ರು.30 ಲಕ್ಷ ಮೊತ್ತದ ಹತ್ತಿ, ಸೂರ್ಯಕಾಂತಿ ಬೀಜ ಮಾರಾಟ ಮಾಡದಂತೆ ಆದೇಶ

| Published : Jun 15 2024, 01:02 AM IST

ರು.30 ಲಕ್ಷ ಮೊತ್ತದ ಹತ್ತಿ, ಸೂರ್ಯಕಾಂತಿ ಬೀಜ ಮಾರಾಟ ಮಾಡದಂತೆ ಆದೇಶ
Share this Article
  • FB
  • TW
  • Linkdin
  • Email

ಸಾರಾಂಶ

ಅಗ್ರೋಗಳಲ್ಲಿ ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ಬಂದಿದ್ದು ದಾಸ್ತಾನು ಬಂದಿರುವ ಪೈಕಿ ನಿಯಮ ಉಲ್ಲಂಘಿಸಿ ಸಂಗ್ರಹಿಸಿರುವ ₹30,35,853 ಮೌಲ್ಯದ ಹತ್ತಿ, ಸೂರ್ಯಕಾಂತಿ ಬೀಜಗಳನ್ನು ರೈತರಿಗೆ ಮಾರಾಟ ಮಾಡದಂತೆ ಕೃಷಿ ಇಲಾಖೆ ಜಿಲ್ಲಾ ಜಂಟಿ ನಿರ್ದೇಶಕರಾದ ಸಮದ್ ಪಟೇಲ ಆದೇಶಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಚವಡಾಪುರ

ಮುಂಗಾರು ಬಿತ್ತನೆಗೆ ಎಲ್ಲಾ ಅಗ್ರೋಗಳಲ್ಲಿ ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ಬಂದಿದ್ದು ದಾಸ್ತಾನು ಬಂದಿರುವ ಪೈಕಿ ನಿಯಮ ಉಲ್ಲಂಘಿಸಿ ಸಂಗ್ರಹಿಸಿರುವ ₹30,35,853 ಮೌಲ್ಯದ ಹತ್ತಿ, ಸೂರ್ಯಕಾಂತಿ ಬೀಜಗಳನ್ನು ರೈತರಿಗೆ ಮಾರಾಟ ಮಾಡದಂತೆ ಕೃಷಿ ಇಲಾಖೆ ಜಿಲ್ಲಾ ಜಂಟಿ ನಿರ್ದೇಶಕರಾದ ಸಮದ್ ಪಟೇಲ ಆದೇಶಿಸಿದ್ದಾರೆ.

ಅಫಜಲ್ಪುರ ಪಟ್ಟಣದಲ್ಲಿನ ಪ್ರಮುಖ ಅಗ್ರೋಗಳ ಮೇಲೆ ಅಧಿಕಾರಿಗಳ ತಂಡದೊಂದಿಗೆ ದಿಢೀರ್‌ ದಾಳಿ ನಡೆಸಿದ ಅವರು, ಅಗ್ರೋಗಳಲ್ಲಿನ ದಾಖಲಾತಿಗಳು, ಲೈಸನ್ಸ್ ನವಿಕರಣ, ಬೀಜಗಳ ದಾಸ್ತಾನು, ರಸಗೊಬ್ಬರದ ದಾಸ್ತಾನು, ದರ ಪಟ್ಟಿ ಎಲ್ಲವನ್ನು ಪರಿಶೀಲಿಸಿ ಮಾತನಾಡಿದ ಅವರು ಎಲ್ಲಾ ಬೀಜ, ರಸಗೊಬ್ಬರ ಮಾರಾಟ ಮಳಿಗೆಗಳು, ಅಗ್ರೋಗಳಲ್ಲಿ ಸರ್ಕಾರದ ದರಪಟ್ಟಿಯ ಪ್ರಕಾರವೇ ಬೀಜ, ಗೊಬ್ಬರ ಮಾರಾಟ ಮಾಡಬೇಕು. ಆದರೆ ಅನೇಕ ಕಡೆಗಳಲ್ಲಿ ಸರ್ಕಾರದ ದರಪಟ್ಟಿಗಿಂತಲೂ ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತಿದೆ ಎನ್ನುವ ಆರೋಪಗಳು ಕೇಳಿ ಬಂದಿವೆ. ಅದಕ್ಕೆ ಪುಷ್ಟಿ ನೀಡುವಂತೆ ಅಫಜಲ್ಪುರದ ಅಗ್ರೋಗಳಲ್ಲಿ ಕಂಡು ಬರುತ್ತಿದೆ. ಇನ್ನೂ ಕೆಲವು ಕಡೆಗಳಲ್ಲಿ ರೈತರು ಡಿಎಪಿ ಖರೀದಿ ಮಾಡಿದಾಗ ಅದಕ್ಕೆ ಜೊತೆಯಾಗಿ ಇನ್ನೊಂದು ಗೊಬ್ಬರ ಮಾರಾಟ ಮಾಡುವಂತ ಪ್ರಕರಣಗಳು ನಡೆದಿವೆ. ಇದರಿಂದ ರೈತರಿಗೆ ಆರ್ಥಿಕ ಹೊರೆಯಾಗಲಿದೆ. ರೈತರು ಏನು ಬೇಕೆನ್ನುತ್ತಾರೋ ಅದನ್ನೇ ಮಾರಾಟ ಮಾಡಿ. ರೈತರು ಏನನ್ನು ಖರೀದಿ ಮಾಡುತ್ತಾರೋ ಅದಕ್ಕೆ ರಶೀದಿ ನೀಡಿ ಇನ್ನೊಂದು ಸಲ ದೂರು ಬಂದರೆ ಅಗ್ರೋಗಳ ಲೈಸನ್ಸ್ ರದ್ದುಗೊಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಉಪ ಕೃಷಿ ನಿರ್ದೇಶಕರಾದ ಸೋಮಶೇಖರ ಬಿರಾದಾರ, ಅಫಲ್ಪುರ ಸಹಾಯಕ ಕೃಷಿ ನಿರ್ದೇಶಕರಾದ ಎಸ್.ಎಚ್ ಗಡಗಿಮನಿ ಮಾತನಾಡಿ ರಸಗೊಬ್ಬರ ಮಾರಾಟ, ಬಿತ್ತನೆ ಬೀಜಗಳ ಮಾರಾಟದ ದರಪಟ್ಟಿ ಅಳವಡಿಸದೇ ಇರುವುದು, ರಸಗೊಬ್ಬರವನ್ನು ಒಪಿಎಸ್ ಮಶಿನ್ ಮೂಲಕವಿತರಣೆ ಮಾಡುತ್ತಿಲ್ಲ, ನೊಂದಣಿ ದೃಢಿಕರಣ, ಪರವಾನಗಿ ಪತ್ರವಿಲ್ಲದೆ ರಸಗೊಬ್ಬರಗಳ ಮಾರಾಟ ಮಾಡುವುದು, ಪ್ರತಿ ತಿಂಗಳ 5 ನೇ ತಾರಿಖಿನ ಒಳಗಾಗಿ ದಾಸ್ತಾನು ಮಾರಾಟ, ಉಳಿಕೆ ವಿವರವನ್ನು ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ತಿಳಿಸಬೇಕಾಗಿತ್ತು ತಿಳಿಸಿಲ್ಲ. ರಸಗೊಬ್ಬರಗಳ ಮಾರಾಟವನ್ನು ಒಂದಕ್ಕಿಂತ ಹೆಚ್ಚಿನ ಸ್ಥಳಗಳಲ್ಲಿ ಮಾರಾಟ ಮಾಡುತ್ತಿದ್ದರೂ ಸಹ ನಿಗದಿತ ಶುಲ್ಕ ತುಂಬಿ ನೊಂದಣಿ ದೃಢಿಕರಣ ಪತ್ರದಲ್ಲಿ ತಿದ್ದುಪಡಿ ಮಾಡಿಸಿರುವುದಿಲ್ಲ. ಚಿಲ್ಲರೆ ಮತ್ತು ಸಗಟು ಮಾರಾಟ ಪರವಾನಿಗೆ ಪಡೆದಿದ್ದು ಈ ಎರಡು ಬಗೆಯ ವ್ಯವಹಾರದ ಬಗ್ಗೆ ಪ್ರತ್ಯೇಕ ಲೆಕ್ಕ ಪತ್ರಗಳನ್ನು ಇಟ್ಟಿಲ್ಲ ಹೀಗಾಗಿ ನಾಲ್ಕು ಅಗ್ರೋಗಳ ಮೇಲೆ ಕಾರಣ ಕೇಳುವ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕೃಷಿ ಅಧಿಕಾರಿಗಳಾದ ಆನಂದ ಅವರಾದ, ಧರ್ಮಣ್ಣ ಮಲ್ಲಾಬಾದಿ, ಚನ್ನಬಸಯ್ಯ ಗುರುಮಠ, ಮಡಿವಾಳಪ್ಪ ಹೋಳ್ಕರ ಸೇರಿದಂತೆ ಅನೇಕರು ಇದ್ದರು.