ದಸರಾ ಉದ್ಘಾಟನೆಗೆ ಲೇಖಕಿ ಬಾನು ಮುಷ್ತಾಕ್ ಆಯ್ಕೆಗೆ ವಿರೋಧ

| Published : Sep 15 2025, 01:00 AM IST

ದಸರಾ ಉದ್ಘಾಟನೆಗೆ ಲೇಖಕಿ ಬಾನು ಮುಷ್ತಾಕ್ ಆಯ್ಕೆಗೆ ವಿರೋಧ
Share this Article
  • FB
  • TW
  • Linkdin
  • Email

ಸಾರಾಂಶ

ಬಾನು ಮುಷ್ತಾಕ್ ಆಯ್ಕೆಗೆ ರಾಜ್ಯದ ಹಲವು ಸಂಘಟನೆಗಳು, ಮುಖಂಡರು ವಿರೋಧಿಸಿ ಪ್ರತಿಭಟನೆ ನಡೆಸಿದ್ದಾರೆ. ಆದರೂ ರಾಜ್ಯ ಸರ್ಕಾರ ತನ್ನ ನಿರ್ಧಾರ ಬದಲಿಸಿಲ್ಲ. ಇದನ್ನು ಖಂಡಿಸಿ ನಾವು ಚಾಮುಂಡಿ ಚಲೋ ಹಮ್ಮಿಕೊಂಡರೆ ಸರ್ಕಾರ ಪೊಲೀಸರನ್ನು ಬಿಟ್ಟು ನಮ್ಮನ್ನು ಬಂಧಿಸಿ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ನಾಡಹಬ್ಬ ಮೈಸೂರು ದಸರಾ ಉದ್ಘಾಟನೆಗೆ ಲೇಖಕಿ ಬಾನು ಮುಷ್ತಾಕ್ ಆಯ್ಕೆ ವಿರೋಧಿಸಿ ಭಾನುವಾರ ಚಾಮುಂಡಿ ಬೆಟ್ಟ ಚಲೋ ಹಮ್ಮಿಕೊಂಡಿದ್ದ ಬಜರಂಗ ಸೇನೆ ಸೇರಿದಂತೆ ಹಿಂದೂ ಸಂಘಟನೆ ಕಾರ್ಯಕರ್ತರನ್ನು ಪೊಲೀಸರು ಬೆಟ್ಟದಲ್ಲಿ ನಿಷೇಧವಿದ್ದ ಕಾರಣ ಬಂಧಿಸಿ ಬಿಡುಗಡೆ ಮಾಡಿದರು.

ನಗರದ ಶಕ್ತಿದೇವತೆ ಶ್ರೀ ಕಾಳಿಕಾಂಬಾ ದೇವಾಲಯದ ಮುಂಭಾಗ ಸೇರಿದ ಕಾರ್‍ಯಕರ್ತರು ಶ್ರೀ ಕಾಳಿಕಾಂಬಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿ 50 ಕಾರುಗಳಲ್ಲಿ ಮೈಸೂರಿಗೆ ತೆರಳಲು ಮುಂದಾದಾಗ ಚಾಮುಂಡಿ ಬೆಟ್ಟ ಚಲೋಗೆ ನಿಷೇಧವಿದ್ದ ಕಾರಣ ಸ್ಥಳದಲ್ಲೇ ಇದ್ದ ಪೊಲೀಸರು ಕಾರ್ಯಕರ್ತರನ್ನು ಬಂಧಿಸಿ ವ್ಯಾನ್ ನಲ್ಲಿ ಕರೆದೊಯ್ದರು.

ಈ ವೇಳೆ ಪೊಲೀಸರ ಬಂಧನ ಖಂಡಿಸಿ ರಾಜ್ಯ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.

ಬಜರಂಗಸೇನೆ ರಾಜ್ಯಾಧ್ಯಕ್ಷ ಬಿ.ಮಂಜುನಾಥ್, ಹರ್ಷಿತ್, ಯೋಗೇಶ್, ಮನೋಹರ್, ಪ್ರಸನ್ನಕುಮಾರ್ ಸೇರಿದಂತೆ

ಹಲವರನ್ನು ಬಂಧಿಸಿ ಕರೆದೊಯ್ದು ಕೆಲ ಗಂಟೆಗಳ ನಂತರ ಬಿಡುಗಡೆ ಮಾಡಿದರು.

ಇದಕ್ಕೂ ಮುನ್ನ ಬಜರಂಗಸೇನೆ ರಾಜ್ಯಾಧ್ಯಕ್ಷ ಬಿ.ಮಂಜುನಾಥ್ ಮಾತನಾಡಿ, ರಾಜ್ಯ ಸರ್ಕಾರ ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆ ಮಾಡಿರುವುದು ಸರಿಯಲ್ಲ. ಬಾನು ಮುಷ್ತಾಕ್ ನಮ್ಮ ಹಿಂದೂ ಸಂಸ್ಕೃತಿಯನ್ನು ಒಪ್ಪಿಕೊಳ್ಳುವುದಿಲ್ಲ ಎಂದರು.

ಈ ಹಿಂದೆ ಬಾನು ಅವರು ಕನ್ನಡ ತಾಯಿ ಭುವನೇಶ್ವರಿಯನ್ನು ವಿರೋಧಿಸಿದ್ದರು. ಅಲ್ಲದೆ ಅರಿಶಿನ ಕುಂಕುಮ ಬಣ್ಣದ ನಾಡ ಧ್ವಜವನ್ನೂ ಒಪ್ಪಿಕೊಳ್ಳುವುದಿಲ್ಲ. ಭುವನೇಶ್ವರಿ ತಾಯಿಯನ್ನು ಮುಸ್ಲಿಂ ವಿರೋಧಿ ರೀತಿ ಮಾತನಾಡಿದ್ದಾರೆ. ಅವರ ಮಾತು ಮತಾಂಧ ಮಾನಸಿಕತೆ ತೋರುತ್ತದೆ ಎಂದು ದೂರಿದರು.

ಇಂತಹ ಮನಸ್ಥಿತಿ ಇರುವ ಮುಷ್ತಾಕ್ ಚಾಮುಂಡೇಶ್ವರಿಯ ಆರಾಧನೆ ಮಾಡಲು ಹೇಗೆ ಸಾಧ್ಯ. ರಾಜ್ಯ ಸರ್ಕಾರ ಹಿಂದೂಗಳ ಭಾವನೆಗಳಿಗೆ ದಕ್ಕೆ ತರುವ ಕೆಲಸ ಮಾಡುತ್ತಿದೆ. ಬಾನು ಮುಷ್ತಾಕ್ ಅವರು ಮತಾಂಧ ಸಂದೇಶ ಕೊಟ್ಟ ವ್ಯಕ್ತಿಯಾಗಿದ್ದಾರೆ.

ಅವರ ಆಯ್ಕೆ ಮಾಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಬಾನು ಮುಷ್ತಾಕ್ ಆಯ್ಕೆಗೆ ರಾಜ್ಯದ ಹಲವು ಸಂಘಟನೆಗಳು, ಮುಖಂಡರು ವಿರೋಧಿಸಿ ಪ್ರತಿಭಟನೆ ನಡೆಸಿದ್ದಾರೆ. ಆದರೂ ರಾಜ್ಯ ಸರ್ಕಾರ ತನ್ನ ನಿರ್ಧಾರ ಬದಲಿಸಿಲ್ಲ. ಇದನ್ನು ಖಂಡಿಸಿ ನಾವು ಚಾಮುಂಡಿ ಚಲೋ ಹಮ್ಮಿಕೊಂಡರೆ ಸರ್ಕಾರ ಪೊಲೀಸರನ್ನು ಬಿಟ್ಟು ನಮ್ಮನ್ನು ಬಂಧಿಸಿ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಸೇನೆ ಜಿಲ್ಲಾಧ್ಯಕ್ಷ ಹರ್ಷ, ಚೇತನ್, ಸತೀಶ್, ಮನು, ಯತೀಶ್, ಸವ್ಯಾಸಚಿ, ಶಿವು, ಪ್ರದೀಪ್, ಶಿವಕುಮಾರ್ ಕೆಂಪಯ್ಯ ಸೇರಿದಂತೆ ಹಲವರನ್ನು ಬಂಧಿಸಿದ ನಂತರ ಪೊಲೀಸರು ಬಿಡುಗಡೆ ಮಾಡಿದರು.