ಸಾರಾಂಶ
ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಕರ್ನಾಟಕ ರಾಜ್ಯದ ಧಾರ್ಮಿಕ ಕ್ಷೇತ್ರದ ಪರಂಪರೆಯಲ್ಲಿ ತನ್ನದೆಯಾದ ವಿಶೇಷ ಮೌಲ್ಯವನ್ನು ಕಾಪಾಡಿಕೊಂಡಿರುವ ನೂರಾರು ವರ್ಷಗಳಿಂದ ಲಕ್ಷಾಂತರ ಭಕ್ತರ ಆರಾಧ್ಯದೈವ, ಪುಣ್ಯಕ್ಷೇತ್ರ ಧರ್ಮಸ್ಥಳದ ಮೇಲೆ ಸರ್ಕಾರ ಪರೋಕ್ಷವಾಗಿ ಎಸ್‌ಐಟಿ ತನಿಖೆ ಮೂಲಕ ಅಪಪ್ರಚಾರ ಮಾಡಿ, ಧಾರ್ಮಿಕ ಕ್ಷೇತ್ರದ ಮೇಲೆ ದಬ್ಬಾಳಿಕೆ ಮಾಡುತ್ತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ ಆರೋಪಿಸಿದರು.ಶನಿವಾರ ತಾಲೂಕು ಕಚೇರಿ ಮುಂಭಾಗದಲ್ಲಿ ಬಿಜೆಪಿಯಿಂದ ಹಮ್ಮಿಕೊಂಡಿದ್ದ ಧರ್ಮದ ಉಳಿವಿಗಾಗಿ ಧರ್ಮಯುದ್ಧ ಪ್ರತಿಭಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಸರ್ಕಾರ ಧರ್ಮಸ್ಥಳದ ಹೆಸರಿಗೆ ಕಳಂಕ ತರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಧರ್ಮಸ್ಥಳ ವಿಚಾರದಲ್ಲಿ ಹಲವಾರು ರೀತಿಯ ಶಂಕೆಗಳಿದ್ದು, ಈ ಬಗ್ಗೆ ಸತ್ಯಾಂಶ ಹೊರಬರಬೇಕಾದರೆ ಅಪಪ್ರಚಾರ ಮಾಡುವವರ ವಿರುದ್ಧ ಕಾನೂನು ಕ್ರಮಕೈಗೊಂಡರೆ ಮಾತ್ರ ನೈಜ್ಯ ಸ್ಥಿತಿ ಹೊರಬರಲಿದೆ ಎಂದರು.
ಭಾರತೀಯ ಜನತಾ ಪಕ್ಷ ಯಾವುದೇ ಸಂದರ್ಭದಲ್ಲೂ ಧರ್ಮದ ಪರವಾಗಿ ಹೋರಾಟ ನಡೆಸುತ್ತದೆ. ನಮ್ಮ ಸಂಸ್ಕೃತಿ, ಸಂಸ್ಕಾರದ ವಿರುದ್ಧ ಹುನ್ನಾರ ನಡೆಸುವವರ ವಿರುದ್ಧ ಸರ್ಕಾರ ಕಟ್ಟುನಿಟ್ಟಿನ ಕಾನೂನು ಕ್ರಮಕೈಗೊಂಡು ಧರ್ಮವನ್ನು ರಕ್ಷಿಸುವ ಕಾರ್ಯದಲ್ಲಿ ಮುಂದಾಗಬೇಕು ಎಂದರು.ಶ್ರೀಕ್ಷೇತ್ರ ಧರ್ಮಸ್ಥಳ ಇಂದಿಗೂ ತನ್ನದೇಯಾದ ಪರಂಪರೆಯನ್ನು ಕಾಪಾಡಿಕೊಂಡು ಬಂದಿದೆ. ಕೇವಲ ಕರ್ನಾಟಕ, ಭಾರತವಷ್ಟೆಯಲ್ಲ, ವಿಶ್ವ ಮಟ್ಟದಲ್ಲಿ ಧರ್ಮಸ್ಥಳ ಪುಣ್ಯಕ್ಷೇತ್ರವಾಗಿ ಖ್ಯಾತಿಯಾಗಿದೆ. ಧರ್ಮಸ್ಥಳ ವಿರುದ್ಧ ವ್ಯವಸ್ಥಿತವಾಗಿ ಕೆಲವು ಶಕ್ತಿಗಳು ಬೇರೆಯವರೊಂದಿಗೆ ಶಾಮಿಲಾಗಿ ಇಲ್ಲ ಸಲ್ಲದ ಆರೋಪದ ಮೂಲಕ ಶ್ರೀ ಕ್ಷೇತ್ರಕ್ಕೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದು ಇದರ ವಿರುದ್ಧ ಬಿಜೆಪಿ ಉಗ್ರ ಪ್ರತಿಭಟನೆ ನಡೆಸುವುದಲ್ಲದೆ, ವಿರೋಧಿಗಳ ಕೃತ್ಯವನ್ನು ಖಂಡಿಸುತ್ತದೆ ಎಂದರು.
ತಹಸೀಲ್ದಾರ್ ಪರವಾಗಿ ತಳಕು ನಾಡಕಚೇರಿ ಉಪ ತಹಸೀಲ್ದಾರ್ ಮಹಮ್ಮದ್ ರಫೀ ಮನವಿ ಸ್ವೀಕರಿಸಿ, ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಮುಂದಿನ ಆದೇಶಕ್ಕಾಗಿ ಸರ್ಕಾರಕ್ಕೆ ಕಳಿಸುವ ಭರವಸೆ ನೀಡಿದರು.ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಾಳೆಮಂಡಿ ರಾಮದಾಸ್, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ವೆಂಕಟೇಶ್ ಯಾದವ್, ತಾಲೂಕು ಮಂಡಲಾಧ್ಯಕ್ಷ ಬಿ.ಎಂ.ಸುರೇಶ್ ಮಾಜಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ.ಪಿ.ಜಯಪಾಲಯ್ಯ, ಬಿಜೆಪಿ ಮುಖಂಡರಾದ ಡಿ.ಸೋಮಶೇಖರ ಮಂಡಿಮಠ, ಬಿ.ಎಸ್.ಶಿವಪುತ್ರಪ್ಪ, ಕರೀಕೆರೆ ತಿಪ್ಪೇಸ್ವಾಮಿ, ನಾಗರಾಜ, ದೇವರಾಜರೆಡ್ಡಿ, ಜಗದಾಂಭ, ಶಾಂತಲಾ, ಟಿ.ತಿಮ್ಮಪ್ಪ, ಈಶ್ವರನಾಯಕ, ಜೆ.ಕೆ.ತಿಪ್ಪೇಶ್, ಟಿ.ಮಂಜುನಾಥ, ಬಡಕ್ಕ, ಬಂಡೆರಂಗಸ್ವಾಮಿ, ಪಾಲಯ್ಯ, ಡಿ.ದಯಾನಂದ, ಚಿದಾನಂದ, ಶ್ರೀನಿವಾಸ್ ಮುಂತಾದವರು ಉಪಸ್ಥಿತರಿದ್ದರು.