ಪಿಡಿಒ ಅವ್ಯವಹಾರ ತನಿಖೆಗೆ ಆದೇಶಿಸಿ: ಶೇಷಗಿರಿಹಳ್ಳಿ ಶಿವಣ್ಣ

| Published : Mar 28 2024, 12:50 AM IST

ಪಿಡಿಒ ಅವ್ಯವಹಾರ ತನಿಖೆಗೆ ಆದೇಶಿಸಿ: ಶೇಷಗಿರಿಹಳ್ಳಿ ಶಿವಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ರಾಮನಗರ: ತೆರಿಗೆ ಹಣ ದುರುಪಯೋಗ, ಕುಡಿಯುವ ನೀರು ಸಾಮಗ್ರಿ ಖರೀದಿಯಲ್ಲಿ ಅಕ್ರಮ, ಲೇಔಟ್ ಮಾಡದ ಜಾಗಕ್ಕೆ ಇ-ಖಾತೆ ನೀಡುವ ಮೂಲಕ ಮಂಚನಾಯಕನಹಳ್ಳಿ ಗ್ರಾಪಂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೋಟ್ಯಂತರ ರು. ಅವ್ಯವಹಾರ ನಡೆಸಿದ್ದು, ಈ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕು ಎಂದು ಗ್ರಾಪಂ ಮಾಜಿ ಸದಸ್ಯ ಶೇಷಗಿರಿಹಳ್ಳಿ ಶಿವಣ್ಣ ಒತ್ತಾಯಿಸಿದರು.

ರಾಮನಗರ: ತೆರಿಗೆ ಹಣ ದುರುಪಯೋಗ, ಕುಡಿಯುವ ನೀರು ಸಾಮಗ್ರಿ ಖರೀದಿಯಲ್ಲಿ ಅಕ್ರಮ, ಲೇಔಟ್ ಮಾಡದ ಜಾಗಕ್ಕೆ ಇ-ಖಾತೆ ನೀಡುವ ಮೂಲಕ ಮಂಚನಾಯಕನಹಳ್ಳಿ ಗ್ರಾಪಂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೋಟ್ಯಂತರ ರು. ಅವ್ಯವಹಾರ ನಡೆಸಿದ್ದು, ಈ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕು ಎಂದು ಗ್ರಾಪಂ ಮಾಜಿ ಸದಸ್ಯ ಶೇಷಗಿರಿಹಳ್ಳಿ ಶಿವಣ್ಣ ಒತ್ತಾಯಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಚನಾಯಕನಹಳ್ಳಿ ಗ್ರಾಪಂ ಪಿಡಿಒ ಯತೀಶ್ ಚಂದ್ರ ನಡೆಸಿರುವ ಅಕ್ರಮಗಳ ಕುರಿತು ತಾಪಂ ಇಒ ಹಾಗೂ ಜಿಪಂ ಸಿಇಒಗಳಿಗೆ ದೂರು ಸಲ್ಲಿಸಿದ್ದರೂ ಕ್ರಮ ವಹಿಸಿಲ್ಲ. ಪ್ರಕರಣವನ್ನು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಗಂಭೀರವಾಗಿ ಪರಿಗಣಿಸಿ ಉನ್ನತ ಮಟ್ಟದ ತನಿಖೆಗೆ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು.

ಗ್ರಾಪಂನಲ್ಲಿ ವಾರ್ಷಿಕ 50ರಿಂದ 60 ಕೋಟಿ ರು. ತೆರಿಗೆ ಹಣ ವಸೂಲಿ ಆಗುತ್ತಿದೆ. 2023ರ ಏಪ್ರಿಲ್ 1ರಿಂದ ಇಲ್ಲಿವರೆಗೆ ವಸೂಲಿ ಮಾಡಿರುವ ಕೋಟ್ಯಂತರ ರುಪಾಯಿ ತೆರಿಗೆ ಹಣ ಬ್ಯಾಂಕಿನ ಖಾತೆಗೆ ಜಮಾ ಮಾಡದೆ ಮೂಲಗಳ ಪ್ರಕಾರ ಪಿಡಿಒ 1.60 ಕೋಟಿ ಸ್ವಂತಕ್ಕೆ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದರು.

ಕುಡಿಯುವ ನೀರು ಸಾಮಗ್ರಿ, ಪಂಪು ಮೋಟಾರ್, ಪೈಪ್, ಬೋರ್ ವೆಲ್ ಗೆ ಸಂಬಂಧಿಸಿದ ಸಾಮಗ್ರಿಗಳು, ಎಲ್‌ಇಡಿ ಲೆಡ್ ವಿದ್ಯುತ್ ದೀಪ, ಹೈಮಾಸ್ಕ್ ಲೈಟ್ ಖರೀದಿಗಾಗಿ ಸದಸ್ಯರ ಗಮನಕ್ಕೂ ತರದೆ ಪ್ರತಿ ತಿಂಗಳು 15ರಿಂದ 20 ಲಕ್ಷ ಡ್ರಾ ಮಾಡಿದ್ದಾರೆ ಎಂದು ದೂರಿದರು.

ಪಂಚಾಯಿತಿ ವ್ಯಾಪ್ತಿಯ ಖಲೀಲ್ ಲೇಔಟ್ ನಲ್ಲಿ 1ರಿಂದ 296 ಖಾತೆಗಳನ್ನು ಸರ್ಕಾರದ ಸುತ್ತೋಲೆ 14-06-2013ರ ಸುತ್ತೋಲೆಯಂತೆ ನೋಂದಣಿಯಾಗದಿರುವ ಖಾತೆ ನೀಡುವ ಬದಲು ಅಧಿಕಾರ ದುರ್ಬಳಕೆ ಮಾಡಿಕೊಂಡು ಸಕ್ಷಮ ಪ್ರಾಧಿಕಾರದ ಅನುಮೋದನೆ ಪಡೆಯದೆ ನೋಂದಣಿಯಾಗುವ 11 - ಬಿ ಪ್ರಮಾಣ ಪತ್ರ ನೀಡಿದ್ದಾರೆ. ಕೆರೆಯ ಬಫರ್ ಜೋನ್ ಹಾಗೂ ಹಳ್ಳದ ಜಾಗ, ಎ - ಖರಾಬ್ , ಬಿ - ಖರಾಬ್ ಸ್ಥಳಕ್ಕೂ ಖಾತೆ ನೀಡಲಾಗಿದೆ ಎಂದು ಶೇಷಗಿರಿಹಳ್ಳಿ ಶಿವಣ್ಣ ದಾಖಲೆಗಳ ಸಮೇತ ವಿವರಿಸಿದರು.

ಸಾಮಾಜಿಕ ಕಾರ್ಯಕರ್ತ ದೇವರಾಜ್ ಮಾತನಾಡಿ, ಭೀಮೇನಹಳ್ಳಿ ಗ್ರಾಮದ ಸರ್ವೆ ನಂಬರ್ 16-1 ಖಾತೆ ನಂ.87ರ ಸ್ವತ್ತಿಗೆ ಹಾಗೂ ಸರ್ವೆ ನಂ7-2 ಖಾತೆ ನಂ.36-1 ರಿಂದ 36-21ರವರೆಗಿನ ಖಾತೆಗಳಲ್ಲಿ ಖಾತಾ ಸಂಖ್ಯೆ 36-20 ದೇವಸ್ಥಾನ, ಆಸ್ಪತ್ರೆ, ಖಾತಾ ಸಂಖ್ಯೆ 36-21ರ ನಿವೇಶನ ಕಮ್ಯುನಿಟಿ ಹಾಲ್ ಗೆ ಮೀಸಲಿರಿಸಿರುವ ಗ್ರಾಪಂ ಸ್ವತ್ತಿನ ಖಾತೆಯನ್ನು ಮತ್ತು ಮಾಲೀಕರ ಹೆಸರಿನಲ್ಲಿರುವ ಖಾತೆಯನ್ನು ರದ್ದು ಪಡಿಸಿ ಶ್ರೀ ಕೃಷ್ಣರಾಜುರವರ ಹೆಸರಿನ ಇ - ಖಾತೆ ಮಾಡಿ ಇ ಸ್ವತ್ತುವಿನ ಸುತ್ತೋಲೆ ದಿನಾಂಕ 14-6-2013ರ ಸುತ್ತೋಲೆಯಂತೆ ನೋಂದಣಿಯಾಗದಿರುವ ಖಾತೆ ನೀಡುವ ಬದಲು ಪಿಡಿಒ ಯತೀಶ್ ಚಂದ್ರ ಅಧಿಕಾರ ದುರುಪಯೋಗ ಪಡಿಸಿಕೊಂಡು ಸಕ್ಷಮ ಪ್ರಾಧಿಕಾರದ ಅನುಮೋದನೆ ಪಡೆಯದೇ ನೋಂದಣಿಯಾಗುವ 11 - ಬಿ ಪ್ರಮಾಣ ಪತ್ರ ನೀಡಿದ್ದಾರೆ ಎಂದು ದೂರಿದರು.

ಲಾಸ್ಯ ಬಡಾವಣೆಯಲ್ಲಿ ಬಿಎಂಐಸಿಎಪಿಎ ಅನುಮೋದಿತ ನಕ್ಷೆಗಿಂತ 1 ಎಕರೆ 20 ಗುಂಟೆ ಹೆಚ್ಚುವರಿ ವಿಸ್ತೀರ್ಣ ಸೇರಿಸಿ ಖಾತೆ ಮಾಡಿಕೊಟ್ಟಿದ್ದಾರೆ. ಅಲ್ಲದೆ, ಟೆಂಡರ್ ಕರೆಯದೇ ಸಿವಿಲ್ ಕಾಮಗಾರಿ ನಿರ್ವಹಿಸಲಾಗಿದೆ. ಈ ರೀತಿ ಪಿಡಿಒರವರು ಪಂಚಾಯಿತಿಯಲ್ಲಿ ಕೋಟ್ಯಂತರ ರು. ಅಕ್ರಮ ಎಸಗಿದ್ರು, ಉನ್ನತ ಮಟ್ಟದ ತನಿಖೆ ನಡೆದಲ್ಲಿ ಕನಿಷ್ಠ 25 ಕೋಟಿ ರು. ಸಾರ್ವಜನಿಕರ ಹಣ ಸರ್ಕಾರದ ಬೊಕ್ಕಸ ಸೇರಲಿದೆ ಎಂದು ಹೇಳಿದರು.

ಗ್ರಾಪಂ ಸದಸ್ಯೆ ವೀಣಾ, ಮುಖಂಡರಾದ ನರಸಿಂಹಯ್ಯ, ಸಿ.ಎಚ್.ಪುಟ್ಟಯ್ಯ, ವೆಂಕಟೇಶ್ , ರಾಧಾಕೃಷ್ಣ, ರಮ್ಯಾ ಧನಂಜಯ್ಯ, ಗೋವಿಂದಪ್ಪ, ಯು.ನರಸಿಂಹಯ್ಯ ಇತರರಿದ್ದರು.

ಕೋಟ್ ..............

ಮಂಚನಾಯಕನಹಳ್ಳಿ ಪಿಡಿಒ ಯತೀಶ್ ಚಂದ್ರ ತಾಪಂ, ಜಿಪಂ ಎಂಜಿನಿಯರ್ ಗಳೊಂದಿಗೆ ಶಾಮಿಲಾಗಿ ಪ್ರತಿ ಗ್ರಾಮವಾರು ಕೊಳವೆ ಬಾವಿ, ಬೀದಿ ದೀಪ, ಮೋಟಾರು ಪಂಪ್ ಹೆಸರಿನಲ್ಲಿ 5ರಿಂದ 6 ಲಕ್ಷ ರುಪಾಯಿ ಡ್ರಾ ಮಾಡಿದ್ದಾರೆ. ಈ ರೀತಿ ಪ್ರತಿ ತಿಂಗಳು 20ರಿಂದ 30 ಲಕ್ಷ ರು. ಡ್ರಾ ಮಾಡಿ ಅಕ್ರಮ ಎಸಗಿದ್ದಾರೆ. ಈ ವಿಚಾರ ಗ್ರಾಪಂ ಸಾಮಾನ್ಯಸಭೆಯಲ್ಲಿ ಪ್ರಸ್ತಾಪವೇ ಆಗದಂತೆ ನೋಡಿಕೊಳ್ಳುತ್ತಾರೆ.ಯಾರಾದರು ಪ್ರಶ್ನಿಸಿದರೆ ಅವರಿಗೆ ಧಮಕಿ ಹಾಕುತ್ತಾರೆ. ಭ್ರಷ್ಟ ಪಿಡಿಒ ವಿರುದ್ಧ ಸರ್ಕಾರ ಕ್ರಮ ವಹಿಸಬೇಕು.

-ನರಸಿಂಹಯ್ಯ, ಕಾಂಗ್ರೆಸ್ ಮುಖಂಡರು

27ಕೆಆರ್ ಎಂಎನ್ 1.ಜೆಪಿಜಿ

ಗ್ರಾಪಂ ಮಾಜಿ ಸದಸ್ಯ ಶೇಷಗಿರಿಹಳ್ಳಿ ಶಿವಣ್ಣ ಮಂಚನಾಯಕನಹಳ್ಳಿ ಗ್ರಾಪಂನಲ್ಲಿ ಪಿಡಿಒ ಯತೀಶ್ ಚಂದ್ರ ನಡೆಸಿರುವ ಅಕ್ರಮಗಳ ದಾಖಲೆ ಪ್ರದರ್ಶಿಸಿದರು.