಶೋಕ್, ಕಾರ್ಯದರ್ಶಿ ಮಂಜುನಾಥ್ ಹೆಬ್ಬಾರ್, ಸಿ.ಬಿ.ಕುಲಕರ್ಣಿ ಸೇರಿದಂತೆ ಮತ್ತಿತರರಿದ್ದರು.