ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಎಸ್ಸಿ-ಎಸ್ಟಿ ಕಲ್ಯಾಣಕ್ಕಾಗಿ ಮೀಸಲಾದ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ವರ್ಗಾಯಿಸುವ ಸರ್ಕಾರದ ನಿರ್ಧಾರವನ್ನು ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಕೃಷ್ಣಪ್ಪ ಸ್ಥಾಪಿತ) ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನಾ ಧರಣಿ ನಡೆಸಲಾಯಿತು.

2026-27ರಂದು ರಾಜ್ಯ ಬಜೆಟ್‌ನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಗಳ ಜನಸಂಖ್ಯೆಗೆ ಅನುಗುಣವಾಗಿ ಶೇ. 24.1 ರಷ್ಟು ಅನುದಾನ ಮೀಸಲಿರಿಸಬೇಕು ಹಾಗೂ ಎಸ್‌ಸಿಎಸ್‌ಪಿ/ಟಿಎಸ್‌ಪಿ ಕಾಯ್ದೆಯ ಸೆಕ್ಷನ್ ೭(ಅ) ರದ್ದುಪಡಿಸಬೇಕು ಎಂದು ಒತ್ತಾಯಿಸಲಾಯಿತು.

ಪ್ರತಿಭಟನಾಕಾರರು ಆರೋಪಿಸಿದಂತೆ, ಎಸ್ಸಿ, ಎಸ್ಟಿ ಕಲ್ಯಾಣಕ್ಕಾಗಿ ಮೀಸಲಾದ ಸುಮಾರು 42 ಸಾವಿರ ಕೋಟಿ ರು.ಗಳಲ್ಲಿ 25 ಸಾವಿರ ಕೋಟಿ ರು.ಗಳನ್ನು ಗ್ಯಾರಂಟಿ ಯೋಜನೆಗಳಿಗೆ ವರ್ಗಾಯಿಸುವ ಮೂಲಕ ಸರ್ಕಾರ ಸಾಮಾಜಿಕ ನ್ಯಾಯದ ವಿರುದ್ಧ ನಡೆದುಕೊಂಡಿದೆ ಎಂದು ದೂರಿದರು.

ಕಾಯ್ದೆಯ ಪ್ರಕಾರ ಎಸ್ಸಿ ಸಮುದಾಯಕ್ಕೆ ಶೇ. 17.15 ಮತ್ತು ಎಸ್ಟಿ ಸಮುದಾಯಕ್ಕೆ ಶೇ. 6.95 ಅನುದಾನ ವ್ಯಯಿಸಬೇಕು. ಇದರ ಜೊತೆಗೆ ಅರಣ್ಯಾಧಾರಿತ ಆದಿವಾಸಿ ಕುಟುಂಬಗಳಿಗೆ ವಸತಿ ಸೌಲಭ್ಯ, ಆರ್ಥಿಕ ಸಂಕಷ್ಟದಲ್ಲಿರುವ ಬಡ ಕುಟುಂಬಗಳಿಗೆ ಮಾಸಿಕ 5 ಸಾವಿರ ರು. ನೆರವು, ವೈದ್ಯಕೀಯ ನಿರ್ಲಕ್ಷ್ಯ ಪ್ರಕರಣದಲ್ಲಿ ಕ್ರಮ, ಬಗರ್ ಹುಕುಂ ಸಾಗುವಳಿದಾರರಿಗೆ ಭೂಹಕ್ಕು ಪತ್ರ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.


ಡಾ.ಬಾಬುಜಗಜೀವನ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ಲಿಡ್ಕರ್ ನಿಗಮಕ್ಕೆ 500 ಕೋಟಿ ರು. ಅನುದಾನ ಬಿಡುಗಡೆ ಮಾಡಬೇಕು. ಸಮಾಜ ಕಲ್ಯಾಣ ಇಲಾಖೆ ಅದೀನದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಆರ್ಥಿಕ ಅಭಿವೃದ್ಧಿಗಾಗಿ ಅನುಷ್ಠಾನಗೊಳಿಸುತ್ತಿರುವ ಗಂಗಾ ಕಲ್ಯಾಣ, ಭೂ ಒಡೆತನ, ನೇರಸಾಲ, ಉದ್ಯಮಶೀಲತಾ, ಸ್ವಾವಲಂಬಿ ಸಾರಥಿ ಯೋಜನೆ ಸಾಲ ಸೌಲಭ್ಯ ಯೋಜನೆಗಳ ಘಟಕ ವೆಚ್ಚ ದ್ವಿಗುಣಗೊಳಿಸಿ ಗುರಿ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿದರು.

ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ನಡೆಯುತ್ತಿರುವ ವಸತಿ ಶಾಲೆಗಳನ್ನು ವಸತಿ ಕಾಲೇಜುಗಳನ್ನಾಗಿ ಮೇಲ್ದರ್ಜೆಗೇರಿಸಬೇಕು. ಬೆಲೆ ಏರಿಕೆಗೆ ತಕ್ಕಂತೆ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಮಾಸಿಕ ಭೋಜನ ವೆಚ್ಚ 3000 ರು. ವರೆಗೆ ಹೆಚ್ಚಳ ಮಾಡಬೇಕು.

ಸಮಾಜ ಕಲ್ಯಾಣ ಇಲಾಖೆ ಅದೀನದಲ್ಲಿ ಬರುವ ಶಾಲೆ ಮತ್ತು ವಸತಿ ನಿಲಯಗಳಲ್ಲಿ ಕಳೆದ 5 ವರ್ಷಗಳಿಗೂ ಮೇಲ್ಪಟ್ಟು ನಿರಂತರವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಗುತ್ತಿಗೆ-ಹೊರಗುತ್ತಿಗೆ ನೌಕರರನ್ನು ಕಾಯಂಗೊಳಿಸಬೇಕು. ಚುನಾಯಿತ ಪ್ರತಿನಿಧಿಗಳಿಗೆ ಹೆಚ್ಚಿಸಿದಂತೆ ದೇವದಾಸಿ, ವಿಧವಾ ಮಹಿಳೆಯರು, ವೃದ್ಧರು, ಹಾಗೂ ವಿಕಲಚೇತನರಿಗೆ ನೀಡುತ್ತಿರುವ ಮಾಸಿಕ ವೇತನವನ್ನು 5 ಸಾವಿರ ರು.ಗಳವರೆಗೆ ಹೆಚ್ಚಿಸಬೇಕು ಎಂಬುದು ಸೇರಿದಂತೆ ಸುಮಾರು 17ಕ್ಕೂ ಹೆಚ್ಚು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ದಸಂಸ ರಾಜ್ಯ ಸಂಚಾಲಕ ಎಂ. ಗುರುಮೂರ್ತಿ, ಜಿಲ್ಲಾ ಸಂಚಾಲಕ ಏಳುಕೋಟಿ, ಪ್ರಮುಖರಾದ ಶಿವಬಸಪ್ಪ, ಹರಿಗೆ ರವಿ, ಚಂದ್ರಪ್ಪ ಜೋಗಿ, ಕೃಷ್ಣ ಬೊಮ್ಮನಕಟ್ಟೆ, ಎಂ. ರಮೇಶ್ ಚಿಕ್ಕಮರಡಿ, ನಾಗರಾಜ್ ಕಾಚಗೊಂಡನಹಳ್ಳಿ, ಜಗದೀಶ್ ಚರ್ಚಿಗುಂಡಿ, ಬಸವರಾಜ್ ಹಸ್ವಿ, ನಾಗರಾಜ್, ಯಡವಾಲ ಹನುಮಂತಪ್ಪ, ಮನ್ಸೂರ್ ಲಕ್ಕವಳ್ಳಿ, ಚೇತನ್‌ಕುಮಾರ್ ಹಸೂಡಿ ಮತ್ತಿತರರು ಇದ್ದರು.