ಸಾರಾಂಶ
ಮಂಗಳೂರು : ಕರಾವಳಿಯಲ್ಲಿ ಶುಕ್ರವಾರ ಬಿಟ್ಟು ಬಿಟ್ಟು ಮಳೆಯಾಗಿದೆ. ಭಾರತೀಯ ಹವಾಮಾನ ಇಲಾಖೆ ಜು.26ರಂದು ಆರೆಂಜ್ ಅಲರ್ಟ್ ಘೋಷಿಸಿದೆ. ಇದೇ ವೇಳೆ ಜು.26ರಿಂದ 30ರ ವರೆಗೆ ಐದು ದಿನಗಳ ಕಾಲ ಕರಾವಳಿ ಸಮುದ್ರದಲ್ಲಿ ಭಾರಿ ಗಾಳಿ, ಅಲೆಯ ಎಚ್ಚರಿಕೆ ನೀಡಲಾಗಿದೆ.
ದ.ಕ.ಜಿಲ್ಲೆಯಲ್ಲಿ ಶುಕ್ರವಾರ ಆರೆಂಜ್ ಅಲರ್ಟ್ ಇದ್ದರೂ ಅಷ್ಟಾಗಿ ಮಳೆ ಸುರಿದಿಲ್ಲ. ಬೆಳಗ್ಗಿನಿಂದ ಮಧ್ಯಾಹ್ನ ವರೆಗೆ ಬಿಟ್ಟು ಬಿಟ್ಟು ಮಳೆಯಾಗಿದ್ದು, ಅಪರಾಹ್ನ ಮೋಡ, ಮಳೆ ಕಾಣಿಸಿದೆ.
ಕರಾವಳಿ ಸಮುದ್ರದಲ್ಲಿ ಗಂಟೆಗೆ 45 ಕಿ.ಮೀ. ನಿಂದ 65 ಕಿ.ಮೀ. ವೇಗ ವರೆಗೆ ಭಾರಿ ಗಾಳಿ ಬೀಸುವ ಸಾಧ್ಯತೆ ಇದ್ದು, ಸಮುದ್ರ ತೀರದಲ್ಲಿ ವಾಸಿಸುವವರಿಗೆ ಎಚ್ಚರಿಕೆ ನೀಡಲಾಗಿದೆ. ಕಡಬದಲ್ಲಿ ಗರಿಷ್ಠ ಮಳೆ: ದ.ಕ.ಜಿಲ್ಲೆಯ ಕಡಬದಲ್ಲಿ ಶುಕ್ರವಾರ ಬೆಳಗ್ಗಿನ ವರೆಗೆ ಗರಿಷ್ಠ 74.9 ಮಿಲಿ ಮೀಟರ್ ಮಳೆ ದಾಖಲಾಗಿದೆ. ಜಿಲ್ಲೆಯ ದಿನದ ಸರಾಸರಿ ಮಳೆ 58.8 ಮಿ.ಮೀ. ಆಗಿದೆ.
ಬೆಳ್ತಂಗಡಿ 65.7 ಮಿ.ಮೀ, ಬಂಟ್ವಾಳ 46.8 ಮಿ.ಮೀ, ಮಂಗಳೂರು 57.7 ಮಿ.ಮೀ, ಪುತ್ತೂರು 46.3 ಮಿ.ಮೀ, ಸುಳ್ಯ 61 ಮಿ.ಮೀ, ಮೂಡುಬಿದಿರೆ 42.3 ಮಿ.ಮೀ, ಮೂಲ್ಕಿ 34.2 ಮಿ.ಮೀ, ಉಳ್ಳಾಲ 47.7 ಮಿ.ಮೀ. ಮಳೆ ದಾಖಲಾಗಿದೆ.
ಉಪ್ಪಿನಂಗಡಿ ನೇತ್ರಾವತಿ ಮತ್ತು ಕುಮಾರಧಾರ ನದಿ 28.6 ಮೀಟರ್ ಮತ್ತು ಬಂಟ್ವಾಳದಲ್ಲಿ ನೇತ್ರಾವತಿ ನದಿ 6.3 ಮೀಟರ್‌ನಲ್ಲಿ ಹರಿಯುತ್ತಿದೆ. ತಪ್ಪಿದ ಹೋರ್ಡಿಂಗ್ ದುರಂತ
ಮಂಗಳೂರಿನ ಬಿಜೈ ಬಟ್ಟಗುಡ್ಡೆಯಲ್ಲಿ ಮುಂಬೈ ಮಾದರಿಯ ಹೋರ್ಡಿಂಗ್ ದುರಂತ ಸ್ವಲ್ಪದರಲ್ಲೇ ತಪ್ಪಿದೆ. ಇಲ್ಲಿನ ರಸ್ತೆ ಬದಿ ಅಳವಡಿಸಿದ ಬೃಹತ್ ಫ್ಲೈಕ್ಸ್‌ವೊಂದು ಮೆಸ್ಕಾಂನ ಹೈಟೆನ್ಶನ್ ವಯರ್ ಮೇಲೆ ಬಿದ್ದಿದೆ. ಅದರಲ್ಲಿ ಖಾಸಗಿ ಕಂಪನಿಯ ಇಂಟರ್‌ನೆಟ್ ಕೇಬಲ್‌ಗಳು ಇದ್ದ ಕಾರಣ ಯಾವುದೇ ಅನಾಹುತ ಸಂಭವಿಸಿಲ್ಲ. ಇಲ್ಲಿ ಅತೀ ಹೆಚ್ಚು ವಾಹನಗಳು ಸಂಚರಿಸುತ್ತಿದ್ದು, ಹೋರ್ಡಿಂಗ್ ಬಿದ್ದರೆ ದೊಡ್ಡ ಅನಾಹುತದ ಸಾಧ್ಯತೆ ಇತ್ತು ಎಂದು ಹೇಳಲಾಗುತ್ತಿದೆ. ಇಷ್ಟು ದೊಡ್ಡ ಜಾಹಿರಾತು ಫಲಕ ಹಾಕುವ ವೇಳೆ ಗಾಳಿ ಹೋಗಲು ರಂಧ್ರವನ್ನೂ ಮಾಡಿರಲಿಲ್ಲ, ಮಾತ್ರವಲ್ಲ ಹಳೆಯ ಫ್ಲೈಕ್ಸ್ ಮೇಲೆಯೇ ಇನ್ನೊಂದು ಫ್ಲೈಕ್ಸ್ ಹಾಕಿರುವುದು ಈ ಫಲಕ ಬೀಳಲು ಕಾರಣ ಎಂದು ಹೇಳಲಾಗುತ್ತಿದೆ. ಘಟನಾ ಸ್ಥಳಕ್ಕೆ ಪೊಲೀಸ್ ಇಲಾಖೆ, ಮೆಸ್ಕಾಂ ಅಧಿಕಾರಿಗಳು ಆಗಮಿಸಿದ್ದಾರೆ. ಫ್ಲೈಕ್ಸ್ ತೆರವು ಕಾರ್ಯಾಚರಣೆ ನಡೆಯುತ್ತಿದೆ.
ಶಾಲೆಯ ಮೇಲ್ಛಾವಣಿ ಕುಸಿತ: ಶಿಕ್ಷಕಿ, ವಿದ್ಯಾರ್ಥಿಗಳಿಗೆ ಗಾಯಮಂಗಳೂರು: ಶುಕ್ರವಾರ ಮಧ್ಯಾಹ್ನ ಮಂಗಳೂರು ನಗರ ಮತ್ತು ಹೊರವಲಯದಲ್ಲಿ ಬೀಸಿದ ಬಿರುಗಾಳಿ ಸಹಿತ ಭಾರೀ ಮಳೆ ಹಲವು ಅವಾಂತರ ಉಂಟು ಮಾಡಿದೆ.ಕೃಷ್ಣಾಪುರ ಕಾರುಣ್ಯ ವಿದ್ಯಾಲಯದ ಮೇಲ್ಪಾವಣಿ ಕುಸಿದು ಬಿದ್ದು ವಿದ್ಯಾರ್ಥಿ ಹಾಗೂ ಶಿಕ್ಷಕಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮನೆಯೊಂದರ ಮೇಲ್ಛಾವಣಿ ಕುಸಿದು, ಹಲವಾರು ವಿದ್ಯುತ್ ಕಂಬಗಳು ಕೂಡ ಮುರಿದು ಬಿದ್ದಿವೆ.
ಒಂದು ಮನೆಯ ಶೀಟ್ ಹಾರಿ ಬಂದು ಇನ್ನೊಂದು ಮನೆಗೆ ಹಾನಿಯಾಗಿದೆ. ಭಾರೀ ಗಾಳಿ ಬೀಸಿದ ಪರಿಣಾಮ ಮನೆಯ ಹಂಚು ಹಾರಿ ಹೋಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ.