ಆರೆಂಜ್ ಅಲರ್ಟ್: ಎಚ್ಚರಿಕೆ ವಹಿಸಲು ಡಿಸಿ ಮನವಿ

| Published : May 20 2025, 11:45 PM IST

ಆರೆಂಜ್ ಅಲರ್ಟ್: ಎಚ್ಚರಿಕೆ ವಹಿಸಲು ಡಿಸಿ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯಂತೆ ಮೇ 21 ರಂದು ಜಿಲ್ಲೆಯಲ್ಲಿ ಭಾರಿ ಪ್ರಮಾಣದ ಗುಡುಗು-ಸಿಡಿಲು ಸಹಿತ ಗಾಳಿ-ಮಳೆಯಾಗುವ ಸಾಧ್ಯತೆ ಇರುವುದರಿಂದ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಪ್ರತಿಕೂಲ ಹವಾಮಾನ ಸಮಯದಲ್ಲಿ ಹೆಚ್ಚಿನ ಮುಂಜಾಗ್ರತೆವಹಿಸಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಶುಭ ಕಲ್ಯಾಣ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ, ತುಮಕೂರುಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯಂತೆ ಮೇ 21 ರಂದು ಜಿಲ್ಲೆಯಲ್ಲಿ ಭಾರಿ ಪ್ರಮಾಣದ ಗುಡುಗು-ಸಿಡಿಲು ಸಹಿತ ಗಾಳಿ-ಮಳೆಯಾಗುವ ಸಾಧ್ಯತೆ ಇರುವುದರಿಂದ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಪ್ರತಿಕೂಲ ಹವಾಮಾನ ಸಮಯದಲ್ಲಿ ಹೆಚ್ಚಿನ ಮುಂಜಾಗ್ರತೆವಹಿಸಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಶುಭ ಕಲ್ಯಾಣ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.ಸಿಡಿಲು ಸಹಿತ ಮಳೆಯಾಗುವುದರಿಂದ ಸಿಡಿಲು ಬಡಿಯುವ ಪ್ರದೇಶದ ಬಗ್ಗೆ ರಾಜ್ಯದಿಂದ ಮುಂಚಿತವಾಗಿ ಸಾರ್ವಜನಿಕರಿಗೆ ಎಸ್‌ಎಂಎಸ್ ಅಲರ್ಟ್ ರವಾನಿಸಲಾಗುವುದು. ತುರ್ತಾಗಿ ಸುರಕ್ಷಿತವಾದ ತಗ್ಗು ಪ್ರದೇಶಕ್ಕೆ ತೆರಳಬೇಕು. ಕೃಷಿ ಕೆಲಸ, ಜಾನುವಾರು ಮೇಯಿಸಲು ಹೋಗಬಾರದು. ಲೋಹದ ತಗಡು ಮನೆಗಳು, ಮರ, ವಿದ್ಯುತ್ ಉಪಕರಣ/ಸರಬರಾಜು, ಮಾರ್ಗ/ಕಂಬ, ದೂರವಾಣಿ ಸಂಪರ್ಕ, ಮೊಬೈಲ್ ಟವರ್, ಜಲಕಾಯಗಳು ಸೇರಿದಂತೆ ಇತರೆ ಪ್ರತ್ಯೇಕ ವಸ್ತುಗಳಿಂದ ದೂರವಿರಬೇಕು. ಕಬ್ಬಿಣದ ಸರಳುಗಳ ಛತ್ರಿ/ಮೊಬೈಲ್ ಫೋನ್ ಬಳಸಬಾರದು. ಮಿಂಚು ಒಬ್ಬರಿಂದ ಒಬ್ಬರಿಗೆ ಸಂಚರಿಸದಂತೆ, ಜನ ಸಂದಣಿಯಾಗದಂತೆ ಅಂತರ ಕಾಪಾಡಬೇಕು. ತುರ್ತು ಚಿಕಿತ್ಸೆಗೆ ಹತ್ತಿರದ ಆರೋಗ್ಯ ಕೇಂದ್ರಗಳ ಮಾಹಿತಿಯನ್ನು ಹೊಂದಿರಬೇಕು.ನದಿ, ಹಳ್ಳ ಕೆರೆ ದಡಗಳಲ್ಲಿ ಬಟ್ಟೆ ತೊಳೆಯುವುದು, ಈಜಾಡುವುದು, ದನ-ಕರುಗಳನ್ನು ತೊಳೆಯುವುದು ಹಾಗೂ ಫೋಟೋ/ಸೆಲ್ಫಿಗಳನ್ನು ತೆಗೆಯುವುದು, ಅಪಾಯವಿರುವ ಸೇತುವೆಗಳ ಮೇಲೆ ಸಂಚರಿಸುವುದು ಮತ್ತು ಇತರೆ ಚಟುವಟಿಕೆ ನಡೆಸದಂತೆ ಎಚ್ಚರವಹಿಸಬೇಕು. ಪೋಷಕರು ತಮ್ಮ ಮಕ್ಕಳನ್ನು ಅಪಾಯಕಾರಿಯಾಗಿ ಹರಿಯುವ ನೀರು ಮತ್ತು ಕೆರೆ/ಕಟ್ಟೆಗಳಲ್ಲಿ ಈಜಲು ಬಿಡದಂತೆ ಜಾಗೃತಿವಹಿಸಬೇಕು. ದುರ್ಬಲ ಮಣ್ಣಿನ ಮನೆ/ಕಟ್ಟಡ, ಮರದ ಕೊಂಬೆ, ಜಲಕಾಯ, ವಿದ್ಯುತ್ ವಸ್ತುಗಳಿಂದ ದೂರವಿರಬೇಕು. ಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಲ್ಲಿರಸಬೇಕು. ತೋಟಗಾರಿಕೆ ಬೆಳೆಗಳನ್ನು ಮಳೆಗೆ ಹಾನಿಯಾಗದಂತೆ ಸೂಕ್ತ ರೀತಿಯಲ್ಲಿ ಸಂರಕ್ಷಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ. ಸಹಾಯವಾಣಿ ಆರಂಭ

ಕೆರೆ-ಕಟ್ಟೆಗಳ ಏರಿ/ಬಂಡ್/ಕೋಡಿಗಳಲ್ಲಿ ನೀರು ಸೋರಿಕೆ ಕಂಡು ಬಂದಲ್ಲಿ, ರಸ್ತೆಗಳ ಮೇಲೆ ಅಪಾಯಕಾರಿ ಮಟ್ಟದಲ್ಲಿ ನೀರು ಹರಿಯುತ್ತಿದ್ದಲ್ಲಿ/ನಿಂತಿದ್ದಲ್ಲಿ, ಮರ ಬಿದ್ದು ವಾಹನ ಸಂಚಾರ ಸ್ಥಗಿತವಾಗಿದ್ದಲ್ಲಿ, ವಿದ್ಯುತ್ ಲೈನ್/ ಕಂಬ ಬಿದ್ದಿದ್ದಲ್ಲಿ, ಮನೆಯೊಳಗಡೆ ನೀರು ನುಗ್ಗಿದಲ್ಲಿ, ಮನೆ ಗೋಡೆ/ಮೇಲ್ಛಾವಣಿ ಬಿದ್ದಿದ್ದಲ್ಲಿ, ಬೆಳೆ ನಷ್ಟ ಇತರೆ ತುರ್ತು ಪರಿಸ್ಥಿತಿಯಲ್ಲಿ ಸಹಾಯವಾಣಿ ಸಂಖ್ಯೆ: 7304925519 ಸಂಪರ್ಕಿಸಬೇಕೆಂದು ಸಾರ್ವಜನಿಕರಲ್ಲಿ ಅವರು ಮನವಿ ಮಾಡಿದ್ದಾರೆ.