ಸಾರಾಂಶ
ತಾಲೂಕಿನ ವಿವಿಧ ರೈತ ಸಂಘಟನೆಗಳು ಕರೆ ನೀಡಿದ್ದ ಹೋರಾಟದ ಪೂರ್ವ ಭಾವಿ ಸಭೆ
ಕನ್ನಡಪ್ರಭ ವಾರ್ತೆ, ಕಡೂರುತಾಲೂಕಿನ ಸಖರಾಯಪಟ್ಟಣ ಸಮೀಪದ ಅಗ್ರಹಾರದ ಚೆಕ್ ಡ್ಯಾಮ್‌ನ ನೀರು ಬಯಲು ಸೀಮೆಯ ನೂರಾರು ಹಳ್ಳಿಗಳ ಜೀವ ಜಲವಾಗಿದ್ದು ಇದನ್ನು ಹುಲಿಕೆರೆ, ನಾಗೇನಹಳ್ಳಿ ಕೆರೆ ತುಂಬಿಸಲು ಬಳಸುವ ಯೋಜನೆಗೆ ಸಾವಿರಾರು ರೈತರ ವಿರೋಧವಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಬಾಸೂರು ಬಿ.ಎಚ್. ರವಿ ಹೇಳಿದರು. ಶುಕ್ರವಾರ ಅಗ್ರಹಾರ ಚೆಕ್ ಡ್ಯಾಮ್ ನೀರಿಗೆ ಕಡೂರು ಪ್ರವಾಸಿ ಮಂದಿರ ಆವರಣದಲ್ಲಿ ತಾಲೂಕಿನ ವಿವಿಧ ರೈತ ಸಂಘಟನೆಗಳು ಕರೆ ನೀಡಿದ್ದ ಹೋರಾಟದ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿ, ವೇದಾನದಿ ಬರಪೀಡಿತ ಕಡೂರು ತಾಲೂಕಿನ ರೈತರ ಜೀವನಾಡಿ. ಈ ನದಿ ನೀರು ಕುಡಿಯಲು ಹಾಗೂ ಕೃಷಿಗೆ ಉಪಯೋಗವಾಗುತ್ತಿರುವ ಜೊತೆ ಅಂತರ್ಜಲ ಹೆಚ್ಚಿಸಲು ಸಹಾಯಕ ವಾಗಿದೆ. ಅಗ್ರಹಾರ ಚೆಕ್‌ಡ್ಯಾಮ್‌ನ ನೀರು ಹರಿದು ವೇದಾನದಿಗೆ ಸೇರಿ ಮುಂದೆ ವಾಣಿ ವಿಲಾಸ ಸಾಗರಕ್ಕೆ ಸೇರುತ್ತದೆ. ಇಂತಹ ಚೆಕ್‌ಡ್ಯಾಮ್‌ನ ನೀರನ್ನು ಇದುವರೆಗೂ ಅಗ್ರಹಾರ, ಬಾಣೂರು, ಶಿವಪುರ, ಗುಬ್ಬೀ ಹಳ್ಳಿ, ಜಿಗಣೇಹಳ್ಳಿ, ಎನ್.ಜಿ.ಕೊಪ್ಪಲು, ಬಂಡಿಕೊಪ್ಪಲು, ಪಟ್ಟಣಗೆರೆ, ಕುಂತಿಹೊಳೆ, ಯಳ್ಳಂಬಳಸೆ ಮೂಲಕ ವಾಣಿವಿಲಾಸ ಸಾಗರ ಸೇರುತ್ತದೆ. ಆದರೆ ರಾಜಕೀಯ ಹುನ್ನಾರ, ನೀರಾವರಿ ಇಲಾಖೆಗಳ ಇಂಜಿನಿಯರ್ ಮತ್ತು ಅಧಿಕಾರಿಗಳ ತಪ್ಪು ಮಾಹಿತಿಯಿಂದ ಹುಲಿಕೆರೆಯ 2 ಕೆರೆಗಳು ಮತ್ತು ನಾಗೇನಹಳ್ಳಿ ಕೆರೆ ತುಂಬಿಸುವ ಯೋಜನೆ ಆರಂಭಿಸಲು ಮುಂದಾಗಿದೆ. ಈ ಯೋಜನೆಯನ್ನು ನೂರಾರು ಹಳ್ಳಿಗಳ ರೈತರು ವಿರೋಧಿಸುತ್ತಿದ್ದು ಕೂಡಲೇ ಯೋಜನೆ ನಿಲ್ಲಿಸಬೇಕೆಂದು ಇಲಾಖೆ ಇಂಜಿನಿಯರ್‌ಗಳಿಗೆ ರೈತರ ಪರವಾಗಿ ಮನವಿ ಮಾಡಿದರು.ಪ್ರಾಣಕೊಟ್ಟಾದರೂ ನಮ್ಮ ನೀರನ್ನು ನಾವು ಪಡೆಯಬೇಕು. ಇದಕ್ಕಾಗಿ ಹೋರಾಟದ ರೂಪ ರೇಷೆ ತಯಾರಿಸಿದ್ದು, ಜು. 27 ರ ಭಾನುವಾರ ದಂದು ಯಗಟೀಪುರದ ಶ್ರೀ ಮಲ್ಲಿಕಾರ್ಜುನಸ್ವಾಮಿ ದೇವಾಲಯದಿಂದ ಅಗ್ರಹಾರದ ತನಕ ಪಾದಯಾತ್ರೆಗೆ ರೈತರು ನಿರ್ಣಯ ಕೈಗೊಂಡಿರುವುದಾಗಿ ರವಿ ಮಾಹಿತಿ ನೀಡಿದರು. ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಯುವ ಘಟಕದ ರಾಜ್ಯಾಧ್ಯಕ್ಷ ಫಯಾಜ್ ಮೈಸೂರು ಮಾತನಾಡಿ, ರೈತರು ಯಾವುದೇ ರಾಜಕೀಯ ಪಕ್ಷಗಳ ಗುಲಾಮರಲ್ಲ, ಪಂಜಾಬ್ ರೈತರಂತೆ ಒಗ್ಗಟ್ಟಿನಿಂದ ಹೋರಾಟ ಮಾಡಿದರೆ ಫಲ ಸಿಗುತ್ತದೆ. ರಾಜ್ಯದ ದೇವನಹಳ್ಳಿ ರೈತರ ಜಮೀನುಗಳನ್ನು ಏರೊಸ್ಪೇಸ್ ಉದ್ಯಮಕ್ಕೆ ನೀಡವುದನ್ನು ರೈತರ ಹೋರಾಟಕ್ಕೆ ಮಣಿದು ಜಮೀನು ಪಡೆಯಲ್ಲ ಎಂದು ಮುಖ್ಯಮಂತ್ರಿ ಘೋಷಿಸಿದ್ದಾರೆ. ಅದೇ ರೀತಿ ಅಗ್ರಹಾರ ಚೆಕ್‌ಡ್ಯಾಮ್‌ನ ನೀರನ್ನು ಪಡೆಯಲು ಹೋರಾಟಕ್ಕೆ ಕರೆ ನೀಡಿದ್ದು ನಮ್ಮ ಸಂಘದಿಂದ ಹೋರಾಟಕ್ಕೆ ಬೆಂಬಲ ನೀಡಿ ನ್ಯಾಯ ಕೊಡಿಸುತ್ತೇವೆ ಎಂದರು.ರಾಜಕೀಯ ಕುಮ್ಮಕ್ಕಿನಿಂದ ರೈತರ ಹೋರಾಟದ ವಿರುದ್ಧ ಎಫ್‌ಐಆರ್ ದಾಖಲಿಸುವುದಾಗಿ ಬೆದರಿಕೆ ಹಾಕಿಸುತ್ತಿದ್ದು, ಇಂತಹ ಬೆದರಿಕೆಗೆ ನಮ್ಮ ಸಂಘಟನೆ ಬಗ್ಗುವುದಿಲ್ಲ ಎಂದು ಅಧಿಕಾರಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದರು. ಜಿಗಣೇಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಜಿಗಣೇಹಳ್ಳಿ ನೀಲಕಂಠಪ್ಪ ಮಾತನಾಡಿ, ಅಗ್ರಹಾರ ಚೆಕ್‌ಡ್ಯಾಮ್ ನೀರು ಮಳೆ ಗಾಲ ದಲ್ಲಿ ಮಾತ್ರ ಹರಿಯುತ್ತಿದ್ದು ಜಿಗಣೇಹಳ್ಳಿ ಸೇರಿದಂತೆ ಕುಂತಿಹೊಳೆ, ಯಗಟೀಪುರ ಕ್ಷೇತ್ರಗಳ ಸುತ್ತಮುತ್ತ ಹರಿಯುತ್ತಿದೆ. ಸುಮಾರು 45 ಹಳ್ಳಿಗಳಿಗೆ ಕುಡಿಯುವ ನೀರಿಗೆ ಸಹಕಾರಿ. ಆದರೆ ಇದೀಗ ಏಕಾಏಕಿ ಹುಲಿಕೆರೆ, ನಾಗೇನಹಳ್ಳಿ ಕೆರೆಗಳಿಗೆ ನೀರು ನೀಡುವುದರಿಂದ ರೈತರಿಗೆ ತೊಂದರೆಯಾಗುವ ಕಾರಣ ಈ ಯೋಜನೆ ರದ್ದುಗೊಳಿಸಿ ರೈತರ ಹಿತ ಕಾಪಾಡಬೇಕು ಎಂದು ಮನವಿ ಮಾಡಿದರು. ರೈತ ಸಂಘದ ಪಿರಿಯಾಪಟ್ಟಣದ ಸೈಯದ್ ಅಬ್ದುಲ್ಲಾ, ಬೆಟ್ಟದಪುರದ ವಾಸು, ಮಂಜುನಾಥ್, ಅನುಸೂ ಯಮ್ಮ, ಶರತ್‌ಯಾದವ್, ಕುರುಬಗೆರೆ ಲೋಕೇಶ್, ಪ್ರವೀಣ್, ರಮೇಶ್, ಶೇಖರಪ್ಪ, ಚಿಕ್ಕತಂಗಲಿ ಈಶ್ವರಪ್ಪ, ಯಳ್ಳಂಬಳಸೆ ರುದ್ರಯ್ಯ ಮತ್ತಿತರರು ಇದ್ದರು.18ಕೆಕೆಡಿಯು2.ಕಡೂರು ತಾಲೂಕು ಅಗ್ರಹಾರ ಚೆಕ್‌ಡ್ಯಾಮ್ ನೀರು ಬೇರೆಡೆಗೆ ನೀಡಬಾರದೆಂದು ಕರ್ನಾಟಕ ರೈತ ಸಂಘದ ಹಸಿರು ಸೇನೆ ರೈತರು ಹಾಗೂ ಸ್ಥಳೀಯ ರೈತ ಮುಖಂಡರು ಕಡೂರು ಪ್ರವಾಸಿ ಮಂದಿರದಲ್ಲಿ ನಡೆಸಿದ ಸಭೆಯಲ್ಲಿ ಫಯಾಜ್ ಮತ್ತು ಬಾಸೂರು ರವಿ ಮಾತನಾಡಿದರು.