ಹೆದ್ದಾರಿ ನಿರ್ಮಾಣಕ್ಕಾಗಿ ಶಾಲೆ ಕಟ್ಟಡ ತೆರವಿಗೆ ವಿರೋಧ
KannadaprabhaNewsNetwork | Published : Oct 14 2023, 01:00 AM IST
ಹೆದ್ದಾರಿ ನಿರ್ಮಾಣಕ್ಕಾಗಿ ಶಾಲೆ ಕಟ್ಟಡ ತೆರವಿಗೆ ವಿರೋಧ
ಸಾರಾಂಶ
ಹುಲಗಲಕುಂಟೆ ಗ್ರಾಮಸ್ಥರಿಂದ ಪಿಎನ್ ಸಿ ಕಂಪನಿ ವಿರುದ್ಧ ಆಕ್ರೋಶ
ಹುಲಗಲಕುಂಟೆ ಗ್ರಾಮಸ್ಥರಿಂದ ಪಿಎನ್ ಸಿ ಕಂಪನಿ ವಿರುದ್ಧ ಆಕ್ರೋಶ ಕನ್ನಡಪ್ರಭ ವಾರ್ತೆ ಹಿರಿಯೂರು ತಾಲೂಕಿನ ಹುಲಗಲಕುಂಟೆ ಗ್ರಾಮದ ಸರ್ಕಾರಿ ಶಾಲೆಗೆ ಮೂಲಭೂತ ಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು. ಹುಳಿಯಾರು ರಸ್ತೆಯ ಹುಲಗಲಕುಂಟೆ ಗ್ರಾಮದ ಮೂಲಕ ಹಾದು ಹೋಗುವ ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿ ರಸ್ತೆ ಕಾಮಗಾರಿ ನಡೆಯುತ್ತಿದ್ದು ರಸ್ತೆ ನಿರ್ಮಾಣಕ್ಕಾಗಿ ಶಾಲಾ ಕೊಠಡಿಗಳನ್ನು ತೆರವುಗೊಳಿಸಲು ಪಿಎನ್ ಸಿ ಕಂಪನಿ ಅಧಿಕಾರಿಗಳು ಮುಂದಾದಾಗ ಗ್ರಾಮಸ್ಥರು ನೂತನ ಕೊಠಡಿಗಳನ್ನು ನಿರ್ಮಿಸಿ ಹಳೆಯ ಕಟ್ಟಡ ತೆರವು ಮಾಡಿ ಎಂದು ಆಗ್ರಹಿಸಿದರು. ಈ ಹಿಂದೆಯೂ ನೂತನ ಕಟ್ಟಡಗಳನ್ನು ನಿರ್ಮಿಸಲಾಗುವುದು ಎಂದು ಪಿಎನ್ ಸಿ ಕಂಪನಿ ಅಧಿಕಾರಿಗಳು ಭರವಸೆ ನೀಡಿ ಕೊಠಡಿ ನಿರ್ಮಾಣ ಮಾಡದೇ ತಾತ್ಕಾಲಿಕ ಶೆಡ್ ನಿರ್ಮಾಣ ಮಾಡಿದ್ದರು ಎಂದು ಗ್ರಾಮಸ್ಥರು ಆರೋಪಿಸಿ ಗ್ರಾಮಸ್ಥರು, ವಿದ್ಯಾರ್ಥಿಗಳ ಪೋಷಕರು ಪ್ರತಿಭಟನೆ ನಡೆಸಿದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ರಾಜೇಶ್ ಕುಮಾರ್ ರವರಿಗೆ ಗ್ರಾಮದಲ್ಲಿರುವ ಸರ್ಕಾರಿ ಶಾಲೆಗೆ ಮೂಲಭೂತ ಸೌಕರ್ಯಗಳ ಕೊರತೆಯಿದ್ದು ಕುಡಿಯುವ ನೀರು, ಶಾಲಾ ಕೊಠಡಿ ನಿರ್ಮಾಣ, ಶೌಚಾಲಯ, ರಸ್ತೆ ಹಾಗೂ ಆಟದ ಮೈದಾನ ಸೇರಿದಂತೆ ಕೆಲಸದ ಕಾಮಗಾರಿ ಪೂರ್ಣಗೊಳಿಸಬೇಕು. ನಂತರ ಶಾಲೆಯನ್ನು ತೆರವುಗೊಳಿಸಿ ರಸ್ತೆ ಕಾಮಗಾರಿ ಆರಂಭಿಸಬೇಕು ಎಂದು ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ರಂಗನಾಥ್, ಹನುಮಂತಪ್ಪ, ರಮೇಶ್, ಆನಂದ್, ಕಿರಣ್, ಶಾಲೆಯ ಎಸ್ ಡಿಎಂಸಿ ಅಧ್ಯಕ್ಷರು, ಸದಸ್ಯರು ಸೇರಿದಂತೆ ಅನೇಕ ಗ್ರಾಮಸ್ಥರು ಹಾಜರಿದ್ದರು.