ಸಕಾರಣವಿಲ್ಲದೇ ಅಧಿವೇಶನಕ್ಕೆ ವಿರೋಧ: ಜೋಶಿ

| Published : Aug 29 2025, 01:00 AM IST

ಸಕಾರಣವಿಲ್ಲದೇ ಅಧಿವೇಶನಕ್ಕೆ ವಿರೋಧ: ಜೋಶಿ
Share this Article
  • FB
  • TW
  • Linkdin
  • Email

ಸಾರಾಂಶ

ಆದಾಯ ತೆರಿಗೆ ಬಿಲ್ ಹಲವಾರು ವರ್ಷದಿಂದ ನನೆಗುದಿಗೆ ಬಿದ್ದಿದೆ. ಅನೇಕ ಬಿಲ್‌ಗಳನ್ನು ಪಾಸ್ ಮಾಡಲಾಯಿತು. ಜನಾದೇಶ ಸ್ವೀಕಾರ ಮಾಡದೇ ಸುಳ್ಳು ಹೇಳಿ, ಕಾಲಹರಣ ಮಾಡಲಾಗಿದೆ. ಕಾಂಗ್ರೆಸ್ ನಾಯಕರಿಗೆ ಪ್ರಜಾಪ್ರಭುತ್ವದಲ್ಲಿ ವಿಶ್ವಾಸವಿಲ್ಲ. ಆಪರೇಷನ್ ಸಿಂದೂರ ಬಗ್ಗೆ ಚರ್ಚೆ ಮಾಡಲು ಆಗ್ರಹಿಸಿದರೂ ಅದರ ಬಗ್ಗೆ ಚರ್ಚೆ ಮಾಡಲಿಲ್ಲ.

ಹುಬ್ಬಳ್ಳಿ: ಕಾಂಗ್ರೆಸ್‌ ಹಾಗೂ ಅದರ ಮಿತ್ರ ಪಕ್ಷಗಳು ಯಾವುದೇ ಸಕಾರಣ ಇಲ್ಲದೇ ಅಧಿವೇಶನವನ್ನು ಎರಡ್ಮೂರು ದಿನ ನಡೆಯಲು ಬಿಡಲಿಲ್ಲ. ಅತ್ಯಂತ ಮಹತ್ವದ ಬಿಲ್‌ಗಳಿದ್ದವು. ಅವುಗಳಿಗೆಲ್ಲ ವಿರೋಧ ವ್ಯಕ್ತಪಡಿಸಿದವು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗೋವಾ ಶೆಡ್ಯುಲ್ಡ್ ಟ್ರೈಬ್, ನ್ಯಾಷನಲ್ ಸ್ಪೋರ್ಟ್ಸ್, ಆ್ಯಂಟಿಡೂಪಿಂಗ್ ಇತ್ತು. ನ್ಯಾಷನಲ್ ಸ್ಪೋರ್ಟ್ಸ್ ಬಿಲ್, 2030ರ ಕಾಮನ್ವೆಲ್ತ್ ಹಾಗೂ ಒಲಿಂಪಿಕ್ಸ್‌ನ್ನು ಭಾರತ ಆಯೋಜನೆ ಮಾಡುವ ಗುರಿ ಇತ್ತು. ಸಾರ್ವಜನಿಕ ಚರ್ಚೆಗೆ ಅವಕಾಶ ನೀಡಲಾಗಿತ್ತು. ಆ ಬಿಲ್‌ಗೂ ಕಾಂಗ್ರೆಸ್ ವಿರೋಧ ಮಾಡಿದೆ ಎಂದರು.

ಆದಾಯ ತೆರಿಗೆ ಬಿಲ್ ಹಲವಾರು ವರ್ಷದಿಂದ ನನೆಗುದಿಗೆ ಬಿದ್ದಿದೆ. ಅನೇಕ ಬಿಲ್‌ಗಳನ್ನು ಪಾಸ್ ಮಾಡಲಾಯಿತು. ಜನಾದೇಶ ಸ್ವೀಕಾರ ಮಾಡದೇ ಸುಳ್ಳು ಹೇಳಿ, ಕಾಲಹರಣ ಮಾಡಲಾಗಿದೆ. ಕಾಂಗ್ರೆಸ್ ನಾಯಕರಿಗೆ ಪ್ರಜಾಪ್ರಭುತ್ವದಲ್ಲಿ ವಿಶ್ವಾಸವಿಲ್ಲ. ಆಪರೇಷನ್ ಸಿಂದೂರ ಬಗ್ಗೆ ಚರ್ಚೆ ಮಾಡಲು ಆಗ್ರಹಿಸಿದರೂ ಅದರ ಬಗ್ಗೆ ಚರ್ಚೆ ಮಾಡಲಿಲ್ಲ. ಪಹಲ್ಗಾಮ್ ಚರ್ಚೆ ಮಾಡಲಿಲ್ಲ. ಅವರ ಟ್ರ್ಯಾಕ್ ರೆಕಾರ್ಡ್‌ ಭೀಕರವಾಗಿದೆ ಅಂಥ ಅರ್ಥವಾಗಿದೆ. ಕಾಂಗ್ರೆಸ್ ಅಧಿಕಾರದಲ್ಲಿ ಭಯೋತ್ಪಾದಕ ಸಂಘಟನೆ ಬೆಂಬಲಿಸುವ ದೇಶಗಳ ಬಗ್ಗೆ ಹಾಗೂ ಘಟನೆ ನಡೆದ ಬಳಿಕ ನಡೆದುಕೊಂಡ ರೀತಿ ಕೆಟ್ಟದಾಗಿದೆ. ಅಧಿವೇಶನದಲ್ಲಿ 13 ಬಿಲ್ ಪಾಸ್ ಆಗಿದ್ದು, ಎರಡನ್ನು ಆಯ್ಕೆ ಕಮಿಟಿಗೆ ಕಳುಹಿಸಲಾಗಿದೆ ಎಂದರು.

ಈ ಬಾರಿ ಸಂಸತ್ತಿನ ಅಧಿವೇಶನದಲ್ಲಿ ಕಾಂಗ್ರೆಸ್ ಬಂಡವಾಳ ಕಳಚಿದೆ. ಅದರ ಸಿಟ್ಟಿಗೆ ಇಲ್ಲಸಲ್ಲದ ವಿಚಾರ ಚರ್ಚೆಗೆ ಅವಕಾಶ ಕೇಳಿದರು. ಮತದಾನದ ಗುರುತಿನ ಚೀಟಿಯಲ್ಲಿ ಸಣ್ಣ ಪುಟ್ಟ ಪ್ರಿಂಟಿಂಗ್ ಸಮಸ್ಯೆ ಆಗಿರುತ್ತದೆ. ದೇಶದ ಸಂಸತ್ತನ್ನು ಒತ್ತೆಯಾಳಾಗಿಡುವ ಪ್ರಯತ್ನವನ್ನು ಕಾಂಗ್ರೆಸ್ ಮಾಡುತ್ತಿದೆ. ಇಂತಹ ನಿರ್ಲಜ್ಜ ಪಕ್ಷದವರು ಅಧಿಕಾರಕ್ಕೆ ಬರುತ್ತಾರೆ ಎಂದು ಸಂವಿಧಾನದ ಬರೆದವರಿಗೆ ಐಡಿಯಾ ಇರಲಿಲ್ಲ. ಸಂಸತ್ತನ್ನು ದುರುಪಯೋಗ ಮಾಡಿಕೊಂಡು, ಕಾಂಗ್ರೆಸ್ ಹತಾಶೆಯಿಂದ ವರ್ತನೆ ಮಾಡುತ್ತಿದೆ. ಇದೇ ರೀತಿ ಮುಂದುವರಿದರೆ ದೇಶದಲ್ಲಿ ನೀವು ಜೀರೋ ಆಗುತ್ತೀರಿ ಎಂದು ಹೇಳಿದರು.

ನಮ್ಮ ಧಾರ್ಮಿಕ ಆಚರಣೆಗಳನ್ನು ಒಪ್ಪಿಕೊಂಡು ಭಾನು ಮುಷ್ತಾಕ್‌ ಅವರು ದಸರಾ ಉದ್ಘಾಟನೆ ಮಾಡಿದರೆ ನಮ್ಮ ಅಭ್ಯಂತರವಿಲ್ಲ. ಆದರೆ, ಅವರು ಈ ಹಿಂದೆ ಭುವನೇಶ್ವರಿ ದೇವಿ (ಕನ್ನಡಾಂಬೆ) ಕುರಿತು ಮಾಡಿದ ಭಾಷಣದಿಂದ ಈಗ ವಿರೋಧ ವ್ಯಕ್ತವಾಗುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಸಂಸ್ಕೃತಿ ವಿಶಾಲವಾಗಿದೆ. ಹಲವಾರು ಧಾರ್ಮಿಕ ಆಚರಣೆಗಳು ನಡೆಯುತ್ತವೆ. ಅವರು ಅವುಗಳನ್ನು ಒಪ್ಪಿಕೊಂಡು ಮಾಡಿದರೆ ನಮ್ಮ ಅಭ್ಯಂತರವಿಲ್ಲ. ರಾಜ್ಯದ 7 ಕೋಟಿ ಜನ ಕನ್ನಡಾಂಬೆಯನ್ನು ಒಪ್ಪಿದ್ದಾರೆ. ಅದನ್ನು ಅವರು ಒಪ್ಪಲಿಕ್ಕೆ ತಯಾರಿಲ್ಲ ಅಂತ ಭಾಷಣ ಮಾಡಿದ್ದರಿಂದ ಗೊಂದಲ ನಡೆದಿದೆ. ಅವರು ಬಂದಿದ್ದಾರೆ ಎಂಬ ಕಾರಣಕ್ಕೆ ಧಾರ್ಮಿಕ ಪರಂಪರೆಯನ್ನು ಬಿಡುತ್ತೀರಿ ಅಂದರೆ ತಪ್ಪಾಗುತ್ತದೆ ಎಂದರು. ನಮ್ಮ ಸಂಸ್ಕೃತಿ, ಧಾರ್ಮಿಕ ಆಚರಣೆಗಳನ್ನು ಒಪ್ಪಿಕೊಂಡು ಉದ್ಘಾಟನೆ ಮಾಡಿದರೆ ನಮ್ಮದೇನೂ ಅಭ್ಯಂತರವಿಲ್ಲ ಎಂದರು.