ಬಾಗಲಕೋಟೆ ತೋಟಗಾರಿಕೆ ವಿವಿ ವಿಭಜನೆಗೆ ವಿರೋಧ

| Published : Mar 12 2025, 12:46 AM IST

ಸಾರಾಂಶ

ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿರುವ ಕಾಲೇಜು, ಸಂಸ್ಥೆಗಳನ್ನು ಉದ್ದೇಶಿತ ಮಂಡ್ಯದ ಕೃಷಿ ಮತ್ತು ತೋಟಗಾರಿಕೆ ವಿವಿಗೆ ಹಸ್ತಾಂತರ ಮಾಡಲು ಸಭಾಪತಿ ಬಸವರಾಜ ಹೊರಟ್ಟಿ ಸೇರಿ ಬಿಜೆಪಿಯ ಪಿ.ಎಚ್‌. ಪೂಜಾರ್, ಡಾ.ತಳವಾರ ಸಾಬಣ್ಣ, ಹಣಮಂತ ನಿರಾಣಿ ವಿರೋಧ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ವಿಧಾನ ಪರಿಷತ್‌

ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿರುವ ಕಾಲೇಜು, ಸಂಸ್ಥೆಗಳನ್ನು ಉದ್ದೇಶಿತ ಮಂಡ್ಯದ ಕೃಷಿ ಮತ್ತು ತೋಟಗಾರಿಕೆ ವಿವಿಗೆ ಹಸ್ತಾಂತರ ಮಾಡಲು ಸಭಾಪತಿ ಬಸವರಾಜ ಹೊರಟ್ಟಿ ಸೇರಿ ಬಿಜೆಪಿಯ ಪಿ.ಎಚ್‌. ಪೂಜಾರ್, ಡಾ.ತಳವಾರ ಸಾಬಣ್ಣ, ಹಣಮಂತ ನಿರಾಣಿ ವಿರೋಧ ವ್ಯಕ್ತಪಡಿಸಿದರು.

ಪ್ರಶ್ನೋತ್ತರ ವೇಳೆ ಬಿಜೆಪಿಯ ಪಿ.ಎಚ್‌.ಪೂಜಾರ್‌, ಡಾ.ತಳವಾರ ಸಾಬಣ್ಣ ಹಾಗೂ ಹಣಮಂತ ನಿರಾಣಿ ಅವರು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಬಾಗಲಕೋಟೆ ತೋಟಗಾರಿಕೆ ವಿವಿ ವ್ಯಾಪ್ತಿಯಲ್ಲಿರುವ ಕಾಲೇಜು, ವಿಸ್ತರಣಾ ಘಟಕ ಮುಂತಾದ ಸಂಸ್ಥೆಗಳನ್ನು ಹಾಗೆಯೇ ಉಳಿಸಿಕೊಳ್ಳಬೇಕು, ಮಂಡ್ಯಕ್ಕೆ ಪ್ರತ್ಯೇಕ ಕೃಷಿ ಮತ್ತು ತೋಟಗಾರಿಕೆ ವಿವಿ ಸ್ಥಾಪನೆಗೆ ತಮ್ಮ ತಕರಾರು ಇಲ್ಲ ಎಂದರು.

ಬಾಗಲಕೋಟೆ ತೋಟಗಾರಿಕೆ ವಿವಿಯಲ್ಲಿ ಸಾಕಷ್ಟು ಹುದ್ದೆಗಳು ಖಾಲಿ ಇವೆ, ಅವುಗಳನ್ನು ತುಂಬುವ ಕೆಲಸವನ್ನು ಸರ್ಕಾರ ಮಾಡಬೇಕು. ವಿವಿ ಇನ್ನಷ್ಟು ಉತ್ತಮವಾಗಿ ಕಾರ್ಯನಿರ್ವಹಿಸಲು ನೆರವು, ಸೌಲಭ್ಯ ಕೊಡಬೇಕು. ಅದನ್ನು ಬಿಟ್ಟು ಹೊಸ ವಿವಿ ಸ್ಥಾಪನೆ ಮಾಡುವುದು ಸರಿಯಲ್ಲ ಎಂದರು.

ಪಿ.ಎಚ್‌.ಪೂಜಾರ್‌ ಮಾತನಾಡಿ. ಬಾಗಲಕೋಟೆ ತೋಟಗಾರಿಕೆ ವಿವಿ ದೇಶದಲ್ಲೇ ಶೈಕ್ಷಣಿಕ, ಸಂಶೋಧನಾ ಮತ್ತು ವಿಸ್ತರಣಾ ಚಟುವಟಿಕೆಗಳಲ್ಲಿ ಉತ್ತಮ ಸಾಧನೆ ಮಾಡುತ್ತಾ ಬಂದಿದೆ. ಕಳೆದ ಏಳು ವರ್ಷಗಳಿಂದ ಐಸಿಎಆರ್‌ ನಡೆಸುವ ಕಿರಿಯ ಸಂಶೋಧನಾ ಫೆಲೋಶಿಪ್‌ ಪರೀಕ್ಷೆಯಲ್ಲಿ ಅತಿ ಹೆಚ್ಚು ಸ್ಥಾನ ಗಳಿಸುತ್ತಿದೆ. 46 ವಿವಿಧ ತೋಟಗಾರಿಕೆ ಬೆಳೆಗಳ ತಳಿಗಳನ್ನು ಅಭಿವೃದ್ಧಿ ಪಡಿಸಿದೆ, 300 ಆಧುನಿಕ ತಾಂತ್ರಿಕತೆ ಅಭಿವೃದ್ಧಿಗೊಳಿಸಿದೆ. ಹೀಗಿರುವಾಗ ವಿವಿಯನ್ನು ವಿಭಜಿಸುವುದು ಆ ಭಾಗದ ರೈತರಿಗೆ ಅನ್ಯಾಯ ಮಾಡಿದಂತೆ, ವಿವಿಗೆ ಸರ್ಕಾರ ಪೆಟ್ಟು ನೀಡಿದೆ ಎಂದರು.

ಈ ಮಾತಿಗೆ ಸಭಾಪತಿ ಬಸವರಾಜ ಹೊರಟ್ಟಿ ಅವರು ಸಹ ವಿವಿ ವಿಭಜನೆಗೆ ತಮ್ಮ ವಿರೋಧ ಸಹ ಇದೆ ಎಂದರು.

ಡಾ.ತಳವಾರ ಸಾಬಣ್ಣ ಹಾಗೂ ಹಣಮಂತ ನಿರಾಣಿ ಮಾತನಾಡಿ, ಬಾಗಲಕೋಟೆ ತೋಟಗಾರಿಕೆ ವಿವಿಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು, ಹೆಚ್ಚಿನ ಅನುದಾನ ನೀಡಬೇಕು ಎಂದು ಆಗ್ರಹಿಸಿದರಲ್ಲದೆ, ಇರುವ ವಿವಿಗಳ ಖಾಲಿ ಹುದ್ದೆ ತುಂಬದೇ ಹೊಸ ವಿವಿ ಸ್ಥಾಪನೆ ಸರಿಯಲ್ಲ ಎಂದು ಹೇಳಿದರು.

ವಿವಿ. ಮುಚ್ಚುತ್ತಿಲ್ಲ: ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದ ತೋಟಗಾರಿಕೆ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ್‌, ಮಂಡ್ಯ ಭಾಗದ ಶಾಸಕರು ತಮ್ಮ ಭಾಗದಲ್ಲಿ ತೋಟಗಾರಿಕೆ ವಿವಿ ಸ್ಥಾಪಿಸಬೇಕೆಂದು ಬೇಡಿಕೆ ಮಂಡಿಸಿದ್ದರು. ಹಾಗಾಗಿ ಹೊಸ ವಿವಿ ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ. ಬಾಗಲಕೋಟೆ ತೋಟಗಾರಿಕೆ ವಿವಿ ಮುಚ್ಚುವ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದರು.

ಇದೇ ವಿಷಯವಾಗಿ ಮಾತನಾಡಲು ಅವಕಾಶ ನೀಡಬೇಕೆಂದು ಅನೇಕ ಸದಸ್ಯರು ಮಾಡಿದ ಮನವಿಗೆ ಸ್ಪಂದಿಸಿದ ಸಭಾಪತಿ ಹೊರಟ್ಟಿ ಅವರು ಈ ಬಗ್ಗೆ ಅರ್ಧ ಗಂಟೆ ಚರ್ಚೆಗೆ ಅವಕಾಶ ನೀಡುವುದಾಗಿ ತಿಳಿಸಿದರು.