ತಾಲೂಕಿಗೊಂದು ಇರುವ ಸರ್ಕಾರಿ ಆಸ್ಪತ್ರೆ ಅಲ್ಲದೇ ಹೋಬಳಿ ಮಟ್ಟದಲ್ಲೂ ಉತ್ತಮ ಸರ್ಕಾರಿ ಆಸ್ಪತ್ರೆಗಳಿವೆ. ಆದರೆ ವೈದ್ಯರ ತೀವ್ರ ಕೊರತೆ ಇದೆ.
ಶಂಕರ ಭಟ್ಟ ತಾರೀಮಕ್ಕಿ ಯಲ್ಲಾಪುರ
ಪಟ್ಟಣದಲ್ಲಿರುವ 5 ಆಯುಷ್ಮಾನ್ ಆರೋಗ್ಯ ಕೇಂದ್ರಗಳನ್ನು ಮುಚ್ಚುವಂತೆ ಸರ್ಕಾರ ಆದೇಶ ಹೊರಡಿಸಿದೆ.ಕಳೆದ ಆರೇಳು ವರ್ಷಗಳ ಹಿಂದೆ ರಾಜ್ಯ ಸರ್ಕಾರ ಗ್ರಾಮೀಣ ಪ್ರದೇಶಗಳಲ್ಲಿ ಜನರಿಗೆ ಅನುಕೂಲವಾಗಲೆಂದು ಆಯುಷ್ಮಾನ್ ಆರೋಗ್ಯ ಕೇಂದ್ರವನ್ನು ಮಾಡಲು ಮುಂದಾಗಿತ್ತು. ಕೆಲವು ಕಡೆ ಆಯುಷ್ಮಾನ್ ಆರೋಗ್ಯ ಕೇಂದ್ರಗಳು ಪ್ರಾರಂಭವಾಗಿವೆ. ಅದೇ ರೀತಿ ಆಯುಷ್ಮಾನ್ ಆರೋಗ್ಯ ಕೇಂದ್ರವನ್ನು ಪಟ್ಟಣದಲ್ಲೂ ಪ್ರಾರಂಭಿಸಲಾಗಿತ್ತು.
ನಿಜವಾಗಿಯೂ ಪಟ್ಟಣದಲ್ಲಿ ಹತ್ತಾರು ಖಾಸಗಿ ಆಸ್ಪತ್ರೆಗಳು ಮತ್ತು ಸರ್ಕಾರಿ ಆಸ್ಪತ್ರೆಗಳ ವ್ಯವಸ್ಥೆ ಅತ್ಯಂತ ಉತ್ತಮವಾಗಿದೆ. ಸರ್ಕಾರಕ್ಕೆ ಈಗ ತಾನು ಮಾಡಿದ ತಪ್ಪಿನ ಅರಿವಾಗಿ, ತಕ್ಷಣದಿಂದ ಪಟ್ಟಣದಲ್ಲಿರುವ ಎಲ್ಲ ಆಯುಷ್ಮಾನ್ ಆರೋಗ್ಯ ಕೇಂದ್ರವನ್ನು ಮುಚ್ಚಲು ಆದೇಶಿಸಿದೆ ಎಂದು ಹೇಳಲಾಗುತ್ತಿದೆ.ತಾಲೂಕಿಗೊಂದು ಇರುವ ಸರ್ಕಾರಿ ಆಸ್ಪತ್ರೆ ಅಲ್ಲದೇ ಹೋಬಳಿ ಮಟ್ಟದಲ್ಲೂ ಉತ್ತಮ ಸರ್ಕಾರಿ ಆಸ್ಪತ್ರೆಗಳಿವೆ. ಆದರೆ ವೈದ್ಯರ ತೀವ್ರ ಕೊರತೆ ಇದೆ. ಇದ್ದ ವೈದ್ಯರೇ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವುದು ಸಾಮಾನ್ಯವಾಗಿದೆ. ಯಲ್ಲಾಪುರ ಪಟ್ಟಣದಲ್ಲಿ ೫ ಇಂತಹ ಆಯುಷ್ಮಾನ್ ಆರೋಗ್ಯ ಕೇಂದ್ರಗಳಿವೆ.
ಸರ್ಕಾರಕ್ಕೆ ಕಟ್ಟಡ ಬಾಡಿಗೆ, ವೈದ್ಯರೂ ಸೇರಿ ಸಿಬ್ಬಂದಿಗಳ ವೆಚ್ಚ ಅನಗತ್ಯ ಹೊರೆಯಾಗುತ್ತಿದೆ. ಇದನ್ನು ಗಮನಿಸಿಯೇ ಸರ್ಕಾರ ಈ ಕ್ರಮ ಕೈಗೊಂಡಿದೆ ಎನ್ನಲಾಗುತ್ತಿದೆ. ಲಭ್ಯವಾದ ಮಾಹಿತಿಯಂತೆ ಜಿಲ್ಲೆಯ ಪಟ್ಟಣಗಳಲ್ಲಿ ೫೦- ೬೦ ಇಂತಹ ಆಯುಷ್ಮಾನ್ ಆರೋಗ್ಯ ಕೇಂದ್ರಗಳಿವೆ. ಅವುಗಳನ್ನು ಮುಚ್ಚಲು ಸರ್ಕಾರ ತೀರ್ಮಾನಿಸಿರುವುದು ತಿಳಿದುಬಂದಿದೆ.ಕೆಲ ರಾಜಕೀಯ ಹಿತಾಸಕ್ತರು ವಿರೋಧಕ್ಕಾಗಿ ಇಂತಹ ಆಯುಷ್ಮಾನ್ ಕೇಂದ್ರ ಮುಚ್ಚುವುದಕ್ಕೆ ವಿರೋಧಿಸುತ್ತಿದ್ದಾರೆ. ಸ್ಥಳೀಯ ಆಸ್ಪತ್ರೆಯ ಅಕ್ಕಪಕ್ಕದವರನ್ನು ಕೇಳಿದರೆ "ಈ ಆಸ್ಪತ್ರೆಗೆ ನಾವ್ಯಾರೂ ಹೋಗುವುದಿಲ್ಲ. ಜನರೂ ಬರುವುದಿಲ್ಲ. ಡಾಕ್ಟರ್ ಮಾತ್ರ ಬರುತ್ತಾರೆ, ಹೋಗುತ್ತಾರೆ ಎನ್ನುತ್ತಾರೆ.
ನಮಗೆ ರವೀಂದ್ರ ನಗರದ ಆಯುಷ್ಮಾನ್ ಆರೋಗ್ಯ ಕೇಂದ್ರ ಮುಚ್ಚಬಾರದೆಂದು ಸ್ಥಳೀಯರು ಮನವಿ ಸಲ್ಲಿಸಿದ್ದಾರೆ. ಇದನ್ನು ನಾವು ಸರ್ಕಾರಕ್ಕೆ ಕಳಿಸಬಹುದೇ ವಿನಃ ಯಾವುದೇ ಕ್ರಮ ಕೈಗೊಳ್ಳುವುದು ನಮ್ಮ ವ್ಯಾಪ್ತಿಯಲ್ಲಿ ಇಲ್ಲ. ಸರ್ಕಾರದ ನಿರ್ದೇಶನದಂತೆ ನಾವು ಕಾರ್ಯ ನಿರ್ವಹಿಸಬೇಕಾಗುತ್ತದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ. ನರೇಂದ್ರ ಪವಾರ ತಿಳಿಸಿದ್ದಾರೆ.