ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ವಾಣಿಜ್ಯ ಮಳಿಗೆಗಳಿಂದ ಕಸ ಸಂಗ್ರಹಣೆಯಲ್ಲಿ ನಡೆಯುತ್ತಿರುವ ಹಗರಣವನ್ನು ಪಾಲಿಕೆಯ ಉಪ ಮೇಯರ್ ವಾಣಿ ಜೋಶಿ ಅವರು ಆರೋಗ್ಯ ಸ್ಥಾಯಿ ಸಮಿತಿ ಸಭೆಯಲ್ಲಿ ಸಾಕ್ಷಾಧಾರದೊಂದಿಗೆ ಬಹಿರಂಗಪಡಿಸಿದರು.ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀಶೈಲ ಕಾಂಬಳೆ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಈ ಬಗ್ಗೆ ಗಂಭೀರ ಚರ್ಚೆ ನಡೆದು ತನಿಖೆಗೆ ಆದೇಶ ಮಾಡಲಾಯಿತು. ನಗರ ಸ್ವಚ್ಛತಾ ಗುತ್ತಿಗೆದಾರರು ಹಾಗೂ ಕೆಲ ಆರೋಗ್ಯ ಸಿಬ್ಬಂದಿಯವರು ಈ ಹಗರಣದಲ್ಲಿ ಭಾಗಿಯಾಗಿದ್ದಾರೆಂಬ ಮಾತುಗಳು ಕೇಳಿ ಬಂದವು.
ವ್ಯಾಪಾರ ಪರವಾನಗಿ ನೀಡುವ ಸಂದರ್ಭದಲ್ಲಿ ಉದ್ಯಮಿಗಳಿಂದ ಘನತ್ಯಾಜ್ಯ ನಿರ್ವಹಣಾ ಕರ ವಸೂಲಿ ಮಾಡಲಾಗುತ್ತಿದೆ. ಮಹಾನಗರ ಪಾಲಿಕೆಯ ಸ್ವಚ್ಛತಾ ಗುತ್ತಿಗೆದಾರರು, ಆರೋಗ್ಯ ನಿರೀಕ್ಷಕರು ಹಾಗೂ ಮೇಲ್ವಿಚಾರಕರು ಕರವನ್ನು ತಮ್ಮಿಗಿಷ್ಟದಂತೆ ವಸೂಲಿ ಮಾಡುತ್ತಿದ್ದಾರೆ ಎಂದು ಉಪಮೇಯರ್ ಆರೋಪ ಮಾಡಿದರು.ಕಳೆದ ಹಲವು ವರ್ಷಗಳಿಂದ ಈ ರೀತಿ ಶುಲ್ಕವನ್ನು ಪರಸ್ಪರ ವಸೂಲಿ ಮಾಡಲಾಗುತ್ತಿದೆ. ಆದರೆ ಇದರಲ್ಲಿನ ಒಂದು ರುಪಾಯಿ ಕೂಡ ಮಹಾನಗರ ಪಾಲಿಕೆಗೆ ಬಂದಿಲ್ಲ. ಈ ಶುಲ್ಕ ವಸೂಲಿ ಮಾಡಿದ ನಂತರ ಪಾಲಿಕೆಯವರು ರಶೀದಿ ನೀಡಬೇಕು ಎಂಬುದು ನಿಯಮವಾಗಿದೆ. ಆದರೆ ಇಲ್ಲಿ ನಕಲಿ ರಶೀದಿಗಳನ್ನು ಗುತ್ತಿಗೆದಾರರ ಹೆಸರಲ್ಲಿ ನೀಡಲಾಗುತ್ತಿದೆ ಎಂದ ಅವರು, ಸಭೆಯಲ್ಲಿ ಗುತ್ತಿಗೆದಾರರ ಹೆಸರಲ್ಲಿದ್ದ ರಶೀದಿ ತೋರಿಸಿದರು.
ಈ ಆರೋಪಕ್ಕೆ ಸಂಬಂಧಿಸಿದಂತೆ ಉತ್ತರಿಸಿದ ಆರೋಗ್ಯಾಧಿಕಾರಿ ಡಾ.ಸಂಜೀವ ನಾಂದ್ರೆ ಅವರೂ ಸಹ ಗುತ್ತಿಗೆದಾರರು ಹಾಗೂ ಆರೋಗ್ಯ ಸಿಬ್ಬಂದಿಯಿಂದ ಹಣ ವಸೂಲಿ ಮಾಡುತ್ತಿದ್ದಾರೆಂದು ಸ್ಪಷ್ಟಪಡಿಸಿದರು. ನಗರದ ಹಣ್ಣು ಮಾರ್ಕೆಟ್‌ನಿಂದ ತಿಂಗಳಿಗೆ ₹9 ಸಾವಿರವನ್ನು ಒಬ್ಬ ಗುತ್ತಿಗೆದಾರನು ವಸೂಲಿ ಮಾಡುತ್ತಿದ್ದಾನೆ ಎಂಬ ಮಾಹಿತಿಯನ್ನೂ ಡಾ.ನಾಂದ್ರೆ ನೀಡಿದರು. ಕಳೆದ ಹಲವು ವರ್ಷಗಳಿಂದ ಈ ರೀತಿ ಪರಸ್ಪರವಾಗಿ ಹಣ ವಸೂಲಿ ಮಾಡಲಾಗುತ್ತಿದೆ. ಈ ಕುರಿತು ಖುದ್ದು ಆಯುಕ್ತರ ಗಮನಕ್ಕೆ ತಂದಿದ್ದಾಗಿ ಅವರು ಸಭೆಯಲ್ಲಿ ಸ್ಪಷ್ಟಪಡಿಸಿದರು.ಈ ಹಿನ್ನೆಲೆಯಲ್ಲಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ ವ್ಯಾಪಾರ ಪರವಾನಗಿ ನೀಡುವಾಗ ಈ ಶುಲ್ಕವನ್ನು ವಸೂಲಿ ಮಾಡುವಂತೆ ಆಯುಕ್ತರು ಆದೇಶ ಮಾಡಿದ್ದಾರೆಂದರು. ಆದರೂ ಸಹ ಕಸ ಸಂಗ್ರಹಣೆ ಅನಧಿಕೃತ ಶುಲ್ಕ ವಸೂಲಿಗೆ ಕ್ರಮ ಜರುಗಿಸಬೇಕು ಎಂದರು. ಇದರ ಬಗ್ಗೆ ಸಂಪೂರ್ಣ ತನಿಖೆ ನಡೆಸುವಂತೆ ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀಶೈಲ ಕಾಂಬಳೆ ಸೂಚನೆ ನೀಡಿದರು. ಅಷ್ಟೇ ಅಲ್ಲದೇ ಸಾಮಾನ್ಯ ಸಭೆಯಲ್ಲಿ ಕೂಡ ಈ ವಿಷಯದ ಬಗ್ಗೆ ಚರ್ಚೆ ನಡೆಸುವ ನಿರ್ಧಾರವನ್ನು ಸಭೆಯಲ್ಲಿ ತೆಗೆದುಕೊಳ್ಳಲಾಯಿತು. ಮೇಯರ್ ಮಂಗೇಶ ಪವಾರ್ ಕೂಡ ಈ ಸಭೆಯಲ್ಲಿ ಹಾಜರಿದ್ದರು. ಅವರ ಎದುರಲ್ಲೇ ಈ ಗಂಭೀರ ವಿಷಯದ ಬಗ್ಗೆ ಚರ್ಚೆ ನಡೆಯಿತು.
ನಗರದ ಪ್ರತಿಯೊಂದು ವಾರ್ಡ್‌ನಲ್ಲಿ ಎಷ್ಟು ವಾಣಿಜ್ಯ ಮಳಿಗೆಗಳಿವೆ ಎನ್ನುವ ಮಾಹಿತಿ ನೀಡುವಂತೆ ಮೇಯರ್ ಮಂಗೇಶ ಪವಾರ ಸೂಚನೆ ನೀಡಿದರು.ನಗರಸೇವಕ ರಾಜು ಭಾತಖಾಂಡೆ ಮಾತನಾಡಿ, ಮಹಾನಗರ ಪಾಲಿಕೆಯಲ್ಲಿ 17 ಆರೋಗ್ಯ ನಿರೀಕ್ಷಕರು ಇದ್ದು, ಅವರಿಗೆ ವಾರ್ಡಗಳ ಹೊಣೆಗಾರಿಕೆ ಸರಿಯಾಗಿ ಹಂಚಿಕೆಯಾಗಬೇಕು ಎಂದರು. ಫುಟಪಾತ್ ಅತಿಕ್ರಮಣ ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಆರೋಗ್ಯ ಇಲಾಖೆಗೆ ಇದೇ ಸಂದರ್ಭದಲ್ಲಿ ಸೂಚಿಸಲಾಯಿತು.