ಸಾರಾಂಶ
ಹೊಸದುರ್ಗ: ಚಿತ್ರದುರ್ಗದಲ್ಲಿ ನಡೆಯಲಿರುವ ಶೋಷಿತರ ಜಾಗೃತಿ ಸಮಾವೇಶ ಯಶಸ್ವಿಯಾಗಲು ನಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ಬೆಂಬಲಿಸಬೇಕಿದೆ ಎಂದು ಶಾಸಕ ಬಿ.ಜಿ.ಗೋವಿಂದಪ್ಪ ಹೇಳಿದರು.
ಪಟ್ಟಣದ ಕಾಂಗ್ರೆಸ್ ಭವನದಲ್ಲಿ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಹಾಗೂ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದಿಂದ 28ರಂದು ಚಿತ್ರದುರ್ಗದಲ್ಲಿ ಆಯೋಜಿಸಲಾಗಿರುವ ಶೋಷಿತರ ಜಾಗೃತಿಗಾಗಿ ರಾಜ್ಯ ಸಮಾವೇಶದ ಪೂರ್ವಭಾವಿ ಸಭೆ ಉದ್ದೇಶಿಸಿ ಮಾತನಾಡಿದರು.ದೇಶದಲ್ಲಿ ಶ್ರೀಮಂತ ಬಡವ ಎಂಬ ಬೇದಗಳಿವೆ. ಶೋಷಿತ ಸಮುದಾಯಗಳು ಒಗ್ಗೂಡಿ ತಮ್ಮ ಹಕ್ಕುಗಳನ್ನು ಪಡೆಯಬೇಕಿದೆ. ಶೋಷಿತರು ಮುಖ್ಯವಾಹಿನಿಗೆ ಬರಬೇಕು. ನಿಮಗೆ ನ್ಯಾಯ ಕೊಡಿಸಲು ಚಿತ್ರದುರ್ಗದಲ್ಲಿ ಸಮಾವೇಶ ಆಯೋಜಿಸಲಾಗಿದೆ. ಈ ನಿಟ್ಟನಲ್ಲಿ ತಾಲೂಕಿನಿಂದ ಅತಿ ಹೆಚ್ಚು ಜನರು ಭಾಗವಹಿಸಿ ಸಮಾವೇಶ ಯಶಸ್ವೀಗೊಳಿಸಬೇಕು ಎಂದರು.
ಲೋಕಸಭೆ ಚುನಾವಣೆ ಹತ್ತಿರದಲ್ಲಿರುವುದರಿಂದ ಬಿಜೆಪಿಯವರು ಅಯೋಧ್ಯೆ ರಾಮ ಮಂದಿರವನ್ನು ಚುನಾವಣೆಗೆ ಬಳಸಿಕೊಳ್ಳುತ್ತಿದ್ದಾರೆ. ನಾವೆಲ್ಲರೂ ಹಿಂದೂಗಳು. ಹಿಂದೂ ಧರ್ಮದ ಪರಿಪಾಲಕರು. ದೇವರು, ಧರ್ಮ, ಸಂಸ್ಕೃತಿ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಬದುಕುತ್ತಿರುವವರಿಗೆ ಧರ್ಮದ ಪಾಠ ಹೇಳಿಕೊಡುವ ಅಗತ್ಯವಿಲ್ಲ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.ದೇಶಕ್ಕೆ ಸ್ವಾತಂತ್ರ‍್ಯ ಬರುವ ಮೊದಲು ಎಲ್ಲಾ ವರ್ಗದ ಜನರು ಶೋಷಿತರಾಗಿದ್ದರು. ಸ್ವಾತಂತ್ರ್ಯ ನಂತರ ಕಾಂಗ್ರೆಸ್ ಪಕ್ಷ ಎಲ್ಲಾ ವರ್ಗದ ಬಡ ಜನರಿಗೂ ಭೂಮಿ, ವಸತಿ, ಶಿಕ್ಷಣ, ಆರೋಗ್ಯ, ವಿದ್ಯುತ್, ಮೂಲ ಸೌಕರ್ಯ ಒದಗಿಸಿ ಮುಖ್ಯವಾಹಿನಿಗೆ ಕರೆತಂದಿತು. ಕಾಂಗ್ರೆಸ್ ಕಟ್ಟಿದ ಶಾಲಾ, ಕಾಲೇಜುಗಳಲ್ಲಿ ಓದಿದ ಬಿಜೆಪಿಗರು ಇಂದು ಕಾಂಗ್ರೆಸ್ ಪಕ್ಷ ಯಾವ ಸಾಧನೆಯನ್ನು ಮಾಡಿಲ್ಲ ಎಂದು ಟೀಕೆ ಮಾಡುತ್ತಿರುವುದು ಅವರ ನೈತಿಕತೆಯನ್ನು ಪ್ರಶ್ನಿಸುತ್ತದೆ ಎಂದರು.
ವಿಧಾನಸಭೆ ಚುನಾವಣೆಯಲ್ಲಿ ಮತ ನೀಡಿದಂತೆ ಲೋಕಸಭಾ ಚುನಾವಣೆಯಲ್ಲಿಯೂ ಗರಿಷ್ಠ ಮತ ನೀಡಬೇಕು. ಆದರೆ ಪ್ರತಿ ಲೋಕಸಭಾ ಚುನಾವಣೆಯಲ್ಲಿ ಮತ ಗಳಿಕೆ ಕಡಿಮೆಯಾಗುತ್ತಿದೆ. ಈ ಬಾರಿ ಹೆಚ್ಚು ಮತ ನೀಡಿ ಅಭ್ಯರ್ಥಿಯ ಗೆಲುವಿಗೆ ಹೊಸದುರ್ಗ ತಾಲೂಕಿನ ಮತದಾರರು ಸಹಕರಿಸಬೇಕು ಎಂದರು.ಈ ವೇಳೆ ಶ್ರೀರಾಂಪುರ ಬ್ಲಾಕ್ ಅಧ್ಯಕ್ಷ ಲೊಕೇಶಪ್ಪ, ಕಾಂಗ್ರೇಸ್ ನಗರ ಘಟಕದ ಅಧ್ಯಕ್ಷ ಆಗ್ರೋ ಶಿವಣ್ಣ, ಕೆಪಿಸಿಸಿ ಸದಸ್ಯರಾದ ಅಲ್ತಾಪ್ ಪಾಷಾ, ಎಂ.ಪಿ.ಶಂಕರ್, ಮಹಿಳಾ ಕಾಂಗ್ರೇಸ್ ಅಧ್ಯಕ್ಷೆ ದೀಪಿಕಾ, ಮದುರೆ ನಟರಾಜ್, ಇಟ್ಟಿಗೇಹಳ್ಳಿ ರಾಜಣ್ಣ, ಎಚ್.ಬಿ.ಮಂಜುನಾಥ್, ಎಂ.ಎಚ್.ಕೃಷ್ಣ ಮೂರ್ತಿ, ವೆಂಕಟೇಶ್ ದಳವಾಯಿ, ಯಶವಂತ್ ಗೌಡ ಮತ್ತಿತರಿದ್ದರು.