ಟ್ರಯಲ್‌ ಬ್ಲಾಸ್ಟ್‌ಗೆ ವಿರೋಧ: ರೈತರ ಹೋರಾಟಕ್ಕೆ ಸುಮಲತಾ ಬೆಂಬಲ

| Published : Jul 05 2024, 12:54 AM IST

ಸಾರಾಂಶ

ಕೆಆರ್‌ಎಸ್ ಅಣೆಕಟ್ಟು ರಾಜ್ಯದ ಜೀವನಾಡಿಯಂತೆ. ಈ ಡ್ಯಾಂನಿಂದಾಗಿ ಲಕ್ಷಾಂತರ ಜನರಿಗೆ ಕುಡಿಯುವ ನೀರು ಮತ್ತು ನೀರಾವರಿ ಸೌಲಭ್ಯ ದೊರೆಯುತ್ತಿದೆ. ಟ್ರಯಲ್ ಬ್ಲಾಸ್ಟ್‌ನಿಂದ ಡ್ಯಾಂಗೆ ಹಾನಿಯಾಗುವ ಸಾಧ್ಯತೆ ಇದೆ. ಇಲ್ಲಿ ಅನುಮತಿಯನ್ನು ಮೀರಿ ಅಪಾಯದ ಮಟ್ಟದಲ್ಲಿ ಟ್ರಯಲ್ ಬ್ಲಾಸ್ಟ್ ಜಾರಿಯಲ್ಲಿದೆ. ಹಾಗಾಗಿ, ಈ ಯೋಜನೆಯನ್ನು ರದ್ದುಗೊಳಿಸಬೇಕೆಂದು ರೈತರು ಆಗ್ರಹಿಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ರೈತರ ಪ್ರಬಲ ವಿರೋಧದ ನಡುವೆಯೂ ಕೆಆರ್‌ಎಸ್‌ ಅಣೆಕಟ್ಟು ಬಳಿ ಟ್ರಯಲ್‌ ಬ್ಲಾಸ್ಟ್‌ ನಡೆಸಲು ಮುಂದಾಗಿರುವ ಜಿಲ್ಲಾಡಳಿತದ ಕ್ರಮವನ್ನು ಮಂಡ್ಯ ಮಾಜಿ ಸಂಸದೆ ಸುಮಲತಾ ಖಂಡಿಸಿ ರೈತರ ಹೋರಾಟವನ್ನು ಬೆಂಬಲಿಸಿದ್ದಾರೆ.

ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್‌ ಸಮೀಪದ ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್ ನಡೆಸುವುದನ್ನು ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದು, ಈ ಪ್ರತಿಭಟನೆಗೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.ಕೆಆರ್‌ಎಸ್ ಅಣೆಕಟ್ಟು ರಾಜ್ಯದ ಜೀವನಾಡಿಯಂತೆ. ಈ ಡ್ಯಾಂನಿಂದಾಗಿ ಲಕ್ಷಾಂತರ ಜನರಿಗೆ ಕುಡಿಯುವ ನೀರು ಮತ್ತು ನೀರಾವರಿ ಸೌಲಭ್ಯ ದೊರೆಯುತ್ತಿದೆ. ಟ್ರಯಲ್ ಬ್ಲಾಸ್ಟ್‌ನಿಂದ ಡ್ಯಾಂಗೆ ಹಾನಿಯಾಗುವ ಸಾಧ್ಯತೆ ಇದೆ. ಇಲ್ಲಿ ಅನುಮತಿಯನ್ನು ಮೀರಿ ಅಪಾಯದ ಮಟ್ಟದಲ್ಲಿ ಟ್ರಯಲ್ ಬ್ಲಾಸ್ಟ್ ಜಾರಿಯಲ್ಲಿದೆ. ಹಾಗಾಗಿ, ಈ ಯೋಜನೆಯನ್ನು ರದ್ದುಗೊಳಿಸಬೇಕೆಂದು ರೈತರು ಆಗ್ರಹಿಸುತ್ತಿದ್ದಾರೆ. ರೈತರ ಬೇಡಿಕೆಗಳು ಸಮಂಜಸವಾಗಿವೆ. ಸರ್ಕಾರ ಈ ಬಗ್ಗೆ ತಕ್ಷಣ ಗಮನಹರಿಸಿ ಕ್ರಮ ಕೈಗೊಳ್ಳಬೇಕು. ಟ್ರಯಲ್ ಬ್ಲಾಸ್ಟ್‌ನಿಂದ ಉಂಟಾಗಬಹುದಾದ ಅಪಾಯಗಳನ್ನು ಪರಿಗಣಿಸಿ, ಡ್ಯಾಮ್ ರಕ್ಷಣೆಗೆ ಮುಂದಾಗಬೇಕು ಎಂದು ನನ್ನ ಆಗ್ರಹವಾಗಿದೆ ಎಂದು ಹೇಳಿದ್ದಾರೆ.

ಜಿಲ್ಲಾಡಳಿತದ ಪರ ಇದ್ದೇವೆ: ಪುಟ್ಟರಾಜು

ಕನ್ನಡಪ್ರಭ ವಾರ್ತೆ ಮಂಡ್ಯ

ಕೆಆರ್‌ಎಸ್ ಬಳಿ ಟ್ರಯಲ್ ಬ್ಲಾಸ್ಟ್ ನಡೆಸುವ ವಿಚಾರವಾಗಿ ನಾವು ಜಿಲ್ಲಾಡಳಿತದ ಪರವಾಗಿದ್ದೇವೆ. ಕೆಆರ್‌ಎಸ್ ಅಣೆಕಟ್ಟು

ನಮ್ಮೆಲ್ಲರ ಬೆನ್ನೆಲುಬು. ಅದರ ಸುರಕ್ಷತೆಗೆ ಜಿಲ್ಲಾಡಳಿತ ಯಾವ ಕ್ರಮ ಕೈಗೊಂಡರೂ ನಾವು ಅದರ ಜೊತೆ ಇರುವುದಾಗಿ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದರು.

ಟ್ರಯಲ್ ಬ್ಲಾಸ್ಟ್ ವಿಷಯ ಕುರಿತಂತೆ ನಾನು ವಿಶ್ಲೇಷಣೆ ಮಾಡುವುದಿಲ್ಲ. ಕೆಆರ್‌ಎಸ್ ಸುರಕ್ಷತೆಯಷ್ಟೇ ನಮಗೆ ಮುಖ್ಯ.

ಜಿಲ್ಲಾಡಳಿತ ಕಾನೂನು ಬದ್ಧವಾಗಿ ಅಣೆಕಟ್ಟೆಯ ಸುರಕ್ಷತೆಯ ಜವಾಬ್ದಾರಿ ಹೊತ್ತಿದೆ. ಹಾಗಾಗಿ ಜಿಲ್ಲಾಡಳಿತಕ್ಕೆ ಸಂಪೂರ್ಣ ಬೆಂಬಲವಾಗಿ ನಿಂತಿದ್ದು, ಕುಮಾರಸ್ವಾಮಿ ಅವರೂ ಜಿಲ್ಲಾಡಳಿತಕ್ಕೆ ಸಹಕಾರ ಕೊಡುತ್ತಾರೆ ಎಂದು ಸುದ್ದಿಗಾರರಿಗೆ ತಿಳಿಸಿದರು.