ಹಮ್ ದೋ ಹಮಾರೆ ಬಾರಾ ಸಿನಿಮಾ ಬಿಡುಗಡೆಗೆ ವಿರೋಧ

| Published : Jun 02 2024, 01:47 AM IST

ಸಾರಾಂಶ

ವಿವಾದಾತ್ಮಕ ಅಂಶ ಹೊಂದಿರುವ ಹಮ್ ದೋ ಹಮಾರೆ ಬಾರಾ ಸಿನಿಮಾ ಜೂನ್‌ 7ಕ್ಕೆ ದೇಶಾದ್ಯಂತ ಬಿಡುಗಡೆಯಾಗಲಿದೆ.

ಹೊಸಪೇಟೆ: ವಿವಾದಾತ್ಮಕ ಅಂಶ ಹೊಂದಿರುವ ಹಮ್ ದೋ ಹಮಾರೆ ಬಾರಾ ಸಿನಿಮಾ ಜೂನ್‌ 7ಕ್ಕೆ ದೇಶಾದ್ಯಂತ ಬಿಡುಗಡೆಯಾಗಲಿದೆ. ಈ ಸಿನಿಮಾ ಬಿಡಗಡೆಯಾಗದಂತೆ ತಡೆಯಬೇಕು ಎಂದು ನಗರದ ಅಂಜುಮನ್ ಖಿದ್ಮತೆ ಇಸ್ಲಾಂ ಕಮಿಟಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಅಂಜುಮನ್ ಖಿದ್ಮತೆ ಇಸ್ಲಾಮ್ ಕಮಿಟಿ ಅಧ್ಯಕ್ಷ ಎಚ್.ಎನ್. ಮೊಹಮ್ಮದ್ ಇಮಾಮ್ ನಿಯಾಜಿ ಮಾತನಾಡಿ, ಹಮ್ ದೋ ಹಮಾರೆ ಬಾರಾ ಎಂಬ ಸಿನಿಮಾ ಟ್ರೇಲರ್‌ನಲ್ಲಿ ಮುಸ್ಲಿಮರ ಪವಿತ್ರ ಗ್ರಂಥ ಕುರ್‌ಆನ್‌ನಲ್ಲಿರುವ “ಸೂರೆ-ಎ-ಬಕರ” ಸಾಲಿನಲ್ಲಿರುವ ಉಪದೇಶ ಮತ್ತು ಸಂದೇಶಗಳನ್ನು ಚಿತ್ರದ ನಿರ್ಮಾಪಕ, ನಿರ್ದೇಶಕರು ಅವಹೇಳನಕಾರಿಯಾಗಿ ಚಿತ್ರಿಸಿದ್ದಾರೆ. ಈ ಸಿನಿಮಾದ ಕೆಲ ದೃಶ್ಯ ಮತ್ತು ಅಂಶಗಳು ಸಮಾಜದಲ್ಲಿ ಗೊಂದಲ ಉಂಟು ಮಾಡಲಿವೆ. ಈ ದೃಶ್ಯಗಳು ಮುಸ್ಲಿಮರನ್ನು ಕೆಣುಕುವಂತಿವೆ. ಈ ಸಿನಿಮಾದಲ್ಲಿ ಕುರ್‌ಆನ್ ಸೂಕ್ತಿಯ ಸಾಲುಗಳನ್ನು ತಪ್ಪಾಗಿ ಅರ್ಥೈಸಿದ್ದಾರೆ. ಒಂದೊಮ್ಮೆ ಈ ಸಿನಿಮಾ ಬಿಡುಗಡೆಯಾದಲ್ಲಿ ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆ ಇದೆ. ಯಾವುದೇ ಕಾರಣಕ್ಕೂ ಈ ವಿವಾದಾತ್ಮಕ ಸಿನಿಮಾ ಬಿಡುಗಡೆ ಆಗದಂತೆ ತಡೆದು, ಚಿತ್ರದ ನಿರ್ಮಾಪಕ, ನಿರ್ದೇಶಕರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ಆಫೀಜ್‌ ಅಬ್ದುಲ್ ಸಮದ್, ಎಂ.ಫಿರೋಜ್ ಖಾನ್, ಎಂ.ಡಿ. ಅಬೂಬಕ್ಕರ್, ಜಿ.ಅನ್ಸರ್ ಬಾಷಾ, ಡಾ.ಎಂ.ಡಿ. ದುರ್ವೇಶ್ ಮೈನುದ್ದೀನ್, ಕೊತ್ವಾಲ್ ಮೊಹಮ್ಮದ್ ಮೋಸಿನ್, ಸದ್ದಾಂ ಹುಸೇನ್, ಎಲ್.ಗುಲಾಂ ಹಾಗೂ ಸಮಾಜದ ಮುಖಂಡರು ಇದ್ದರು.