ಶಿವಪುರ ಕೆರೆಯ ನೀರನ್ನು ಹೊರ ಹಾಕುವ ಪ್ರಕ್ರಿಯೆಗೆ ವಿರೋಧ: ಸ್ಥಗಿತ

| Published : Apr 22 2025, 01:51 AM IST

ಶಿವಪುರ ಕೆರೆಯ ನೀರನ್ನು ಹೊರ ಹಾಕುವ ಪ್ರಕ್ರಿಯೆಗೆ ವಿರೋಧ: ಸ್ಥಗಿತ
Share this Article
  • FB
  • TW
  • Linkdin
  • Email

ಸಾರಾಂಶ

ಸಂಡೂರು ಪಟ್ಟಣದ ಶಿವಪುರ ಕೆರೆಯ ಮಧ್ಯದಲ್ಲಿನ ದಿಬ್ಬದ ಮೇಲೆ ಶ್ರೀ ಕುಮಾರಸ್ವಾಮಿಯ ಆಯುಧ (ದಂಡ)ವನ್ನು ಪ್ರತಿಷ್ಠಾಪಿಸಲು ಅನುಕೂಲವಾಗುವಂತೆ ಕೆರೆಯ ನೀರನ್ನು ಹೊರಹಾಕುವ ಪ್ರಕ್ರಿಯೆಗೆ ಬಿಜೆಪಿ ಮುಖಂಡರು ವಿರೋಧ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಪ್ರಕ್ರಿಯೆ ಸ್ಥಗಿತಗೊಳಿಸಲಾಯಿತು.

ಸಂಡೂರು: ಪಟ್ಟಣದ ಅಂತರ್ಜಲದ ಪ್ರಮುಖ ಮೂಲವಾಗಿರುವ ಶಿವಪುರ ಕೆರೆಯ ಮಧ್ಯದಲ್ಲಿನ ದಿಬ್ಬದ ಮೇಲೆ ಶ್ರೀ ಕುಮಾರಸ್ವಾಮಿಯ ಆಯುಧ (ದಂಡ)ವನ್ನು ಪ್ರತಿಷ್ಠಾಪಿಸಲು ಅನುಕೂಲವಾಗುವಂತೆ ಕೆರೆಯ ನೀರನ್ನು ಹೊರಹಾಕುವ ಪ್ರಕ್ರಿಯೆಯನ್ನು ವಿರೋಧದ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಯಿತು.

ಕೆರೆಗೆ ಮೋಟರ್ ಮತ್ತು ಪೈಪ್‌ ಅಳವಡಿಸಲಾಗಿತ್ತು. ಸೋಮವಾರ ಬಿಜೆಪಿ ಮುಖಂಡರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕೆರೆಯ ನೀರನ್ನು ಹೊರ ಹಾಕುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿದೆ. ಸ್ಥಳದಲ್ಲಿ ಕಾಮಗಾರಿ ನಡೆಸುತ್ತಿರುವ ನಿರ್ಮಿತಿ ಕೇಂದ್ರದ ಅಧಿಕಾರಿಗಳ್ಯಾರೂ ಉಪಸ್ಥಿತರಿರಲಿಲ್ಲ. ಬಿಜೆಪಿ ಮುಖಂಡರು ನಿರ್ಮಿಸಿ ಕೇಂದ್ರದ ಎಂಜಿನಿಯರ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಕೆರೆಯಿಂದ ಹೊರ ಹಾಕುವ ಕಾರ್ಯವನ್ನು ಸ್ಥಗಿತಗೊಳಿಸುವಂತೆ ಒತ್ತಾಯಿಸಿದರು.

ದಂಡ ಪ್ರತಿಷ್ಠಾಪನೆಗೆ ವಿರೋಧವಿಲ್ಲ: ಬಿಜೆಪಿ ಎಸ್‌ಟಿ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಬಂಗಾರು ಹನುಮಂತ ಮಾತನಾಡಿ, ಕೆರೆಯ ಮಧ್ಯದಲ್ಲಿ ಶ್ರೀ ಕುಮಾರಸ್ವಾಮಿ ದಂಡ ಪ್ರತಿಷ್ಠಾಪನೆಗೆ ನಮ್ಮ ವಿರೋಧವಿಲ್ಲ. ಕೆರೆಯ ನೀರನ್ನು ಖಾಲಿ ಮಾಡುವುದಕ್ಕೆ ನಮ್ಮ ವಿರೋಧವಿದೆ. ಸಂಡೂರಿನಲ್ಲಿ ಮೊದಲೇ ನೀರಿನ ತೊಂದರೆ ಇದೆ. ೧೦-೧೫ ದಿನಗಳಿಗೊಮ್ಮೆ ನೀರು ಪೂರೈಸಲಾಗುತ್ತಿದೆ. ಈ ಕೆರೆಯಲ್ಲಿ ನೀರಿದ್ದರೆ, ಸಂಡೂರಿನಲ್ಲಿ ಅಂತರ್ಜಲ ಹೆಚ್ಚಿ ಕೊಳವೆಬಾವಿಗಳಿಗೆ ನೀರು ದೊರೆಯುತ್ತದೆ. ಕೆರೆಯಲ್ಲಿ ನೀರಿದ್ದರೆ ದನ-ಕರುಗಳಿಗೆ, ಪ್ರಾಣಿ-ಪಕ್ಷಿಗಳಿಗೂ ಅನುಕೂಲವಾಗುತ್ತದೆ. ಕೆರೆಯಲ್ಲಿ ನೀರು ಇಲ್ಲದಿದ್ದಾಗ, ದಂಡ ಪ್ರತಿಷ್ಠಾಪನೆಯ ಕಾಮಗಾರಿ ಮಾಡಿಕೊಳ್ಳುವುದು ಒಳಿತು ಎಂದು ಹೇಳಿದರು.

ಈಗಿರುವ ಕೆರೆಯ ನೀರನ್ನು ಹೊರಹಾಕಿದರೆ, ಜನತೆಗೆ ಹಾಗೂ ಪ್ರಾಣಿ, ಪಕ್ಷಿಗಳಿಗೂ ತೊಂದರೆಯಾಗಲಿದೆ. ಆದ್ದರಿಂದ ಕೆರೆಯ ನೀರು ಖಾಲಿ ಮಾಡುವ ಪ್ರಕ್ರಿಯೆ ಸ್ಥಗಿತಗೊಳಿಸಬೇಕು. ಸಂಡೂರಿನವರೆ ಸಚಿವರು ಹಾಗೂ ಸಂಸದರಿದ್ದಾರೆ. ಆದಾಗ್ಯೂ ಸಂಡೂರಿನವರಿಗೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಸಲಾಗುತ್ತಿಲ್ಲ. ಸಂಡೂರಿನಲ್ಲಿ ಮೂಲ ಸೌಕರ್ಯಗಳ ಕೊರತೆ ಇದೆ. ಪಟ್ಟಣದ ಜನತೆಗೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಸಲು ಕ್ರಮಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಿ.ಟಿ. ಪಂಪಾಪತಿ ಮಾತನಾಡಿ, ಸಂಡೂರು, ಕೃಷ್ಣಾನಗರ ಹಾಗೂ ದೌಲತ್‌ಪುರದಲ್ಲಿ ಅಂತರ್ಜಲ ಹೆಚ್ಚಳಕ್ಕಾಗಿ ಯಶವಂತರಾವ್ ಘೋರ್ಪಡೆ ಅವರು ೧೯೬೨ರಲ್ಲಿ ಕೆರೆ ನಿರ್ಮಾಣ ಮಾಡಿದರು. ಕೆರೆಯಲ್ಲಿ ನೀರು ಇದ್ದರೆ, ಪಟ್ಟಣದಲ್ಲಿ ಅಂತರ್ಜಲ ಹೆಚ್ಚುತ್ತದೆ. ಇದರಿಂದ ಕೃಷಿಗೂ, ಜನತೆಗೆ ಹಾಗೂ ಪ್ರಾಣಿ ಪಕ್ಷಿಗಳಿಗೂ ಅನುಕೂಲವಾಗುತ್ತದೆ. ಆದರೆ, ಕೆರೆಯಲ್ಲಿ ನೀರಿರುವಾಗ, ನೀರನ್ನು ಖಾಲಿ ಮಾಡಿ ಕೆರೆಯ ಮಧ್ಯದಲ್ಲಿ ಶ್ರೀ ಕುಮಾರಸ್ವಾಮಿದ ದಂಡವನ್ನು ಪ್ರತಿಷ್ಠಾಪಿಸುವ ಕಾಮಗಾರಿ ಕೈಗೊಳ್ಳುವುದು ಸರಿಯಾದ ಕ್ರಮವಲ್ಲ. ನೀರಿಲ್ಲದಿದ್ದಾಗ ಈ ಕಾಮಗಾರಿ ಕೈಗೊಳ್ಳಬಹುದಾಗಿದೆ. ಅಧಿಕಾರಿಗಳು ಯಾವುದೇ ಕಾರಣಕ್ಕೂ ಕೆರೆಯಲ್ಲಿನ ನೀರು ಖಾಲಿ ಮಾಡುವ ಕ್ರಮಕ್ಕೆ ಮುಂದಾಗಬಾರದು ಎಂದು ಆಗ್ರಹಿಸಿದರು.

ಬಿಜೆಪಿ ಮುಖಂಡ ಎಫ್. ಕುಮಾರನಾಯ್ಕ ಮಾತನಾಡಿ, ಕೆರೆಯಲ್ಲಿ ಮೀನು ಸಾಕಾಣಿಕೆ ಮಾಡುವ ಗುತ್ತಿಗೆಯನ್ನು ಹರಾಜಿನಲ್ಲಿ ₹೧.೪೫ ಲಕ್ಷಕ್ಕೆ ಪಡೆದುಕೊಂಡಿದ್ದೇನೆ. ಜನವರಿಯಲ್ಲಿ ಒಂದು ಲಕ್ಷ ಮೀನಿನ ಮರಿಗಳನ್ನು ಕೆರೆಯಲ್ಲಿ ಬಿಡಲಾಗಿದೆ. ಈಗ ಕೆರೆಯಲ್ಲಿನ ನೀರನ್ನು ಖಾಲಿ ಮಾಡಿದರೆ, ನಮಗೆ ನಷ್ಟವಾಗಲಿದೆ. ಅಧಿಕಾರಿಗಳು ನಷ್ಟವನ್ನು ತುಂಬಿಕೊಡಬೇಕಾಗುತ್ತದೆ. ಆದ್ದರಿಂದ ಕೆರೆಯ ನೀರನ್ನು ಖಾಲಿ ಮಾಡುವ ಪ್ರಕ್ರಿಯೆಯನ್ನು ಕೈಬಿಡಬೇಕೆಂದು ಒತ್ತಾಯಿಸಿದರು.

ವಿರೋಧದ ಹಿನ್ನೆಲೆಯಲ್ಲಿ ಶಿವಪುರ ಕೆರೆಯ ನೀರು ಹೊರಹಾಕುವ ಪ್ರಕ್ರಿಯೆಯನ್ನು ಸೋಮವಾರ ಸ್ಥಗಿತಗೊಳಿಸಲಾಗಿದೆ.

ಬಿಜೆಪಿ ಸಂಡೂರು ಮಂಡಲದ ಅಧ್ಯಕ್ಷ ನಾನಾಸಾಹೇಬ್ ನಿಕ್ಕಂ, ಮುಖಂಡರಾದ ಉಡೇದ ಸುರೇಶ, ಆರ್.ಟಿ. ರಘುನಾಥ, ವಸಂತಕುಮಾರ್, ನರಸಿಂಹ, ರಮೇಶ್, ಕೆ. ಹರೀಶ್, ಪುರುಷೋತ್ತಮ್, ಗೆಣತಿಕಟ್ಟೆ ಮುದ್ದಪ್ಪ, ಮಂಜುಳಾ, ತಾಯಪ್ಪ, ಸತ್ಯನಾರಾಯಣ ಉಪಸ್ಥಿತರಿದ್ದರು.