ಸಾರಾಂಶ
ಶಿವಮೊಗ್ಗ: ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ಸರ್ಕಾರವಾಗಿದ್ದು, ಅಧಿಕಾರ ಬಂದ ಮೇಲೆ ರೈತರ ಮೇಲೆ ದಬ್ಬಾಳಿಕೆ ಮಾಡುತ್ತಿದೆ. ರಸಗೊಬ್ಬರ ನಿಯಮಿತವಾಗಿ ಪೂರೈಸಲು ವಿಫಲವಾಗಿದ್ದು, ಭಿತ್ತನೆ ಸಂದರ್ಭದಲ್ಲಿ ರೈತರಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಜಿಲ್ಲಾ ರೈತಮೋರ್ಚಾ ಅಧ್ಯಕ್ಷ ಎಂ. ಸಿದ್ಧಲಿಂಗಪ್ಪ ಆರೋಪಿಸಿದರು. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಎರಡು ವರ್ಷದಿಂದ ರೈತರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬಿಜೆಪಿ ಸರ್ಕಾರ ನೀಡುತ್ತಿದ್ದ ರೈತ ವಿದ್ಯಾನಿಧಿ, ರೈತರಿಗೆ ನೀಡುತ್ತಿದ್ದ 4000 ರು. ಕಿಸಾನ್ ಸಮ್ಮಾನ್ ನಿಧಿಯನ್ನು ಈ ಸರ್ಕಾರ ನಿಲ್ಲಿಸಿದೆ. ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಟ್ರಾನ್ಸ್‌ಫಾರ್ಮರ್ ಅಳವಡಿಸಲು ಬಿಜೆಪಿ ಸರ್ಕಾರ 25 ಸಾವಿರ ರು.. ನಿಗದಿಪಡಿಸಿತ್ತು. ಆದರೆ ಈಗಿನ ಭ್ರಷ್ಟ ಸರ್ಕಾರ 3 ರಿಂದ 5 ಲಕ್ಷ ರು.ಗಳನ್ನು ಟ್ರಾನ್ಸ್‌ಫಾರ್ಮರ್ ಅಳವಡಿಕೆಗೆ ರೈತರಿಂದ ಕಿತ್ತುಕೊಳ್ಳುತ್ತಿದೆ ಎಂದು ಟೀಕಿಸಿದರು. ಕೇಂದ್ರ ಸರ್ಕಾರ ಬರ ಪರಿಹಾರಕ್ಕೆ ನೀಡಿದ 3454 ಕೋಟಿ ರು. ಅನುದಾನದಲ್ಲಿ ನಯಾಪೈಸೆಯನ್ನೂ ರಾಜ್ಯದ ರೈತರಿಗೆ ತಲುಪಿಸಿಲ್ಲ. ಕೇಂದ್ರ ಸರ್ಕಾರ 8.73 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರವನ್ನು ಕರ್ನಾಟಕಕ್ಕೆ ನೀಡಿದ್ದು, ಅವಶ್ಯಕತೆಗಿಂತ ಹೆಚ್ಚಾಗಿ ನೀಡಿದ್ದರೂ ಸರಿಯಾದ ರೀತಿಯಲ್ಲಿ ಅದನ್ನು ರೈತರಿಗೆ ತಲುಪಿಸದೇ ಕಾಳಸಂತೆಯಲ್ಲಿ ಮಾರಾಟಮಾಡುತ್ತಿದ್ದು, ರೈತರ ಮೇಲೆ ಲಾಟಿಚಾರ್ಜ್ ಮಾಡಲಾಗಿದೆ. ಅಲ್ಲದೆ ಕೃಷಿ ಸಚಿವರು, ಮುಖ್ಯಮಂತ್ರಿಗಳು ಹಾಗೂ ಇತರ ಸಚಿವರು ಬೇರೆ ಬೇರೆ ಅಂಕಿ ಅಂಶಗಳನ್ನು ನೀಡುತ್ತಿದ್ದು, ಇವರು ರೈತರ ಬಗ್ಗೆ ಕಾಳಜಿಯಿಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದು ಹೇಳಿದರು. ಹಾಲಿನ ಪ್ರೋತ್ಸಾಹ ಧನ ಬಾಕಿ ಉಳಿಸಿಕೊಂಡಿದೆ. ಭೂಸಿರಿ ಯೋಜನೆಯಡಿ ನೀಡುವ 10 ಸಾವಿರ ರು. ಪ್ರೋತ್ಸಾಹಧನ ನಿಲ್ಲಿಸಿದ್ದಾರೆ. ಎರಡು ವರ್ಷಗಳಲ್ಲಿ 3400ಕ್ಕಿಂತ ರೈತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಸಗೊಬ್ಬರದ ಅವೈಜ್ಞಾನಿಕ ದಾಸ್ತಾನು ಶೇಖರಣೆ ಮಾಡಿರುವ ಪರಿಣಾಮ ಹಲವು ಜಿಲ್ಲೆಗಳಲ್ಲಿ ರಸಗೊಬ್ಬರದ ಪ್ರಭಾವ ಉಂಟಾಗಿದೆ. ಕೃಷಿ ಸಚಿವರು ಸಂಪೂರ್ಣ ನಿಷ್ಕ್ರೀಯರಾಗಿದ್ದಾರೆ. ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು, ರೈತರಿಗೆ ಅಗತ್ಯ ಗೊಬ್ಬರವನ್ನು ನೀಡದೇ ಇದ್ದಲ್ಲಿ ರಾಜ್ಯಾದ್ಯಂತ ಸರ್ಕಾರದ ವಿರುದ್ಧ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.ಆನೆ ತುಳಿತದಿಂದ ಆದ ಬೆಳೆ ನಾಶಕ್ಕೆ ಪರಿಹಾರ ನೀಡಬೇಕು. ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದಾದ ಬೆಳೆ ನಾಶಕ್ಕೂ ಪರಿಹಾರ ನೀಡಬೇಕು. 3 ಎಕರೆಗಿಂತ ಕಡಿಮೆ ಭೂಮಿ ಇದ್ದ ರೈತರನ್ನು ಅರಣ್ಯ ಅಧಿಕಾರಿಗಳು ಬಲವಂತದಿಂದ ತೊಂದರೆ ನೀಡುತ್ತಿದ್ದು, ಅದನ್ನು ತಕ್ಷಣ ನಿಲ್ಲಿಸಬೇಕು ಎಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಜಗದೀಶ್, ಪ್ರಮುಖರಾದ ಶಿವರಾಜ್, ಸಾರೇಕೊಪ್ಪ ರಾಮಚಂದ್ರ, ಕುಮಾರ್ ನಾಯ್ಕ, ಗಣೇಶ್ ಬಿಳಿಕಿ, ನವೀನ್ ಹೆದ್ದೂರು, ಬೇಗುವಳ್ಳಿ ಸತೀಶ್, ಶಿವಕುಮಾರ್ ನಾಯ್ಕ್, ಮಲ್ಲಿಕಾರ್ಜುನ್, ಜಗದೀಶ್, ಮಂಜು, ಮಹೇಶ್, ಗುರುಮೂರ್ತಿ, ಸಂದೀಪ್, ಅಣ್ಣಪ್ಪ, ಚಂದ್ರಶೇಖರ್ ಇದ್ದರು.