ಟೋಲ್‌ಗೇಟ್‌ಗೆ ವಿರೋಧ: ಇಂದು ಶಿಕಾರಪುರ ಬಂದ್

| Published : Oct 09 2025, 02:00 AM IST

ಟೋಲ್‌ಗೇಟ್‌ಗೆ ವಿರೋಧ: ಇಂದು ಶಿಕಾರಪುರ ಬಂದ್
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ಹಲವಾರು ತಿಂಗಳುಗಳಿಂದ ಟೋಲ್‌ಗೇಟ್‌ ತೆರವುಗೊಳಿಸಬೇಕು ಎಂದು ಹೋರಾಟ ನಡೆಸಿದರೂ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದ ಕಾರಣ ಶಿಕಾರಿಪುರ ತಾಲೂಕು ಟೋಲ್‌ಗೇಟ್‌ ಹೋರಾಟ ಸಮಿತಿ ೯-೧೦-೨೦೨೫ ರಂದು ಬಂದ್‌ಗೆ ಕರೆ ನೀಡಿದ್ದು, ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಲು ಸಿದ್ದತೆ ನಡೆಸಿದೆ.

ಕನ್ನಡಪ್ರಭ ವಾರ್ತೆ ಶಿರಾಳಕೊಪ್ಪ

ಕಳೆದ ಹಲವಾರು ತಿಂಗಳುಗಳಿಂದ ಟೋಲ್‌ಗೇಟ್‌ ತೆರವುಗೊಳಿಸಬೇಕು ಎಂದು ಹೋರಾಟ ನಡೆಸಿದರೂ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದ ಕಾರಣ ಶಿಕಾರಿಪುರ ತಾಲೂಕು ಟೋಲ್‌ಗೇಟ್‌ ಹೋರಾಟ ಸಮಿತಿ ೯-೧೦-೨೦೨೫ ರಂದು ಬಂದ್‌ಗೆ ಕರೆ ನೀಡಿದ್ದು, ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಲು ಸಿದ್ದತೆ ನಡೆಸಿದೆ.

ಶಿರಾಳಕೊಪ್ಪ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸಂಜೆ ನಡೆದ ಪ್ರಮುಖರ ಸಭೆಯಲ್ಲಿ ಮಾತನಾಡಿದ ಟೋಲ್ ಗೇಟ್ ಸಮಿತಿ ಅದ್ಯಕ್ಷ ಶಿವರಾಜ್ ಪಾಟೀಲ್‌ ಮಾತನಾಡಿ, ಈ ಬಾರಿ ನಾವು ಕೈಗೊಂಡಿರುವ ಬಂದ್ ಯಾವುದೇ ರಾಜಕೀಯ ಪ್ರೇರಣೆ ಇಲ್ಲದೇ ಸ್ವಯಂ ಪ್ರೇರಿತವಾಗಿ ನಡೆಸಲಾಗುತ್ತಿದೆ.

ನಮ್ಮ ಹೋರಾಟಕ್ಕೆ ತಾಲೂಕಿನ ವಿವಿದ ಸಂಘ ಸಂಸ್ಥೆಗಳು, ವ್ಯಾಪಾರಿಗಳು ವಾಹನಚಾಲಕರು ಹಾಗೂ ನಾಗರೀಕರು ವ್ಯಾಪಕ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದೇರೀತಿ ಶಿರಾಳಕೊಪ್ಪ ವ್ಯಾಪಾರಿಗಳು ಮತ್ತು ನಾಗರೀಕರೂ ಸಹ ಸ್ವಯಂ ಪ್ರೇರಿತವಾಗಿ ಬಂದ್‌ಗೆ ಸಹಕರಿಸುವುದಾಗಿ ಹೇಳಿದ್ದಾರೆ.

ದಿ.೯ ರಂದು ಬೆಳಗ್ಗೆ ಶಿಕಾರಿಪುರದ ಹುಚ್ಚರಾಯಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಪಿಎಲ್‌ಡಿ ಬ್ಯಾಕ್ ವೃತ್ತದ ಮೂಲಕ ಮೆರವಣಿಗೆ ದೊಡ್ಡಕೇರಿ, ಶಿರಾಳಕೊಪ್ಪ ವೃತ್ತದ ಮೂಲಕ ತಹಸೀಲ್ದಾರ್ ಕಚೇರಿಗೆ ಆಗಮಿಸಿ ಪ್ರತಿಭಟನಾ ಸಭೆ ನಡೆಸಲಾಗುವುದು ಎಂದ ಅವರು ಜನತೆ ಶಾಂತಿಯುತವಾಗಿ ಸಹಕರಿಸಬೇಕು ಎಂದು ವಿನಂತಿಸಿದ್ದಾರೆ.

ಜಿಲ್ಲಾ ರೈತ ಸಂಘದ ಕಾರ್ಯಾಧ್ಯಕ್ಷ ಪುಟ್ಟನಗೌಡ ಮಾತನಾಡಿ, ಈ ಹೋರಾಟವು ಸಂಪೂರ್ಣ ಪಕ್ಷಾತೀತವಾಗಿದ್ದು, ಎಲ್ಲಾ ರಾಜಕೀಯ ಪಕ್ಷಗಳ ಪ್ರಮುಖರಿಗೆ ಆಹ್ವಾನ ನೀಡಲಾಗಿದೆ. ಕಾರ್ಯಕ್ರಮದಲ್ಲಿ ಯಾವುದೇ ವ್ಯಕ್ತಿಗಳ ಅಥವಾ ಪಕ್ಷದ ಚಿಹ್ನೆ ಬ್ಯಾನರ್ ಮತ್ತು ಬಾವುಟಗಳನ್ನು ತರಬಾರದು ಎಂದು ಎಚ್ಚರಿಸಿದರು.

ಪಟ್ಟಣ ಪಂಚಾಯ್ತಿ ಮಾಜಿ ಅಧ್ಯಕ್ಷ ಲೋಕೇಶ್ ರಟ್ಟಿಹಳ್ಳಿ ಮಾತನಾಡಿ, ಟೋಲ್ ನಿಂದ ಈ ಭಾಗದ ಜನರಿಗೆ, ರೈತರಿಗೆ ಮತ್ತು ವಾಹನ ಚಾಲಕರಿಗೆ ತುಂಬಾ ತೊಂದರೆ ಆಗಿದೆ. ಸಾವರ್ಜನಿಕರ ಧ್ವನಿಯನ್ನು ಸರ್ಕಾರಕ್ಕೆ ತಲುಪಿಸಲು ಈ ಬಂದ್ ಅತ್ಯವಶ್ಯಕವಾಗಿದೆ, ಈ ಭಾಗದ ಎಲ್ಲ ಸಮುದಾಯದವರು ಈ ಬಂದ್ ಗೆ ಸ್ವಯಂಪ್ರೇರಿತವಾಗಿ ಬೆಂಬಲ ಕೊಡುವಂತೆ ವಿನಂತಿಸಿದರು.

ಸಭೆಯಲ್ಲಿ ಜಿಲ್ಲಾ ರೈತಸಂಘದ ಗೌರವಾಧ್ಯಕ್ಷ ಪ್ಯಾಟಿ ಈರಣ್ಣ, ತಾಲೂಕು ರೈತಸಂಘದ ಅಧ್ಯಕ್ಷ ಮುಗಳಿಕೊಪ್ಪ ರಾಜಣ್ಣ, ಪಟ್ಟಣ ಪಂಚಾಯ್ತಿ ಮಾಜಿ ಅಧ್ಯಕ್ಷ ಚಂದ್ರಶೇಖರ, ಕೆಂಪಣ್ಣ ಸೇರಿದಂತೆ ಅನೇಕರು ಸಭೆಯಲ್ಲಿ ಭಾಗವಹಿಸಿದ್ದರು.