ಹಾರವಾಡ ಗ್ರಾಮದ 2 ಕಿಮೀ ವ್ಯಾಪ್ತಿಯಲ್ಲಿಯೇ ಈಗಾಗಲೇ ಬೃಹತ್ ಮೀನು ಸಂಸ್ಕರಣಾ ಘಟಕವಿದೆ. ಮತ್ತೊಂದು ಘಟಕ ನಿರ್ಮಾಣವಾದರೆ ಸುತ್ತಮುತ್ತಲಿನ ಹಸಿರು ಪರಿಸರ ನಾಶವಾಗುವುದರ ಜತೆಗೆ ಮೀನು ಸಂಸ್ಕರಣೆಯಿಂದ ಹೊರಬರುವ ತ್ಯಾಜ್ಯ ಹಾಗೂ ದುರ್ವಾಸನೆಯಿಂದ ಜನಜೀವನಕ್ಕೆ ತೊಂದರೆಯಾಗಲಿದೆ.
ಕಾರವಾರ: ಅಂಕೋಲಾ ತಾಲೂಕಿನ ಹಾರವಾಡ ಗ್ರಾಮದ ಜನವಸತಿ ಪ್ರದೇಶದ ಸಮೀಪ ನಿರ್ಮಾಣವಾಗುತ್ತಿರುವ ರಾಜ್ ಫಿಶರೀಸ್ ಮೀನು ಸಂಸ್ಕರಣಾ ಘಟಕದ ಕಾಮಗಾರಿಯನ್ನು ತಕ್ಷಣ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿ ಜಯಕರ್ನಾಟಕ ಜನಪರ ವೇದಿಕೆ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.ಹಾರವಾಡ ಗ್ರಾಮದ ಜನವಸತಿ ಪ್ರದೇಶದ ಸಮೀಪ ಬೃಹತ್ ಪ್ರಮಾಣದಲ್ಲಿ ಮೀನು ಸಂಸ್ಕರಣಾ ಘಟಕ ನಿರ್ಮಿಸಲಾಗುತ್ತಿದ್ದು, ಇದರಿಂದ ಸುತ್ತಮುತ್ತಲಿನ ಜನರ ಆರೋಗ್ಯ ಹಾಗೂ ಪರಿಸರದ ಮೇಲೆ ಗಂಭೀರ ಪರಿಣಾಮ ಉಂಟಾಗುವ ಸಾಧ್ಯತೆಯಿದೆ ಎಂದು ಸಂಘಟನೆ ಆತಂಕ ವ್ಯಕ್ತಪಡಿಸಿದೆ. ಘಟಕ ನಿರ್ಮಾಣವಾಗುತ್ತಿರುವ ಸ್ಥಳ ಸಿಆರ್ಝೆಡ್ ವ್ಯಾಪ್ತಿಗೆ ಒಳಪಡುತ್ತದೆ. ಹೀಗಾಗಿ ಘಟಕಕ್ಕೆ ನೀಡಿರುವ ಅನುಮತಿಗಳ ಕಾನೂನುಬದ್ಧತೆಯನ್ನು ಪರಿಶೀಲಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.ಹಾರವಾಡ ಗ್ರಾಮದ 2 ಕಿಮೀ ವ್ಯಾಪ್ತಿಯಲ್ಲಿಯೇ ಈಗಾಗಲೇ ಬೃಹತ್ ಮೀನು ಸಂಸ್ಕರಣಾ ಘಟಕವಿದೆ. ಮತ್ತೊಂದು ಘಟಕ ನಿರ್ಮಾಣವಾದರೆ ಸುತ್ತಮುತ್ತಲಿನ ಹಸಿರು ಪರಿಸರ ನಾಶವಾಗುವುದರ ಜತೆಗೆ ಮೀನು ಸಂಸ್ಕರಣೆಯಿಂದ ಹೊರಬರುವ ತ್ಯಾಜ್ಯ ಹಾಗೂ ದುರ್ವಾಸನೆಯಿಂದ ಜನಜೀವನಕ್ಕೆ ತೊಂದರೆಯಾಗಲಿದೆ. ವಿಶೇಷವಾಗಿ ಮಕ್ಕಳು ಹಾಗೂ ಗರ್ಭಿಣಿಯರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವ ಆತಂಕವಿದೆ ಎಂದು ವೇದಿಕೆ ತಿಳಿಸಿದೆ.ಮೀನಿನ ತ್ಯಾಜ್ಯದ ದುರ್ವಾಸನೆಯಿಂದ ಜಿಲ್ಲೆಯಲ್ಲಿ ಒಂದು ವಾರದ ಅವಧಿಯಲ್ಲಿ ಐವರು ಮೃತಪಟ್ಟಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಮತ್ತೊಂದು ಘಟಕಕ್ಕೆ ಅವಕಾಶ ನೀಡುವುದು ಜನರ ಜೀವದ ಜತೆ ಚೆಲ್ಲಾಟವಾಡಿದಂತಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದೆ.ಉದ್ದೇಶಿತ ಘಟಕ ನಿರ್ಮಾಣಕ್ಕೆ ನೀಡಿರುವ ಅನುಮತಿ ಪತ್ರ ಹಾಗೂ ಅದಕ್ಕಾಗಿ ಸಲ್ಲಿಸಿರುವ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಬೇಕು. ನಿಯಮ ಉಲ್ಲಂಘನೆಯಾಗಿದ್ದರೆ ಸಂಬಂಧಪಟ್ಟವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ತಕ್ಷಣವೇ ಅಧಿಕಾರಿಗಳ ಮೂಲಕ ಕಾಮಗಾರಿ ಸ್ಥಗಿತಗೊಳಿಸಲು ಆದೇಶಿಸಬೇಕು ಎಂದು ಆಗ್ರಹಿಸಲಾಗಿದೆ.ಜನರ ಆರೋಗ್ಯ ಹಾಗೂ ಪರಿಸರಕ್ಕೆ ಅಪಾಯ ಉಂಟುಮಾಡುವ ಘಟಕ ಸ್ಥಾಪನೆಗೆ ಕುಮ್ಮಕ್ಕು ನೀಡುವವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು. ತಮ್ಮ ಬೇಡಿಕೆಗೆ ಸ್ಪಂದಿಸಿ 20 ದಿನಗಳೊಳಗಾಗಿ ಉದ್ದೇಶಿತ ಘಟಕದ ನಿರ್ಮಾಣ ಕೈಬಿಡುವ ಕುರಿತು ಸರ್ಕಾರ ಅಧಿಕೃತ ಹೇಳಿಕೆ ನೀಡಬೇಕು. ಇಲ್ಲವಾದಲ್ಲಿ ಘಟಕದ ವಿರುದ್ಧ ಜಿಲ್ಲೆ ಹಾಗೂ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಜಯಕರ್ನಾಟಕ ಜನಪರ ವೇದಿಕೆ ಎಚ್ಚರಿಸಿದೆ.
ಜಿಲ್ಲಾಧ್ಯಕ್ಷ ದಿಲೀಪ್ ಜಿ. ಅರ್ಗೇಕರ್, ಜಿಲ್ಲಾ ಉಪಾಧ್ಯಕ್ಷ ಸುನಿಲ್ ತಾಂಡೇಲ್, ಜಿಲ್ಲಾ ಯುವ ಘಟಕದ ಅಧ್ಯಕ್ಷ ಸುದೇಶ್ ನಾಯ್ಕ, ಯುವ ಘಟಕದ ಕಾರ್ಯಾಧ್ಯಕ್ಷ ರಾಹುಲ್ ತಾಂಡೇಲ್, ತಾಲೂಕು ಅಧ್ಯಕ್ಷ ಮೋಹನ್ ಉಳ್ವೇಕರ್ ಹಾಗೂ ಪ್ರಮುಖರಾದ ಭರತ್ ಖಾರ್ವಿ, ಜೀವನ್ ತಾಂಡೇಲ್, ಸಂತೋಷ್ ಪಡ್ತಿ ಮತ್ತು ನವೀನ್ ಹರಿಕಂತ್ರ ಉಪಸ್ಥಿತರಿದ್ದರು.